ಬೆಂಗಳೂರು.ಜುಲೈ.06: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಪಡಿತರ ಚೀಟಿ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಸದ್ಯ ಚಾಲ್ತಿಯಲ್ಲಿರುವ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ಕುರಿತಾದ ಮಹತ್ವದ ಪ್ರಸ್ತಾವನೆಯೊಂದು ಆಹಾರ ಇಲಾಖೆಯ ಮುಂದೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲೇ ಈ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.
ಪ್ರಸ್ತುತ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಳ ಒಳಗಿರಬೇಕಾಗುತ್ತದೆ. ಆದರೆ, ಇದು ಹಲವು ವರ್ಷಗಳ ಹಳೆಯ ಮಾನದಂಡವಾಗಿದ್ದು, ಇಂದಿನ ಆರ್ಥಿಕ ಪರಿಸ್ಥಿತಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಉದಾಹರಣೆಗೆ, ಪ್ರಸ್ತುತ ತಿಂಗಳಿಗೆ ಕನಿಷ್ಠ 15,000 ರೂಪಾಯಿ ದುಡಿಯುವ ಸೆಕ್ಯೂರಿಟಿ ಗಾರ್ಡ್ಗಳು ಅಥವಾ ಸಣ್ಣಪುಟ್ಟ ಉದ್ಯೋಗಿಗಳ ವಾರ್ಷಿಕ ಆದಾಯವೂ ಸಹ ಈ ಮಿತಿಯನ್ನು ಮೀರುತ್ತದೆ. ಹೀಗಾಗಿ, ಹಳೆಯ ನಿಯಮವನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ರಾಜ್ಯದಲ್ಲಿರುವ ಸುಮಾರು 1.24 ಕೋಟಿ ಬಿಪಿಎಲ್ ಕಾರ್ಡ್ಗಳು ರದ್ದಾಗುವ ಭೀತಿ ಎದುರಾಗಿದೆ.
ಈ ಗಂಭೀರ ಸಮಸ್ಯೆಯನ್ನು ಮನಗಂಡಿರುವ ಆಹಾರ ಇಲಾಖೆಯು ಆದಾಯದ ಮಿತಿಯನ್ನು ಪ್ರಸ್ತುತ ಜೀವನ ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆಗಳು ನಡೆಯಲಿದ್ದು, ಎಲ್ಲರ ಒಮ್ಮತದ ಬಳಿಕ ಹೊಸ ಆದಾಯದ ಮಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

















