Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಗ್ರಾಮೀಣ ಶಾಲೆಯಿಂದ ವೈದ್ಯಕೀಯ ಶಿಕ್ಷಣದ ಟಾಪರ್‌ವರೆಗೆ: ಮಕ್ಕಳ ತಜ್ಞ ಡಾ. ಎಸ್.ಎಚ್. ದೇವರಾಜ್ ಸುದೀರ್ಘ ಸೇವೆಗೆ ತೆರೆ

---Advertisement---

ಚಿತ್ರದುರ್ಗ. ಜುಲೈ. 31: ವೈದ್ಯಕೀಯ ಕ್ಷೇತ್ರದಲ್ಲಿ ಉದಯೋನ್ಮುಖ ವೈದ್ಯರು ಹಾಗೂ ಹೌಸ್ ಸರ್ಜನ್‍ಗಳಿಗೆ ಸರಿಯಾದ ದಿಕ್ಕು ತೋರಿಸಲು, ತರಬೇತಿ ನೀಡಲು ಮಾರ್ಗದರ್ಶಿ ಹಾಗೂ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‍ಐ) ಡೀನ್ ಹಾಗೂ ನಿರ್ದೇಶಕ ಡಾ. ಬಿ. ವೈ. ಯುವರಾಜ್ ಅಭಿಪ್ರಾಯಪಟ್ಟರು.

ನಗರದ ಐಎಂಎ ಸಭಾಂಗಣದಲ್ಲಿ ಗುರುವಾರ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಮಕ್ಕಳ ತಜ್ಞ ಡಾ. ಎಸ್. ಹೆಚ್. ದೇವರಾಜ್ ಅವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಆಸ್ಪತ್ರೆಗೆ ಬರುವ ಹೌಸ್ ಸರ್ಜನ್‍ಗಳು (ಇಂಟರ್ನ್ಸ್)  ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಡಾ. ದೇವರಾಜ್ ಅವರಂತಹ ಹಿರಿಯ ಹಾಗೂ ಅನುಭವಿ ಮಾರ್ಗದರ್ಶಕರ ಅಗತ್ಯವಿದೆ. ಹೊಸದಾಗಿ ಬರುವ ವೈದ್ಯರು ಆರಂಭದಲ್ಲಿ ಅಸ್ಪಷ್ಟತೆಯಿಂದ ಇರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುವುದು ಅವರ ಪುಣ್ಯದ ಫಲ. ಆದ್ದರಿಂದ ಡಾ. ದೇವರಾಜ್ ಅವರು ನಮ್ಮ ಸಂಸ್ಥೆಯಲ್ಲಿ ಕನಿಷ್ಠ ಇನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ಯುವ ವೈದ್ಯರನ್ನು ತರಬೇತುಗೊಳಿಸಬೇಕು ಎಂದು ಮನವಿ ಮಾಡಿದರು.

ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪ್ರಸ್ತಾಪವಾಗುತ್ತಿದ್ದ ‘ಆಸ್ಪತ್ರೆ ದಿನ’ ಆಚರಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು. ವರ್ಷವಿಡೀ ಅತ್ಯುತ್ತಮವಾಗಿ ಶ್ರಮಿಸಿದ ವೈದ್ಯರು, ನಸಿರ್ಂಗ್ ಅಧಿಕಾರಿಗಳು ಹಾಗೂ ಗ್ರೂಪ್-ಡಿ ಸಿಬ್ಬಂದಿ ಗುರುತಿಸಿ ಗೌರವಿಸುವ ಸಲುವಾಗಿ ಆಸ್ಪತ್ರೆಯಲ್ಲೇ ಒಂದು ವಿಶೇಷ ನಿಧಿ ರೂಪಿಸಲಾಗುವುದು. ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆ ಮತ್ತು ಸೇವೆ ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ಡಾ. ದೇವರಾಜ್ ಅವರಂತೆ ಉತ್ತಮ ಹೆಸರುಗಳಿಸಿ, ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ವಿಭಾಗದ ಸೇವೆಯನ್ನು ಉನ್ನತ ಮಟ್ಟಕ್ಕೇರಿಸಿದ ಡಾ.ದೇವರಾಜ್: ಚಿತ್ರದುರ್ಗ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಮಕ್ಕಳ ವಿಭಾಗದಿಂದ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಮೂಲಕ ಮತ್ತು ಆಸ್ಪತ್ರೆಯ ಪ್ರಗತಿಗೆ ಶ್ರಮಿಸುವ ಮೂಲಕ ಹಿರಿಯ ಮಕ್ಕಳ ತಜ್ಞ ಡಾ. ಎಸ್.ಎಚ್. ದೇವರಾಜ್ ಅವರು ಇಡೀ ವಿಭಾಗವನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಶ್ಲಾಘಿಸಿದರು.
ಡಾ. ದೇವರಾಜ್ ಅವರು 2005ರಲ್ಲಿ ಜಿಲ್ಲಾಸ್ಪತ್ರೆಗೆ ಸೇರ್ಪಡೆಗೊಂಡಿದ್ದರು. ಆರಂಭಿಕ ದಿನಗಳಲ್ಲಿ ವೈದ್ಯರ ಕೊರತೆಯ ನಡುವೆಯೂ 24 ಗಂಟೆಗಳ ಕಾಲ ಸತತವಾಗಿ ಕರ್ತವ್ಯ ನಿರ್ವಹಿಸುತ್ತಾ, ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಿದ್ದಾರೆ. ಕೆಲ ವರ್ಷಗಳ ಕಾಲ ಒಬ್ಬರೇ ಇಡೀ ಮಕ್ಕಳ ವಿಭಾಗದ ಜವಾಬ್ದಾರಿಯನ್ನು ಹೊರಬಲ್ಲ ಸಾಮಥ್ರ್ಯ ತೋರಿಸಿ, ಹೊರರೋಗಿಗಳು ಹಾಗೂ ಒಳರೋಗಿಗಳನ್ನು ಆರೈಕೆ ಮಾಡಿದ್ದಾರೆ. ನಂತರ ಎಸ್‍ಎನ್‍ಸಿಯು ಸೇರಿದಂತೆ ಹಲವು ವಿಭಾಗಗಳನ್ನು ಸಕ್ರಿಯಗೊಳಿಸಿ, ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಹೊಸ ಮೆರುಗು ತಂದಿದ್ದಾರೆ ಎಂದು ಸ್ಮರಿಸಿದರು.

