Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇತಿಹಾಸದ ಪುಟಗಳಿಗೆ ಮರುಜೀವ ನೀಡಿದ ಬಿ.ಎಲ್. ವೇಣು ಅವರ ‘ದುರ್ಗದ ಬೇಡರ್ದಂಗೆ’ : ಹಿರಿಯ ಪತ್ರಕರ್ತ ಬಸವರಾಜ ಮುದನೂರ್ ಅವರ ವಿಶೇಷ ಲೇಖನ

---Advertisement---

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದೇ ಇತಿಹಾಸದಲ್ಲಿ ದಾಖಲಾಗಿರುವ 1857ರ ಸಿಪಾಯಿ ದಂಗೆಗೂ ಎಂಟು ವರ್ಷಗಳ ಮುನ್ನವೇ, ಅಂದರೆ 1849ರಲ್ಲಿ ಚಿತ್ರದುರ್ಗದ ನೆಲದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಡಿ ಹೊತ್ತಿಕೊಂಡಿತ್ತು. ಇತಿಹಾಸದ ಕತ್ತಲೆಯಲ್ಲಿ ಮರೆಯಾಗಿದ್ದ ಏಳು ಜನ ಶ್ರೀಸಾಮಾನ್ಯ ಬೇಡ ಹುಡುಗರ ಅಪ್ರತಿಮ ಶೌರ್ಯದ ಕಥನವನ್ನು ಖ್ಯಾತ ಸಾಹಿತಿ ಬಿ. ಎಲ್. ವೇಣು ಅವರು ‘ದುರ್ಗದ ಬೇಡರ್ದಂಗೆ’ ಕಾದಂಬರಿಯ ಮೂಲಕ ಜನರ ಮುಂದಿಟ್ಟಿದ್ದಾರೆ.

ಸಾಹಿತಿ ಬಿ.ಎಲ್. ವೇಣು ಅವರ ದುರ್ಗದ ಬೇಡರ್ದಂಗೆ ಕಾದಂಬರಿ ಕುರಿತು ಹಿರಿಯ ಪತ್ರಕರ್ತ ಬಸವರಾಜ ಮುದನೂರ್ ಅವರು ಬರೆದಿರುವ ವಿಶೇಷ ಲೇಖನ ಸುದ್ದಿಒನ್ ಓದುಗರ ಮುಂದೆ.

ಅದು ಕರುನಾಡಿಗೆ ಕೊರೊನಾ ಆವರಿಸಿದ ಕರಕಷ್ಟದ ಕಾಲ. ನೆಚ್ಚಿನ ಕಾದಂಬರಿಕಾರರಾದ ಬಿ ಎಲ್ ವೇಣು ಅವರು ಕರೆ ಮಾಡಿದರು. ಮಾತನಾಡುತ್ತಲೇ ‘ದುರ್ಗದ ಬೇಡರ್ದಂಗೆ’ ಕಾದಂಬರಿ ಬಗ್ಗೆ ಪ್ರಸ್ತಾಪಿಸಿದರು. ವಾರ ಕಳೆದರೂ ದುರ್ಗದ ಬೇಡರ್ದಂಗೆಯ ಕಥನ ‘ಟೀಸರ್’ ವೀಕ್ಷಿಸಿದಂತೆ ಮನದಲ್ಲಿ ಕಾಡುತ್ತಲೇ ಇತ್ತು. ಅಷ್ಟರಲ್ಲೇ ‘ಚಿತ್ರಕವಿ’ ನಿಸರ್ಗ ಗೋವಿಂದರಾಜು ದುರ್ಗಕ್ಕೆ ಆಗಮಿಸಿದರು. ಮೊನ್ನೆ ವೇಣು ಸರ್ ಕರೆ ಮಾಡಿದ್ದರು ಅನ್ನುತ್ತಿದ್ದಂತೆ ‘ಅವರನ್ನು ಭೇಟಿ ಮಾಡಿ ತುಂಬಾ ದಿನಗಳಾಯಿತು ಹೋಗಿ ಬರೋಣ ನಡೆಯಿರಿ’ ಎಂದರು. ಸರಿ ಎಂದು ಮಾಸ್ಕ್ ಧರಿಸಿಕೊಂಡೇ ಮನೆಗೆ ಹೋದೆವು. ಆಗ ‘ದುರ್ಗದ ಬೇಡರ್ದಂಗೆ’ ಕಾದಂಬರಿಯಲ್ಲಿ ಬರುವ ಕೋಟೆ, ರಾಮಗಿರಿ ಬೆಟ್ಟ, ದೊಡ್ಡೇರಿ ಕಾಡು, ಮುರುಘಾಮಠದ ಬಗ್ಗೆ ಹೇಳುತ್ತ ‘ಆಯಾ ಸನ್ನಿವೇಶಕ್ಕೆ ತಕ್ಕಂತೆ ಪುಸ್ತಕದಲ್ಲಿ ಚಿತ್ರಗಳಿದ್ದರೆ ಚಂದ ಅಲ್ಲವೇ’ ಎಂದರು. ತಕ್ಷಣಕ್ಕೆ ನಿಸರ್ಗ ಗೋವಿಂದರಾಜು ‘ಫೋಟೋಗಳನ್ನು ತೆಗೆದುಕೊಡುತ್ತೇವೆ ಬಿಡಿ ಸರ್’ ಅಂದು ಬಿಟ್ಟರು.

