ಚಿತ್ರದುರ್ಗ, ಜುಲೈ. 07 : ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಸುನಂದ ವಿದ್ಯಾ ಸಂಸ್ಥೆ (ರಿ) ಅಧೀನದಲ್ಲಿರುವ ಜ್ಞಾನಪೂರ್ಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಖ್ಯಾತ ಪತ್ರಕರ್ತ, ಲೇಖಕ ಹಾಗೂ ಉದಯವಾಣಿ ದಿನಪತ್ರಿಕೆಯ ಪುರವಣಿ ಸಂಪಾದಕರಾದ ಎ.ಆರ್. ಮಣಿಕಾಂತ್ ಅವರೊಂದಿಗೆ ವಿದ್ಯಾರ್ಥಿಗಳ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಓದುವ ಹವ್ಯಾಸ, ಉತ್ತಮ ವ್ಯಕ್ತಿತ್ವ, ಜೀವನ ಮೌಲ್ಯಗಳು, ಸಮಯದ ಸದ್ಬಳಕೆ ಹಾಗೂ ಗುರಿ ಸಾಧನೆಗೆ ಅಗತ್ಯವಾದ ದೃಢಸಂಕಲ್ಪದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಇದೇ ವೇಳೆ ಅವರು ತಾವು ಬರೆದಿರುವ ಜನಪ್ರಿಯ ಕೃತಿಯಾದ ಅಪ್ಪ ಅಂದರೆ ಆಕಾಶ ಪುಸ್ತಕದ ಕುರಿತು ಮಕ್ಕಳೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪುಸ್ತಕದ ಆಶಯ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಮಕ್ಕಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಎಲ್. ವೆಂಕಟೇಶ್ ರೆಡ್ಡಿಯವರು ವಹಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಯುತ ಜೀವನವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಇ. ಜೆ. ಸುಹಾಸಿನಿ ವೆಂಕಟೇಶ್ ರೆಡ್ಡಿ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಹಾಗೂ ಸಿರಿಗೆರೆಯ ಸಮುದಾಯ ಆರೋಗ್ಯ ಕೇಂದ್ರದ ಅಧೀಕ್ಷಕಿ ಶ್ರೀಮತಿ ಶಾರದಾ ಜೈರಾಮ್, ಹಾಗೂ ಎ.ಆರ್. ಮಣಿಕಾಂತ್ ಅವರ ಧರ್ಮಪತ್ನಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎ.ಆರ್. ಮಣಿಕಾಂತ್ ಅವರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅವರ ಧರ್ಮಪತ್ನಿಯವರು ಸುಮಧುರ ಗಾಯನವನ್ನು ಪ್ರಸ್ತುತಪಡಿಸಿದರು.
ಜ್ಞಾನಪೂರ್ಣ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಬೋಧ ಆಚಾರ್ ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಐಸಿಎಸ್‌ಇ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಧನ್ಯವಾದ ಅರ್ಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

