ಸೇವೆ, ಪ್ರೀತಿ ಮತ್ತು ಸಮಾಧಾನವೇ ವೈದ್ಯರ ಅಸಲಿ ಅಸ್ತ್ರ: ಬಿಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಮಕ್ಕಳ ತಜ್ಞ ಡಾ. ಎಸ್.ಹೆಚ್. ದೇವರಾಜ್, ವೈದ್ಯಕೀಯ ವೃತ್ತಿ ಎಂಬುದು ಕೇವಲ ಔಷಧ ಮತ್ತು ಚಿಕಿತ್ಸೆಗೆ ಸೀಮಿತವಾಗಿರದೆ, ರೋಗಿಗಳಿಗೆ ಪ್ರೀತಿ, ಸಾಂತ್ವನ ಮತ್ತು ಸಕಾರಾತ್ಮಕ ಶಕ್ತಿ ನೀಡುವ ಪವಿತ್ರ ಸೇವೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಆಸ್ಪತ್ರೆಯಲ್ಲಿ ತಮ್ಮ ಸೇವಾ ದಿನಗಳ ಅನುಭವಗಳನ್ನು ಮೆಲಕು ಹಾಕಿದ ಡಾ. ದೇವರಾಜ್, ವೈದ್ಯರ ಕೈಗುಣ ಎನ್ನುವುದು ಕೇವಲ ಔಷಧಿಯಲ್ಲಿ ಇರುವುದಿಲ್ಲ. ರೋಗಿ ಹಾಗೂ ಅವರ ಪೋಷಕರೊಂದಿಗೆ ನಾವು ಹೇಗೆ ಸ್ಪಂದಿಸುತ್ತೇವೆ, ಅವರ ನೋವಿಗೆ ಹೇಗೆ ಧೈರ್ಯ ತುಂಬುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳ ಚಿಕಿತ್ಸೆ ವೇಳೆ ಪೋಷಕರೊಂದಿಗೆ ಸೌಜನ್ಯದಿಂದ ವ್ಯವಹರಿಸಿ, ಅವರಿಗೆ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಅರ್ಧ ರೋಗ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ನಿರಂತರ ಒತ್ತಡ ಮತ್ತು ಅಪೇಕ್ಷೆಗಳಿರುತ್ತವೆ. ಪ್ರತಿಯೊಂದು ಸಣ್ಣ ವಿಚಾರಕ್ಕೂ ವೈದ್ಯರೇ ನೇರ ಹೊಣೆಯಾಗಬೇಕಾದ ಪರಿಸ್ಥಿತಿ ಬಂದಾಗಲೂ ಧೃತಿಗೆಡದೆ, ದಿನದ 24 ಗಂಟೆಯೂ ಮೊಬೈಲ್ ಕರೆಗಳಿಗೆ ಲಭ್ಯವಿದ್ದು ಸೇವೆ ಸಲ್ಲಿಸಿದ್ದೇನೆ. ರಜೆ ದಿನಗಳಲ್ಲೂ ಕರ್ತವ್ಯ ನಿರತನಾಗಿದ್ದ ನನಗೆ ಕುಟುಂಬದ ಸಹಕಾರ ಮತ್ತು ಸಹೋದ್ಯೋಗಿಗಳ ಬೆಂಬಲವೇ ಅತಿ ದೊಡ್ಡ ಬಲವಾಗಿತ್ತು ಎಂದು ಸ್ಮರಿಸಿದರು.