ವೇಣು ಅವರ ಬಳಿ ಕುಳಿತು ಕೇಳಿದ ಕಥನ ‘ಟ್ರೈಲರ್’ ವೀಕ್ಷಿಸಿದ ಭಾವ ಸೃಷ್ಟಿಸಿ ತಲೆಯಲ್ಲಿ ಗಿರಕಿ ಹೊಡೆಯ ತೊಡಗಿತು. ಶನಿವಾರ, ಭಾನುವಾರ ನಾವು ಕಾರ್ಯಪ್ರವೃತ್ತರಾದೆವು. ಒಂದು ದಿನ ದೊಡ್ಡೇರಿ, ಮತ್ತೊಂದು ದಿನ ರಾಮಗಿರಿ ಬೆಟ್ಟ, ಮಗದೊಂದು ದಿನ ಏಳುಸುತ್ತಿನ ಕೋಟೆ, ಮುರುಘಾಮಠ ಸುತ್ತಾಟ. ಬೇಡರ್ದಂಗೆಯ ಕಥನ ತಲೆಯಲ್ಲಿ ಸುರುಳಿ ಬಿಚ್ಚುತ್ತಿದ್ದರೆ ಕಣ್ಮುಂದೆ ಚಿತ್ರಗಳು ಸರಿದಾಡುತ್ತಿದ್ದವು; ಓದಿದ ನೆಚ್ಚಿನ ಕಾದಂಬರಿಯ ಸಿನೆಮಾ ‘ಶೂಟಿಂಗ್’ ನೋಡಿದಂಥ ಖುಷಿ. ‘ದುರ್ಗದ ಬೇಡರ್ದಂಗೆ’ ಕಾದಂಬರಿ ಅದ್ಯಾವಾಗ ಪೂರ್ಣ ಅಚ್ಚಾಗಿ ಕೃತಿ ಕೈ ಸೇರುತ್ತದೋ ಎಂದು ತುದಿಗಾಲಲ್ಲಿ ಕಾಯುವಂತಾಯಿತು.

ಗೀತಾಂಜಲಿ ಪುಸ್ತಕ ಪ್ರಕಾಶನದ ಜಿಬಿಟಿ ಮೋಹನ್ ಕುಮಾರ್ ಅವರು ಸಕಾಲಕ್ಕೆ ಸೊಗಸಾಗಿ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಕೃತಿ ಕೈಸೇರಿದ್ದೇ ತಡ ‘ಫಸ್ಟ್ ಶೋ’ ನೋಡುವಂತೆ ಏಕರಾತ್ರಿಯಲ್ಲೇ ಇಡೀ ಕಾದಂಬರಿ ಓದಿ ಮುಗಿಸಿದೆನು. ಬೆಳ್ಳಂಬೆಳಗ್ಗೆ ವೇಣು ಅವರಿಗೆ ಕರೆ ಮಾಡಿ ಇಡೀ ಕಥನ ಒಪ್ಪಿಸಿದೆನು. ‘ಇದೇನು ಮಕ್ಕಳು ಪರೀಕ್ಷೆಗೆ ಕಂಠಪಾಠ ಮಾಡಿದ ರೀತಿ ಹೇಳ್ತಿಯಲ್ಲ ಬಸು’ ಅಂದು ನಕ್ಕರು.

