ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 09 : ಎಸ್‍ಐಆರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಪೌರತ್ವ ಪ್ರಶ್ನಿಸುತ್ತಿರುವುದಕ್ಕೆ ಉತ್ತರ ಕೊಡಲು ಯೂತ್ ಕಾಂಗ್ರೆಸ್‍ನವರು ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗುವಂತೆ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಕರೆ ನೀಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಎಸ್‍ಐಆರ್. ಕುರಿತು ವಿಶೇಷ ಜಾಗೃತಿ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಮುನ್ನಾ ಎಸ್‍ಐಆರ್. ನಿಂದ ಲಕ್ಷಾಂತರ ಮತಗಳನ್ನು ಮತ ಪಟ್ಟಿಯಿಂದ ಡಿಲಿಟ್ ಮಾಡಿರುವ ಕಾರಣಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಮತಪಟ್ಟಿಯಲ್ಲಿರುವ ಸಣ್ಣ ಸಣ್ಣ ತಪ್ಪುಗಳನ್ನು ಹುಡುಕಿ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರ ತೆಗೆಯುವ ಕೆಲಸವನ್ನು ಕೇಂದ್ರ ಸರ್ಕಾರ ಎಸ್‍ಐಆರ್. ಮೂಲಕ ಮಾಡಿಸುತ್ತಿದೆ. ಇದರ ವಿರುದ್ದ ನೀವುಗಳು ಎಚ್ಚೆತ್ತುಕೊಂಡು ಹಳ್ಳಿ, ನಗರ ಪ್ರದೇಶಗಳಲ್ಲಿ ಮನೆ ಮನೆಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಮುಂದೆ ಎದುರಾಗುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷಕ್ಕೆ ನಷ್ಟವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಬಿಎಲ್‍ಓ. ಗಳು ಮನೆ ಮನೆಗಳಿಗೆ ಬಂದಾಗ ಅಗತ್ಯ ಮಾಹಿತಿಯನ್ನು ಕೊಡಿ. ದಿನ ಒಂದೊಂದು ಊರಿಗೆ ಭೇಟಿ ನೀಡಿ ನಿಮ್ಮ ನಿಮ್ಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ ಎಚ್ಚೆತ್ತುಕೊಂಡು ಮತಗಳನ್ನು ಭದ್ರಪಡಿಸಿಕೊಳ್ಳಿ. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸಬೇಕಿದೆ ಎಂದು ಯೂತ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ತಿಳಿಸಿದರು.
ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಾದಾಪೀರ್ ಕೆ.ಆರ್. ಮಾತನಾಡಿ ಎಸ್‍ಐಆರ್. ಬಗ್ಗೆ ಯಾರಲ್ಲಿಯೂ ಆತಂಕ ಬೇಡ. ಬಿಎಲ್‍ಓ.ಗಳು ಮನೆ ಬಾಗಿಲಿಗೆ ಬಂದಾಗ ದಾಖಲೆಗಳನ್ನು ನೀಡಿ ಮತಪಟ್ಟಿಯಲ್ಲಿರುವಂತೆ ನಿಮ್ಮ ಹೆಸರು ಇನ್ನಿತರೆ ವಿವರಗಳನ್ನು ಬಿಎಲ್‍ಓ.ಗಳು ನೀಡುವ ಫಾರಂಗಳಲ್ಲಿ ಭರ್ತಿ ಮಾಡಿಕೊಡುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ. ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬ್ಲಾಕ್ ಅಧ್ಯಕ್ಷರುಗಳಿಗೆ ಹಾಗೂ ವಿಧಾನಸಭಾ ಅಧ್ಯಕ್ಷರುಗಳಿಗೆ ತಾಕೀತು ಮಾಡಿದರು.
ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಮಾರ್ ಮಾತನಾಡುತ್ತ ಎಸ್‍ಐಆರ್.ನಿಂದ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಲಕ್ಷಾಂತರ ಜನ ತಮ್ಮ ಮತದಾನದ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು ಹಾಗೂ ಮುಸ್ಲಿಂರ ಮತಗಳನ್ನು ಕೇಂದ್ರ ಸರ್ಕಾರ ಗುರಿಯಾಗಿರಿಸಿಕೊಂಡು ಎಸ್‍ಐಆರ್. ಭೂತವನ್ನು ಬಿಟ್ಟಿದೆ. ಇದರ ವಿರುದ್ದ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.
ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ವಸೀಂ ಬಡಾಮಕಾನ್, ಜಿಲ್ಲಾ ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಇಂಜುಮಾಮ್ ಇವರುಗಳು ವೇದಿಕೆಯಲ್ಲಿದ್ದರು.