 

ತಮ್ಮ ಸುದೀರ್ಘ ವೃತ್ತಿಜೀವನದ ಯಶಸ್ಸಿಗೆ ಕಾರಣರಾದ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಆರ್.ಸಿ.ಹೆಚ್. ಅಧಿಕಾರಿಗಳು, ಸಹೋದ್ಯೋಗಿ ವೈದ್ಯರಿಗೆ ಹಾಗೂ ಶುಶ್ರೂಷಕ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ತಮ್ಮ ವೃತ್ತಿ ಜೀವನದಲ್ಲಿ ಸ್ವಂತ ಹಿತಾಸಕ್ತಿ ಬದಿಗೊತ್ತಿ ಸದಾ ಬೆನ್ನೆಲುಬಾಗಿ ನಿಂತ ಧರ್ಮಪತ್ನಿ ಹಾಗೂ ಕುಟುಂಬದ ತ್ಯಾಗ ಸ್ಮರಿಸಿ ಭಾವುಕರಾದರು. ವೈದ್ಯಕೀಯ ಕ್ಷೇತ್ರಕ್ಕೆ ಬರುವ ಯುವ ವೈದ್ಯರು ರೋಗಿಗಳ ಸೇವೆಗೆ ಆದ್ಯತೆ ನೀಡಬೇಕು. ಧನಾತ್ಮಕ ಚಿಂತನೆ ಹಾಗೂ ತಾಳ್ಮೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಸಿಗುವ ಗೌರವ ಮತ್ತು ತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಕಿರಿಯ ವೈದ್ಯರಿಗೆ ಕಿವಿಮಾತು ಹೇಳಿದರು.

 

ಕವಿ ಜಿ.ಎಸ್. ಶಿವರುದ್ರಪ್ಪನವರ ಸಾಲುಗಳನ್ನು ಸ್ಮರಿಸಿದ ಅವರು, “ಎನಿತು ಜನ್ಮದಲ್ಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ, ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ? ಎಂಬಂತೆ ನಮ್ಮ ಮೇಲೆ ಸಮಾಜದ, ರೋಗಿಗಳ, ಆಸ್ಪತ್ರೆಯ ಹಾಗೂ ಸಿಬ್ಬಂದಿಗಳ ದೊಡ್ಡ ಋಣವಿದೆ. ಆ ಋಣವನ್ನು ತೀರಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ  ಸಿಎಂಸಿಆರ್‍ಐ ಬೋಧಕ ಆಸ್ಪತ್ರೆಯ ಹಿರಿಯ ವೈದ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪಿಡಿಯಾಟ್ರಿಕ್ ವಿಭಾಗದ ಸಿಬ್ಬಂದಿ ಹಾಗೂ ನಗರದ ಪ್ರಮುಖ ವೈದ್ಯರು ಉಪಸ್ಥಿತರಿದ್ದು, ಡಾ. ದೇವರಾಜ್ ಅವರ ಸುದೀರ್ಘ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಮಕ್ಕಳ ತಜ್ಞರು: ಗ್ರಾಮೀಣ ಭಾಗದ ಶಾಲೆಯಿಂದ ಪ್ರಾಥಮಿಕ ಶಿಕ್ಷಣ ಆರಂಭಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಮಕ್ಕಳ ತಜ್ಞ ಡಾ. ಎಸ್.ಎಚ್. ದೇವರಾಜ್ ಅವರು ಗಮನ ಸೆಳೆದಿದ್ದಾರೆ.
ಜುಲೈ 22, 1966 ರಂದು ಮೊಳಕಾಲ್ಮೂರಿನಲ್ಲಿ ಜನಿಸಿದ ಇವರು, ಶಿಕ್ಷಕರಾದ ಎಂ. ಹನುಮಂತಪ್ಪ ಹಾಗೂ ಗೃಹಿಣಿ ಎಸ್.ಎಲ್. ಅನಸೂಯಮ್ಮ ದಂಪತಿಯ ಪುತ್ರ. ಚಿತ್ರದುರ್ಗ ತಾಲೂಕಿನ ದಂಡಿನಕುರುಬರಹಟ್ಟಿಯ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ವ್ಯಾಸಂಗ ಮಾಡಿದ ಡಾ. ದೇವರಾಜ್, ನಂತರ ಚಿತ್ರದುರ್ಗದ ನ್ಯಾಷನಲ್ ಚಿನ್ಮೂಲಾದ್ರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು.