ಕೋಟೆನಾಡಿನ ಪಾಳೇಗಾರರ ಶೌರ್ಯ, ಪರಾಕ್ರಮಗಳು ನಾಡಿನ ಇತಿಹಾಸದಲ್ಲಿ ಬಹು ಪ್ರಾಮುಖ್ಯತೆ ಪಡೆದುಕೊಂಡಿವೆ. ಚಿತ್ರದುರ್ಗದ ಜನರ ಪಾಲಿಗೆ ಪಾಳೇಗಾರರ ಹಿನ್ನೆಲೆಯು ಗೌರವ ಮತ್ತು ಗರ್ವದ ಸಂಕೇತವಾಗಿದೆ. ಗುಪ್ತಗಾಮಿನಿಯಾಗಿ ಸ್ವಾತಂತ್ರ್ಯ ಹೋರಾಟಕ್ಕಿಳಿದ ಏಳು ಜನ ಶ್ರೀಸಾಮಾನ್ಯ ಬೇಡರ ಹುಡುಗರು ಬ್ರಿಟಿಷರ ನಿದ್ದೆಗೆಡಿಸಿದ ಧೀರತ್ವದ ಕಥನ ಮಾತ್ರ ಮರೆತು ಹೋದ ದುರ್ಗದ ಇತಿಹಾಸವಾಗಿಯೇ ಉಳಿದು ಬಿಟ್ಟಿತ್ತು. ಅಂಥ ಅಪರೂಪದ ಇತಿಹಾಸದ ಪುಟಗಳನ್ನು ಕೆದಕಿದ ಖ್ಯಾತ ಕಾದಂಬರಿಕಾರ ಬಿ ಎಲ್ ವೇಣು ಅವರು ‘ದುರ್ಗದ ಬೇಡರ್ದಂಗೆ’ಗೆ ಕಾದಂಬರಿಯ ರೂಪ ನೀಡಿದ್ದು ನಾಡಿನ ಗಮನಸೆಳೆದಿದೆ.

1857ರಲ್ಲಿ ನಡೆದ ಸಿಪಾಯಿ ದಂಗೆಯೇ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂಬುದಾಗಿ ನಾವೆಲ್ಲ ಇತಿಹಾಸದುದ್ದಕ್ಕೂ ಓದಿಕೊಂಡು ಬಂದಿದ್ದೇವೆ. ಅದಕ್ಕೂ ಎಂಟು ವರ್ಷ ಮುನ್ನ 1849ರಲ್ಲೇ ಚಿತ್ರದುರ್ಗದಲ್ಲಿ ಏಳು ಜನ ಶ್ರೀಸಾಮಾನ್ಯ ಬೇಡರ ಹುಡುಗರು ‘ಖಾಸಾ ಪಡೆ’ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು. ಬೆಳೆದ ಫಸಲಿಗೆ ಮಾತ್ರ ಅಲ್ಲದೆ ಬಯಲುಸೀಮೆಯಲ್ಲಿ ಮಳೆಯಿಲ್ಲದೆ ಪಾಳು ಬಿದ್ದ ಭೂಮಿಗೂ ಬ್ರಿಟಿಷರು ಸುಂಕ ವಿಧಿಸಿದಾಗ ಯುವ ಪಡೆ ತಿರುಗಿ ಬೀಳುತ್ತದೆ. ಆಂಗ್ಲರ ಸೊಕ್ಕಡಗಿಸಿ ದೇಶ ಬಿಟ್ಟು ಓಡಿಸಲು ಟೊಂಕ ಕಟ್ಟಿ ನಿಂತು ವೀರ ಮರಣವನ್ನಪ್ಪುವ ದುಷ್ಟಾಂತ ಮನ ಕಲಕದಿರದು.

