ದೆಹಲಿ.ಜುಲೈ.09: ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನ ಬಳಕೆಯಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ನಕಲಿ ಸುದ್ದಿಗಳು ಕೇವಲ ಯೋಜಿತ ಸುಳ್ಳು ಪ್ರಚಾರದ ಭಾಗ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯೊಂದಿಗೆ ನಡೆಸಿದ ವಿಶೇಷ ಸಂವಾದದಲ್ಲಿ, ಎಥನಾಲ್ ಮಿಶ್ರಿತ ಇಂಧನದ ಕುರಿತಾದ ಸಾರ್ವಜನಿಕ ಗೊಂದಲಗಳಿಗೆ ಅವರು ನೇರ ಉತ್ತರ ನೀಡಿದ್ದಾರೆ.
ಪೆಟ್ರೋಲ್ಗೆ ಹೋಲಿಸಿದರೆ ಎಥನಾಲ್ನ ಕ್ಯಾಲೋರಿಫಿಕ್ ಮೌಲ್ಯ ಕಡಿಮೆ ಇರುವುದು ನಿಜವಾದರೂ, ಸಾಮಾನ್ಯ ಬಳಕೆಯಲ್ಲಿ ಮೈಲೇಜ್ ಮೇಲಾಗುವ ಪ್ರಭಾವ ತೀರಾ ಕಡಿಮೆ ಇರಲಿದೆ. ವಾಹನಗಳ ಮೈಲೇಜ್ ಕೇವಲ ಇಂಧನದ ಮೇಲಷ್ಟೇ ಅಲ್ಲದೆ ನಗರ ಪ್ರದೇಶಗಳ ನಿಲ್ಲುತ್ತಾ ಸಾಗುವ ಸಂಚಾರ ದಟ್ಟಣೆಯ ಮೇಲೂ ನಿರ್ಧಾರವಾಗುತ್ತದೆ. ಪುಣೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪ್ರಯೋಗಾಲಯ ಮತ್ತು ಪ್ರಮುಖ ವಾಹನ ತಯಾರಕರು ಹಲವಾರು ಕಠಿಣ ಪರೀಕ್ಷೆಗಳನ್ನು ನಡೆಸಿ ಹಸಿರು ನಿಶಾನೆ ನೀಡಿದ ನಂತರವೇ ದೇಶಾದ್ಯಂತ E20 ಇಂಧನವನ್ನು ಪರಿಚಯಿಸಲಾಗಿದೆ. ಕೆಲವು ಕಡೆಗಳಲ್ಲಿ ಎಂಜಿನ್ ಸಮಸ್ಯೆಯಾಗಿರುವ ಘಟನೆಗಳನ್ನು ಪರಿಶೀಲಿಸಿದಾಗ, ಅದಕ್ಕೆ ಕಲಬೆರಕೆ ಇಂಧನವೇ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಹಳೆಯ ಕಾರುಗಳ ಕೆಲವು ಸಣ್ಣ ಭಾಗಗಳ ಮೇಲೆ ಎಥನಾಲ್ ಪ್ರಭಾವ ಬೀರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಹಿಂದೆ ಹಳೆಯ ಕಾರುಗಳಲ್ಲಿ ಮೆಟಲ್ ವಾಷರ್ ಗಳನ್ನು ಬಳಸಲಾಗುತ್ತಿತ್ತು, ಆದರೆ ಈಗ ರಬ್ಬರ್ ವಾಷರ್ ಗಳನ್ನು ಬಳಸಲಾಗುತ್ತಿದೆ. ಹೀಗಾಗಿ, ಹಳೆಯ ಕಾರುಗಳು ಸರ್ವಿಸಿಂಗ್ ಗೆ ಬಂದಾಗ ಅವುಗಳ ಹಳೆಯ ವಾಷರ್ ಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತವಾಗಿ ಬದಲಾಯಿಸಿಕೊಡುವಂತೆ ವಾಹನ ತಯಾರಕ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವಿಶೇಷವಾಗಿ ಫ್ಲೆಕ್ಸ್-ಫ್ಯುಯೆಲ್ ಎಂಜಿನ್ಗಳನ್ನು ಹೊಂದಿರುವ ವಾಹನಗಳಲ್ಲಿ ಮೈಲೇಜ್ ದಕ್ಷತೆಯ ಯಾವುದೇ ಸಮಸ್ಯೆ ಇರುವುದಿಲ್ಲ. ಸದ್ಯದಲ್ಲೇ ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈ, ಟೊಯೋಟಾ ಮತ್ತು ಮಾರುತಿ ಸುಜುಕಿ ಸೇರಿದಂತೆ ದೇಶದ ಪ್ರಮುಖ ಒಂದು ಡಜನ್ ಕಂಪನಿಗಳು ಫ್ಲೆಕ್ಸ್-ಫ್ಯುಯೆಲ್ ಮಾದರಿಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿವೆ. ಬ್ರೆಜಿಲ್ ದೇಶವು 1970 ರ ದಶಕದಿಂದಲೇ ಶೇಕಡಾ 27 ರಷ್ಟು ಎಥನಾಲ್ ಮಿಶ್ರಿತ ಇಂಧನವನ್ನು ಅತ್ಯಂತ ಯಶಸ್ವಿಯಾಗಿ ಬಳಸುತ್ತಿದ್ದು, ಅಲ್ಲಿನ ಹೋಂಡಾ ಮತ್ತು ಹ್ಯುಂಡೈ ಕಾರುಗಳು ಯಾವುದೇ ತೊಂದರೆಯಿಲ್ಲದೆ ಓಡುತ್ತಿವೆ. ಸದ್ಯಕ್ಕೆ ಎಥನಾಲ್ ಬೆಲೆ ಲೀಟರ್ಗೆ ಸರಿಸುಮಾರು 75 ರೂಪಾಯಿ ಇರಲಿದ್ದು, ಇದು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಇಂಧನದ ಆಯ್ಕೆಯನ್ನು ಒದಗಿಸುತ್ತದೆ.
