ಕರ್ನಾಟಕದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಇ-ಕೆವೈಸಿ ಹಾಗೂ ಪಡಿತರ ಅಕ್ಕಿ ವಿತರಣೆ ಏಕಕಾಲದಲ್ಲಿ ನಡೆಯುತ್ತಿದ್ದ ಪರಿಣಾಮ ಸರ್ವರ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೆಪ್ಟೆಂಬರ್ 1ರಿಂದ ಮತ್ತೆ ಇ-ಕೆವೈಸಿ ಪ್ರಕ್ರಿಯೆ ಆರಂಭಿಸಲು ಇಲಾಖೆ ನಿರ್ಧರಿಸಿದೆ.
ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಗೆ ಅಂತಿಮ ದಿನಾಂಕ ಸಮೀಪಿಸಿದೆ ಎಂಬ ಮಾಹಿತಿ ಹರಡಿದ್ದರಿಂದ ರಾಜ್ಯದಾದ್ಯಂತ ನ್ಯಾಯಬೆಲೆ ಅಂಗಡಿಗಳಿಗೆ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಈ ತಿಂಗಳು ಕೆಲವು ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ಅಕ್ಕಿಯನ್ನು ಒಟ್ಟಿಗೆ ವಿತರಿಸಲಾಗುತ್ತಿದ್ದು, ಪ್ರತಿ ವಿತರಣೆಗೆ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗಿತ್ತು. ಇದರ ಜತೆಗೆ ಇ-ಕೆವೈಸಿ ದೃಢೀಕರಣವೂ ನಡೆಯುತ್ತಿದ್ದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ತಾಂತ್ರಿಕ ಸಮಸ್ಯೆ ಎದುರಾಗಿದೆ.ಪರಿಣಾಮವಾಗಿ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ದೃಢೀಕರಣವಾಗದೆ, ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾರ್ವಜನಿಕರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಇಲಾಖೆ ಸದ್ಯಕ್ಕೆ ಇ-ಕೆವೈಸಿ ಪ್ರಕ್ರಿಯೆಯನ್ನು ಮುಂದೂಡಿದೆ. ಪ್ರಸ್ತುತ ತಿಂಗಳ ಪಡಿತರ ವಿತರಣೆಗೆ ಆದ್ಯತೆ ನೀಡಲಾಗಿದ್ದು, ಸೆಪ್ಟೆಂಬರ್ 1ರಿಂದ ಇ-ಕೆವೈಸಿ ಪ್ರಕ್ರಿಯೆ ಪುನರಾರಂಭವಾಗಲಿದೆ.
ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಸಮಯಾವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಪಡಿತರ ಪಡೆಯಲು ಬರುವ ಫಲಾನುಭವಿಗಳು ಇ-ಕೆವೈಸಿ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದೇ ವೇಳೆ ರಾಜ್ಯದಲ್ಲಿ ನಕಲಿ ಹಾಗೂ ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಲು ಆಹಾರ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.ಕಳೆದ ಆರು ತಿಂಗಳಿಂದ ನಿರಂತರವಾಗಿ ಪಡಿತರ ಪಡೆಯದ ಬಿಪಿಎಲ್ ಕಾರ್ಡ್ಗಳನ್ನು ಗುರುತಿಸಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಡ್ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಪಡೆಯುತ್ತಿಲ್ಲ ಎಂಬ ಮಾಹಿತಿ ಇಲಾಖೆಯ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಇ-ಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ ಇಂತಹ ಕಾರ್ಡ್ಗಳನ್ನು ಗುರುತಿಸಿ ಪರಿಶೀಲನೆ ನಡೆಸಲಾಗುತ್ತದೆ.ಆಹಾರ ಧಾನ್ಯಗಳ ಸೋರಿಕೆ ತಡೆಗಟ್ಟುವುದು, ನಕಲಿ ಹಾಗೂ ಅನರ್ಹ ಕಾರ್ಡ್ಗಳನ್ನು ಪತ್ತೆಹಚ್ಚುವುದು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.