ಹಿರಿಯ ಸಂಶೋಧಕರಾದ ಪ್ರೊ.ಲಕ್ಷ್ಮಣ್ ತೆಲಗಾವಿ, ಡಾ.ಎನ್ ಎಸ್ ಮಹಾಂತೇಶ್ ಅವರುಗಳು ತಿಂಗಳಿಗೊಮ್ಮೆ ಚಿತ್ರದುರ್ಗ ಇತಿಹಾಸ ಕೂಟದಿಂದ ಉಪನ್ಯಾಸ, ಗೋಷ್ಠಿಗಳನ್ನು ಆಯೋಜಿಸುತ್ತಾರೆ. 18-02-2018ರಂದು ನಡೆದ ಅಂಥದ್ದೇ ಕಾರ್ಯಕ್ರಮವೊಂದರಲ್ಲಿ ತುಮಕೂರಿನ ಹಿರಿಯ ಸಂಶೋಧಕರಾದ ಡಾ.ಬಿ ನಂಜುಂಡಸ್ವಾಮಿ ಆಗಮಿಸಿರುತ್ತಾರೆ. ‘ಕಮಿಷನರ್ ಡಾಬ್ಸ್ ಚಿತ್ರಿಸಿದ ಚಿತ್ರದುರ್ಗ’ ವಿಷಯ ಕುರಿತು ಪ್ರಸ್ತಾಪಿಸಿ ‘1849ರಲ್ಲಿ ಬೇಡರ ಹುಡುಗರು ಬ್ರಿಟಿಷರ ವಿರುದ್ಧ ದಂಗೆಯೆದ್ದು ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ಇತಿಹಾಸದಲ್ಲಿ ಅಲಕ್ಷಕ್ಕೆ ಒಳಗಾಗಿದೆ’ ಎಂದು ಹೇಳುತ್ತಾರೆ.

ಡಾ.ಬಿ ನಂಜುಂಡಸ್ವಾಮಿ ಅವರು ಹೇಳಿದ ದುರ್ಗದ ಇತಿಹಾಸದ ಕುರಿತ ಮಹತ್ವದ ವಿಚಾರ ಬಿ ಎಲ್ ವೇಣು ಅವರೊಳಗೆ ಕಾದಂಬರಿ ಸ್ವರೂಪವನ್ನ ಹುಟ್ಟು ಹಾಕುತ್ತದೆ. ಐತಿಹಾಸಿಕ ಕಥನಕ್ಕೆ ತಮ್ಮದೇ ಶೈಲಿಯಲ್ಲಿ ರೂಪ ನೀಡಿದ ಬಿ ಎಲ್ ವೇಣು ಅವರು ಅದ್ಭುತವಾದ ಕಾದಂಬರಿಯನ್ನೇ ರಚಿಸಿದ್ದಾರೆ. ಪಾಳೇಗಾರರ ಬಗ್ಗೆ ಅನೇಕ ಐತಿಹಾಸಿಕ ಕಾದಂಬರಿಗಳನ್ನು ಬರೆದು ಜನಮನ್ನಣೆ ಗಳಿಸಿರುವ ಬಿ ಎಲ್ ವೇಣು ಅವರು ‘ದುರ್ಗದ ಬೇಡರ್ದಂಗೆ’ ಮೂಲಕ ಶ್ರೀಸಾಮಾನ್ಯರ ಬಗ್ಗೆಯೂ ಕಾದಂಬರಿ ಬರೆದು ಜನಮನ ಗೆಲ್ಲಬಲ್ಲರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಕಾದಂಬರಿಯಲ್ಲಿ ದುರ್ಗದ ಗ್ರಾಮೀಣ ಭಾಷೆ, ಪರಿಸರ, ಕಾಡು-ಮೇಡು, ಸ್ಮಾರಕಗಳು, ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಸುಹೊಕ್ಕಿವೆ. ಐತಿಹಾಸಿಕ ಘಟನಾವಳಿ ದಾಖಲಿಸುತ್ತಲೇ ಆಧುನಿಕ ಕಾಲಘಟ್ಟದ ಸಾಮಾಜಿಕ ಸಂಘರ್ಷ, ಸಮಕಾಲೀನ ಧಾರ್ಮಿಕ ವೈರುದ್ಧತೆಯೊಂದಿಗೆ ಜೋಡಿಸಿ ಸತ್ಯ ಮತ್ತು ಸಾಮರಸ್ಯದ ಹಾದಿ ತೋರುವಲ್ಲಿ ಸಫಲರಾಗಿದ್ದಾರೆ.

