Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಗೇಂದ್ರ ರಾಜೀನಾಮೆ ಅನಿವಾರ್ಯವಾಗಿತ್ತು : ಕೇಂದ್ರ ಸಚಿವ ವಿ.ಸೋಮಣ್ಣ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 30 : ಇಲಾಖೆಯಲ್ಲಿ ಲೋಪವಾಗಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಅನಿವಾರ್ಯ ವಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಮಂತ್ರಿಯಾಗಿದ್ದು ತಪ್ಪು ಎಂಬುದು ಅವರಿಗೆ ಮನವರಿಕೆ ಆಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಗೇಂದ್ರ ಇನ್ನೂ ಆರೋಪಿಯೇ ಹೊರತು ಅಪರಾಧಿಯಲ್ಲ. ಆದರೆ, ತನಿಖೆ ಪೂರ್ಣಗೊಂಡು ಆರೋಪಮುಕ್ತರಾಗುವವರೆಗೆ ಹೊರಗಿರುವುದು ಸಮಂಜಸ ಎಂದ ಅವರು. ನಾಗೇಂದ್ರ ಪರವಾಗಿ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡರು ನೀಡುತ್ತಿರುವ ಹೇಳಿಕೆ ಬಗ್ಗೆ ಚಿತ್ರದುರ್ಗದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಯಾರು ಯಾರನ್ನು ರಕ್ಷಿಸುತ್ತಾರೆ ಎಂಬುದಕ್ಕಿಂತ ದೇಶ, ಕಾನೂನು ಹಾಗೂ ಸಂವಿಧಾನ ದೊಡ್ಡದು. ರಾಜೀನಾಮೆಯನ್ನು ಮುಖ್ಯಮಂತ್ರಿ ಅಂಗೀಕರಿಸುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟಿದ್ದು. ಅಂಗೀಕಾರ ಮಾಡದಿದ್ದರೆ ಎನ್‍ಡಿಎ ಮೈತ್ರಿಕೂಟದಿಂದ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದ್ದಕ್ಕೆ ಡಿ. ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ರಾಹುಲ್ ಗಾಂಧಿ ಮಾಡಿರುವ ಟ್ವಿಟ್ ಕುರಿತು ವ್ಯಂಗ್ಯವಾಡಿದ ಸಚಿವರು, ‘ಡಿ.ಕೆ. ಶಿವಕುಮಾರ್ ಏಳು ಕೋಟಿ ಕನ್ನಡಿಗರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರೆ ಸಾಕು. ದೆಹಲಿ ಕಾಂಗ್ರೆಸ್ ನಾಯಕರಿಗೆ ತಳಮಟ್ಟದ ವಾಸ್ತವಾಂಶಗಳ ಅರಿವಿಲ್ಲದೆ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎಲ್ಲ ರಾಜ್ಯಗಳ ಸಮಾನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಿ ರಾಜ್ಯದ ಯೋಜನೆಗಳಿಗೆ ವೇಗ ನೀಡಲಾಗು ತ್ತಿದ್ದು, ಇದರಲ್ಲಿ ಯಾವುದೇ ರೀತಿಯ ತಪ್ಪು ನಿರ್ಧಾರಗಳಾಗಿಲ್ಲ ಎಂದು ಸ್ಪಷ್ಟಪಡಿಸಿ ವಿವಿಧ ರಾಜ್ಯಗಳಲ್ಲಿ ಇರುವ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತಿದ್ದಾರೆ.

ಪಾಲಕ್ಕಾಡ್ ಹಾಗೂ ಇತರ ಗಡಿ ಭಾಗಗಳಲ್ಲಿನ ರೈಲ್ವೇ ವ್ಯವಸ್ಥೆ ಮತ್ತು ಉದ್ಯೋಗಾವಕಾಶಗಳ ಕುರಿತು ಮಾತನಾಡುತ್ತಾ, ಸ್ಥಳೀಯ ರಾಜ್ಯದ ಜನರಿಗೆ ಮೊದಲ ಆದ್ಯತೆ ಸಿಗಬೇಕು ಎಂದು ಪ್ರತಿಪಾದಿಸಿ ಪ್ರತಿಯೊಂದು ಪ್ರಾಥಮಿಕ ಅಗತ್ಯತೆ ಹಾಗೂ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದ ಅವರು.ತುಮಕೂರು-ದಾವಣಗೆರೆ ನೂತನ ರೈಲು ಮಾರ್ಗದ ಕಾಮಗಾರಿಯನ್ನು ಮುಂಬರುವ ಲೋಕಸಭಾ ಚುನಾವಣೆಯೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಹಾಗೂ ರಾಜ್ಯ ಸರ್ಕಾರವೂ ಅಗತ್ಯ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ನಡೆಯುತ್ತಿರುವ ತನಿಖೆಗಳ ಬಗ್ಗೆ ಪ್ರತಿಕ್ರಿಯ ನೀಡುತ್ತಾ, ತನಿಖೆಗಳು ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಹೊರಬರಲಿದೆ. ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಂದು ವಿಚಾರವೂ ಸ್ಪಷ್ಟವಾಗಲಿದ್ದು, ವಿಚಾರಣೆಯ ಹಂತದಲ್ಲಿ ಅನಗತ್ಯ ಆರೋಪಗಳು ಸೂಕ್ತವಲ್ಲ ಎಂದು ತಿಳಿಸಿದ ಸಚಿವರು ಸಚಿವರು ಅಥವಾ ಜನಪ್ರತಿನಿಧಿಗಳನ್ನು ನಿರ್ದಿಷ್ಟ ಜಾತಿ ಅಥವಾ ವರ್ಗಕ್ಕೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ. ಅಧಿಕಾರಕ್ಕೆ ಬಂದವರು ಇಡೀ ರಾಜ್ಯದ ಜನತೆಗೆ ಸಚಿವರಾಗಿರುತ್ತಾರೆ ಹೊರತು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕಷ್ಟೇ ಅಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದು ಮತ್ತು ಕಾನೂನುಬದ್ಧವಾಗಿ ಪ್ರತಿಯೊಂದು ವಿಚಾರದಲ್ಲಿ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಜಿ;.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಅನಿತ್ ಕುಮಾರ್, ಡಾ.ಸಿದ್ದಾರ್ಥ, ಕೆ.ಟಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now