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಕಾಲೇಜಿಗೆ 4ನೇ ಸ್ಥಾನ ಪಡೆದಿದ್ದರು. ಬಳ್ಳಾರಿಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದ ಇವರು, ‘ಅನಾಟಮಿ’ ವಿಷಯದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು. ತದನಂತರ, 2002 ರಲ್ಲಿ ‘ಇನ್-ಸರ್ವಿಸ್’ ಕೋಟಾದಡಿಯಲ್ಲಿ ಗುಲ್ಬರ್ಗದ ಎಂಆರ್‍ಎಂಸಿಯಲ್ಲಿ ‘ಪಿಜಿ ಡಿಪ್ಲೋಮಾ (DCH)” ಪೂರ್ಣಗೊಳಿಸಿ, RHUHSನಲ್ಲಿ ಡಿ.ಸಿ.ಹೆಚ್ ವಿಭಾಗಕ್ಕೆ ಟಾಪರ್ ಆಗಿ ಸಾಧನೆ ಮಾಡಿದ್ದರು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಇವರು 1991-1992 ರಲ್ಲಿ ಬಳ್ಳಾರಿ ಜಿಲ್ಲೆಯ ಎಂಎಂ ವಾಡ ಪಿಹೆಚ್‍ಸಿಯಲ್ಲಿ ಮೆಡಿಕಲ್ ಆಫೀಸರ್ ಆಗಿ ಸೇವೆ ಆರಂಭಿಸಿದರು. ನಂತರ 1992 ರಿಂದ 1995 ರವರೆಗೆ ಹೊಳಲ್ಕೆರೆ ತಾಲೂಕಿನ ಗೌಡಿಹಳ್ಳಿ ಪಿಹೆಚ್‍ಸಿನಲ್ಲೂ, 1995 ರಿಂದ 2000 ರವರೆಗೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪಿಹೆಚ್‍ಸಿಯಲ್ಲೂ ಸೇವೆ ಸಲ್ಲಿಸಿದರು. ಬಳಿಕ 2000 ರಿಂದ 2002 ರವರೆಗೆ ಗುಲ್ಬರ್ಗದ ಎಂಆರ್‍ಎಂಸಿಯಲ್ಲಿ ಇನ್-ಸರ್ವಿಸ್ ಪಿಜಿ ಪೂರ್ಣಗೊಳಿಸಿದರು. ಇವರ ಧರ್ಮಪತ್ನಿ ಎಸ್. ಜಿ. ಶ್ವೇತಾ  (M.sc) ಅವರಾಗಿದ್ದು, ಇಬ್ಬರು ಪುತ್ರರಾದ ಎಸ್.ಡಿ. ಅಕ್ಷಿತ್ ಹಾಗೂ ಎಸ್.ಡಿ. ಪವನ್ ಇಬ್ಬರೂ ಸಹ ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಪೇಟೆಂಟ್ ರಿಜಿಸ್ಟ್ರೇಷನ್, ಉತ್ಪನ್ನ ಅಭಿವೃದ್ಧಿ, ವಿನ್ಯಾಸ, ನವಾನ್ವೇಷಣೆ, ಸಂಶೋಧನೆಗೆ ಪ್ರೋತ್ಸಾಹ, ಪ್ರಾಯೋಗಿಕ ಬೋಧನಾ ಕೌಶಲ್ಯದ ಉನ್ನತೀಕರಣ ಹಾಗೂ ಪೋಷಕರ ಸೂಕ್ತ ಉತ್ತೇಜನದ ಮೂಲಕ ವಿದ್ಯಾರ್ಥಿಗಳ ಮಾನಸಿಕ ವಿಕಸನದೊಂದಿಗೆ ಜಾಗತಿಕ ಶೈಕ್ಷಣಿಕ ನಾಗಲೋಟಕ್ಕೆ ಹೊಂದಿಕೊಳ್ಳುವುದನ್ನು ಭಾರತದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಆದ್ಯತೆಯಾಗಿಸಿಕೊಳ್ಳಬೇಕು

10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ: ಅರ್ಜಿ ಆಹ್ವಾನ

ಬ್ರಾಹ್ಮಣ ಅಭಿವೃದ್ಧಿ ಮಂಡಳಿ: ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಪ್ರತಿದಿನ ಈ ಆಹಾರಗಳನ್ನು ಸೇವಿಸಿದರೆ ಕೂದಲು ಉದರುವ ಸಮಸ್ಯೆ ಕಡಿಮೆಯಾಗುತ್ತೆ!

ಚಿತ್ರದುರ್ಗ APMC | ಜಲೈ 31 ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಆಗಸ್ಟ್ 12 ರಂದು ವರ್ಷದ ಕೊನೆಯ ‘ಸೂರ್ಯಗ್ರಹಣ’: ಭಾರತದಲ್ಲಿ ಕಾಣಿಸುತ್ತದೆಯೇ?