ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 09 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಯವರ ನೇತೃತ್ವದಲ್ಲಿ ದಿನಾಂಕ 11-07-2026 ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಯಲ್ಲಿ ರಾಜ್ಯದ 6 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಬೃಹತ್ “ನಮ್ಮಾಭಿಮಾನದ ಅಭಿನಂದನಾ ಸಮಾರಂಭ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷರು ಹಾಗೂ ವಿಭಾಗೀಯ ಉಪಾಧ್ಯಕ್ಷರಾದ ಮಾಲತೇಶ್ ಮುದ್ದಜ್ಜಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಅಭಿನಂದನೆ ಹಾಗೂ ಔPS ಮತ್ತು ಕೇಂದ್ರ ಮಾದರಿ ವೇತನ ಜಾರಿಗೆ ಹಕ್ಕೊತ್ತಾಯವನ್ನು ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ಮತ್ತು ಉಪ ಮುಖ್ಯಮಂತ್ರಿಗಳಾದ ಜಿ ಪರಮೇಶ್ವರ ರವರನ್ನು ಸನ್ಮಾನಿಸಿ ಅಭಿನಂದಿಸುವುದರ ಜೊತೆಗೆ, ಸರ್ಕಾರಿ ನೌಕರರ ಬಹುದಿನದ ಬೇಡಿಕೆಗಳಾದ ಹಳೆಯ ಪಿಂಚಣಿ ಯೋಜನೆ ಔPS ಜಾರಿ ಮತ್ತು ಕೇಂದ್ರ ಸರ್ಕಾರದ ಮಾದರಿ ವೇತನ ಜಾರಿಗಾಗಿ ಬೃಹತ್ ಹಕ್ಕೊತ್ತಾಯವನ್ನು ಮಂಡಿಸಲಾಗುವುದು. ಈ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಹಾಗೂ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುವರು
ಈ “ನಮ್ಮಾಭಿಮಾನ” ಸಮಾರಂಭವನ್ನು ಯಶಸ್ವಿಗೊಳಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸರ್ಕಾರಿ ನೌಕರರು, ಶಿಕ್ಷಕರು, ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಇದರಂತೆ ನಮ್ಮ ಜಿಲ್ಲೆಯ ವತಿಯಿಂದ 1500 ಕ್ಕೂ ಹೆಚ್ಚಿನ ನೌಕರರು ಭಾಗವಹಿಸಲಿದ್ದಾರೆ ಎಂದು ಮಾಲತೇಶ್ ಮುದ್ದಜ್ಜಿ ತಿಳಿಸಿದ್ದಾರೆ.