ನಾಯಕನಹಟ್ಟಿ ಪಾಳೆಪಟ್ಟಿನ ದೊರೆ ಕೆಂಚ ಮಲ್ಲಪ್ಪ ನಾಯಕರ ಮೊಮ್ಮಗ ವಾಲ್ಮೀಕಿ ಮತ್ತು ಏಳು ಜನರ ಯುವ ಪಡೆ ಕೆರಳಿದ ಸಿಂಹಗಳಂತೆ ಪರಕೀಯರ ವಿರುದ್ಧ ಆರ್ಭಟಿಸುವ ಪರಿ ಓದುಗರೆದುರು ಸದೃಶ್ಯ ದರ್ಶನ ನೀಡುವಂತಿದೆ. ‘ದೇಶಕ್ಕಾಗಿ ಪ್ರಾಣ ಕೊಡಿ’, ‘ಪರಂಗಿಗಳನ್ನು ಓದ್ದು ಓಡಿಸಿಬಿಡಿ’, ‘ಪರಂಗಿ ಪರದೇಶಿಗಳಿಗೆ ಧಿಕ್ಕಾರ’ ಎಂಬ ಘೋಷಣೆಗಳು. ಯುವ ಪಡೆಯ ಆರ್ಭಟದಿಂದ ಕಂಗೆಟ್ಟ ಆಂಗ್ಲರು ಬಂಧನಕ್ಕೆ ಬಲೆ ಬೀಸುತ್ತಾರೆ. ಆಂಗ್ಲರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ದೊಡ್ಡೇರಿ ಕಾಡು ಸೇರಿದ ಯುವಕರಿಗೆ ಅಲ್ಲಿನ ಗೌಡರು ಆಸೆರೆಯಾಗುತ್ತಾರೆ. ಅನೇಕ ದಿನಗಳ ಕಾಲ ದೊಡ್ಡೇರಿ ಕಾಡಿನಲ್ಲಿದ್ದುಕೊಂಡೇ ಬ್ರಿಟಿಷರ ವಿರುದ್ಧ ಸಮರ ಸಾರುವ ಯುವಪಡೆ ಹಳ್ಳಿಯ ಜನಗಳ ಮನ ಗೆಲ್ಲುತ್ತದೆ.

ಜನಪ್ರೀತಿಗೆ ಪಾತ್ರರಾಗಿದ್ದ ವಾಲ್ಮೀಕಿ ಪಡೆ ಜನ ಸಹಕಾರದಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ದೊಡ್ಡೇರಿಯಿಂದ ದೂರದ ರಾಮಗಿರಿ ಕಾಡಿಗೆ ತಲುಪುವ ಪರಿಯೇ ರೋಚಕ. ಬೆನ್ನು ಬಿದ್ದ ಬ್ರಿಟಿಷ್ ಸೈನ್ಯದ ಜತೆಗೆ ವಾಲ್ಮೀಕಿ ಪಡೆ ಭಾರೀ ಯುದ್ಧವನ್ನೇ ಹೂಡುತ್ತದೆ. ರಾಮಗಿರಿ ಬೆಟ್ಟದ ಮೇಲಿನಿಂದ ‘ಗೆರಿಲ್ಲಾ’ ಮಾದರಿ ದಾಳಿ ನಡೆಸಿದ ಬೆರಳೆಣಿಕೆಯ ಹುಡುಗರು ಬ್ರಿಟಿಷರ ಬೃಹತ್ ಸೇನೆಯನ್ನೇ ತಲ್ಲಣಗೊಳಿಸುತ್ತಾರೆ. ಹೆಚ್ಚುವರಿ ಸೈನ್ಯದೊಂದಿಗೆ ಯುವಕರನ್ನು ಬ್ರಿಟಿಷರು ಬಂಧಿಸಿ ಚಿತ್ರದುರ್ಗಕ್ಕೆ ಕರೆತಂದಾಗ ಸಿಂಹಘರ್ಜನೆಯೊಂದಿಗೆ ಹೋರಾಡಿ ವೀರಮರಣಕ್ಕೆ ಶರಣಾಗುವ ಪರಿ ನಿಜಕ್ಕೂ ರೋಮಾಂಚನಕಾರಿಯಾಗಿ ಮೂಡಿ ಬಂದಿದೆ. ಪ್ರತಿ ದುರ್ಗಾಭಿಮಾನಿ‌ಯ ಮನ-ಮನೆಗಳಲ್ಲಿ ಅಲಂಕೃತ ಯೋಗ್ಯ ಕೃತಿ ‘ದುರ್ಗದ ಬೇಡರ್ದಂಗೆ’ ಎಂದರೆ ಅತಿಶಯೋಕ್ತಿ ಅನ್ನಿಸದು.

ಕೃಪೆ :
ಬಸವರಾಜ ಮುದನೂರ್
ಹಿರಿಯ ಪತ್ರಕರ್ತರು, ಚಿತ್ರದುರ್ಗ.
ಮೊ : 94827 14116

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now