Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH VIDEO | ಕೊಲಂಬಿಯಾದಲ್ಲಿ ಭೀಕರ ಭೂಕಂಪಕ್ಕೆ 47 ಮಂದಿ ಬಲಿ, ಕಟ್ಟಡಗಳಿಂದ ಜಿಗಿದು ಜೀವ ಉಳಿಸಿಕೊಂಡ ಜನ

---Advertisement---

ಬೊಗೋಟಾ.ಆಗಸ್ಟ್.10: ದಕ್ಷಿಣ ಅಮೆರಿಕದ ಕೊಲಂಬಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಇಡೀ ದೇಶವೇ ನಡುಗಿಹೋಗಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದ್ದು, ಕನಿಷ್ಠ 47 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಜನರು ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಂತೆಯೇ ಭೂಮಿ ಇದ್ದಕ್ಕಿದ್ದಂತೆ ಕಂಪಿಸತೊಡಗಿದ್ದರಿಂದ ತೀವ್ರ ಆತಂಕದ ವಾತಾವರಣ ನಿರ್ಮಾಣವಾಯಿತು.

ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ರಾಜಧಾನಿ ಬೊಗೋಟಾದಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ‘ಸ್ಯಾನ್ ಜೋಸ್ ಡೆಲ್ ಪಾಲ್ಮಾರ್’ ಪ್ರದೇಶದಲ್ಲಿದೆ ಎಂದು ತಿಳಿದುಬಂದಿದೆ. ಇದು ಪ್ರಮುಖವಾಗಿ ಚೋಕೊ ಪ್ರಾಂತ್ಯದ ಸಣ್ಣ ಸಮುದಾಯ ಪ್ರದೇಶವಾಗಿದೆ. ಭೂಕಂಪನದ ತೀವ್ರತೆ ಎಷ್ಟಿತ್ತೆಂದರೆ ರಾಜಧಾನಿ ಬೊಗೋಟಾ ಸೇರಿದಂತೆ ನೂರಾರು ಕಿಲೋಮೀಟರ್ ದೂರದವರೆಗೆ ಪ್ರಬಲ ಆಘಾತ ಅನುಭವವಾಯಿತು. ಭೂಕಂಪದ ಭೀತಿಗೆ ನಲುಗಿದ ಜನರು ತಮ್ಮ ಮನೆ, ಕಚೇರಿ ಹಾಗೂ ಬಹುಮಹಡಿ ಕಟ್ಟಡಗಳಿಂದ ರಸ್ತೆಗೆ ಓಡಿ ಬಂದರು. ಕೆಲವರು ಪ್ರಾಣಭಯದಿಂದ ಕಟ್ಟಡದ ಬಾಲ್ಕನಿಗಳಿಂದ ಕೆಳಗೆ ಜಿಗಿದರೆ, ಇನ್ನು ಕೆಲವರು ಬೀದಿ ದೀಪದ ಕಂಬ ಹಾಗೂ ಜಾಹೀರಾತು ಫಲಕಗಳನ್ನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಹೆಣಗಾಡಿದರು. ಈ ಕಂಪನದ ಬಿಸಿ ನೆರೆಯ ವೆನೆಜುವೆಲಾ ಮತ್ತು ಈಕ್ವೆಡಾರ್ ದೇಶಗಳಿಗೂ ತಟ್ಟಿದೆ.

ಈ ದುರಂತದ ಕುರಿತು ಚೋಕೊ ಪ್ರಾಂತ್ಯದ ಗವರ್ನರ್ ನೂಬಿಯಾ ಕ್ಯಾರೋಲಿನಾ ಕೊರ್ಡೋಬಾ-ಕುರಿ ಎಕ್ಸ್ (ಟ್ವಿಟರ್) ಮೂಲಕ ಮಾಹಿತಿ ನೀಡಿದ್ದು, ಪ್ರಾಂತ್ಯದ ರಾಜಧಾನಿ ‘ಕ್ವಿಬ್ದೋ’ದಲ್ಲಿ ಹಲವು ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ತುರ್ತು ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ. ಮುಂಬರುವ ಪಶ್ಚಾತ್ ಕಂಪನಗಳ (ಆಫ್ಟರ್‌ಶಾಕ್) ಭೀತಿ ಎದುರಾಗಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಆಡಳಿತ ಮಂಡಳಿ ಸೂಚಿಸಿದೆ.

Join WhatsApp

Join Now

Join Telegram

Join Now