ಭಾರತದ ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡಲು ಪರ್ಯಾಯ ಇಂಧನಗಳ ಬಳಕೆಗೆ ಸರ್ಕಾರ ಭಾರಿ ಒತ್ತು ನೀಡುತ್ತಿದೆ. ಕರ್ನಾಟಕದಲ್ಲಿ ಅಶೋಕ್ ಲೇಲ್ಯಾಂಡ್ ಸಂಸ್ಥೆಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ಶೇಕಡಾ 15 ರಷ್ಟು ಮೆಥನಾಲ್-ಡೀಸೆಲ್ ಮಿಶ್ರಣ ಬಳಸಿ 25 ಬಸ್ಗಳನ್ನು ಮೂರು ತಿಂಗಳ ಕಾಲ ಯಶಸ್ವಿಯಾಗಿ ಓಡಿಸಿದೆ. ಅಸ್ಸಾಂ ಪೆಟ್ರೋ-ಕೆಮಿಕಲ್ಸ್ ಸಂಸ್ಥೆಯು ದಿನಕ್ಕೆ 700 ಟನ್ ಮೆಥನಾಲ್ ಅನ್ನು ಕೇವಲ 20 ರಿಂದ 22 ರೂಪಾಯಿ ದರದಲ್ಲಿ ಉತ್ಪಾದಿಸುತ್ತಿದೆ. ಇದನ್ನು ಈಶಾನ್ಯ ಭಾರತದಲ್ಲಿ ಹಡಗು ಮತ್ತು ಸಾರಿಗೆ ಬಸ್ಗಳಿಗೆ ಬಳಸುವುದರಿಂದ ಕೋಟ್ಯಂತರ ರೂಪಾಯಿ ಡೀಸೆಲ್ ವೆಚ್ಚ ಉಳಿತಾಯವಾಗಲಿದೆ.
ಮತ್ತೊಂದೆಡೆ, ಎಥನಾಲ್ ಅನ್ನು ನೇರವಾಗಿ ಡೀಸೆಲ್ ಎಂಜಿನ್ಗಳಿಗೆ ಬಳಸಲು ಸಾಧ್ಯವಿಲ್ಲದ ಕಾರಣ, ಎಥನಾಲ್ನಿಂದ ‘ಐಸೋ-ಬ್ಯುಟನಾಲ್’ ತಯಾರಿಸಲಾಗುತ್ತಿದೆ. ಇದನ್ನು ಟ್ರ್ಯಾಕ್ಟರ್, ಹಾರ್ವೆಸ್ಟರ್ ಮತ್ತು ಜನರೇಟರ್ ಸೆಟ್ಗಳಿಗೆ ಇಂಧನವಾಗಿ ಬಳಸಬಹುದು. ಕಿರ್ಲೋಸ್ಕರ್ ಸಂಸ್ಥೆ ಈಗಾಗಲೇ ನೂರು ಪ್ರತಿಶತ ಐಸೋ-ಬ್ಯುಟನಾಲ್ ಹಾಗೂ ಎಥನಾಲ್ ಮೂಲಕ ನಡೆಯುವ ಜನರೇಟರ್ಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಿದೆ.
ಪ್ರಸ್ತುತ ಭಾರತವು ಸುಮಾರು 2 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು, ದೇಶದ ಬಹುಪಾಲು ವಾಯು ಮಾಲಿನ್ಯಕ್ಕೆ ಇದೇ ಕಾರಣವಾಗಿದೆ. ಇಂತಹ ಸ್ವದೇಶಿ ಪರಿಸರಸ್ನೇಹಿ ಇಂಧನಗಳ ಬಳಕೆಯಿಂದ ಭಾರತದ ಇಂಧನ ಆಮದು ಸಂಪೂರ್ಣವಾಗಿ ಕೊನೆಗೊಳ್ಳಲಿದೆ ಹಾಗೂ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.











