ದೆಹಲಿ: ಚಾಟ್ ಜಿಪಿಟಿ ಮತ್ತು ಜೆಮಿನಿ ನಂತಹ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು, ಬಳಕೆದಾರರನ್ನು ವಂಚಿಸಲು ಅತ್ಯಂತ ಅತ್ಯಾಧುನಿಕ ‘ಎಐ ಸ್ಕ್ಯಾಮ್’ ಜಾಲವನ್ನು ಹೆಣೆಯುತ್ತಿದ್ದಾರೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.
ಅಧಿಕೃತ ಎಐ ಸೇವೆಗಳಂತೆಯೇ ಹೋಲುವ ನಕಲಿ ವೆಬ್ ಸೈಟ್ ಗಳು, ಫಿಶಿಂಗ್ ಇಮೇಲ್ ಗಳು ಮತ್ತು ಆಕರ್ಷಕ ಚಂದಾದಾರಿಕೆ ಆಫರ್ ಗಳನ್ನು ಸೃಷ್ಟಿಸಿ ಜನರನ್ನು ವಂಚಿಸಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಕ್ವಿಕ್ ಹೀಲ್ ಟೆಕ್ನಾಲಜೀಸ್ನ ಬಿಸಿನೆಸ್ ಹೆಡ್ ಕುಶಾಲ್ ನಹತಾ, ಎಐ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಂಚಕರು ನಕಲಿ ಸಬ್ ಸ್ಕ್ರಿಪ್ಷನ್ ಗಳು, ನಕಲಿ ಪೇಮೆಂಟ್ ಪೋರ್ಟಲ್ ಗಳು, ಗಿಫ್ಟ್ ಕಾರ್ಡ್ ಗಳು ಮತ್ತು ಸುಳ್ಳು ಅಪ್ ಗ್ರೇಡ್ ಆಫರ್ ಗಳ ಮೂಲಕ ಹೊಸ ಮಾದರಿಯ ವಂಚನೆಗೆ ಇಳಿದಿದ್ದಾರೆ ಎಂದು ತಿಳಿಸಿದ್ದಾರೆ.
ಬಳಕೆದಾರರನ್ನು ನಕಲಿ ಜಾಹೀರಾತುಗಳು, ಫಿಶಿಂಗ್ ಇಮೇಲ್ ಗಳು ಅಥವಾ ಅಧಿಕೃತ ವೆಬ್ಸೈಟ್ನಂತೆ ಕಾಣುವ ಕ್ಲೋನ್ ವೆಬ್ಸೈಟ್ ಗಳಿಗೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಬಳಕೆದಾರರು ತಮ್ಮ ಬ್ಯಾಂಕಿಂಗ್ ವಿವರ ಅಥವಾ ಇಮೇಲ್ ಐಡಿ ನಮೂದಿಸಿದ ತಕ್ಷಣ ಅವರ ವೈಯಕ್ತಿಕ ಮಾಹಿತಿ ಕಳವಾಗುತ್ತದೆ ಅಥವಾ ಅವರ ಡಿವೈಸ್ ಗಳಿಗೆ ವೈರಸ್ ಡೌನ್ ಲೋಡ್ ಆಗುತ್ತದೆ.
ಎಮ್ ಫಿಲ್ಟರ್ ಇಟ್ (mFilterIt) ಸಂಸ್ಥೆಯ ವರುಣ್ ಗ್ರೋವರ್ ಮಾತನಾಡಿ, ಸೈಬರ್ ವಂಚನೆಗಳನ್ನು ಹೆಚ್ಚು ನಂಬಲರ್ಹ ಮತ್ತು ವೈಯಕ್ತೀಕರಿಸಿದ ಮಾದರಿಯಲ್ಲಿ ರೂಪಿಸಲು ಅಪರಾಧಿಗಳು ಎಐ ತಂತ್ರಜ್ಞಾನವನ್ನೇ ಬಳಸುತ್ತಿದ್ದಾರೆ ಎಂದಿದ್ದಾರೆ.
ವಂಚಕರು ಎಐ ಸಹಾಯದಿಂದ ನೈಜವಾಗಿ ಕಾಣುವ ವೆಬ್ ಸೈಟ್ ಗಳು, ಎಐ-ಸೃಷ್ಟಿತ ಇನ್ ಫ್ಲುಯೆನ್ಸರ್ ಗಳು, ಡೀಪ್ ಫೇಕ್ ವಿಡಿಯೋಗಳು ಮತ್ತು ಆಟೋಮೇಟೆಡ್ ಚಾಟ್ ಸಪೋರ್ಟ್ ಗಳನ್ನು ಸೃಷ್ಟಿಸುತ್ತಿದ್ದಾರೆ. ಬಳಕೆದಾರರ ಬ್ರೌಸಿಂಗ್ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ವಿಶ್ಲೇಷಿಸಿ, ಅವರಿಗೆ ಸೂಕ್ತವಾಗುವಂತೆ ವಂಚನೆಯ ಜಾಲವನ್ನು ರೂಪಿಸುತ್ತಿರುವುದರಿಂದ ಇದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ಗ್ರೋವರ್ ವಿವರಿಸಿದ್ದಾರೆ.
ಅಧಿಕೃತ ಸೈಟ್ ಮಾತ್ರ ಬಳಸಿ: ಎಐ ಸೇವೆಗಳನ್ನು ಕೇವಲ ಅವುಗಳ ಅಧಿಕೃತ ವೆಬ್ಸೈಟ್ಗಳ ಮೂಲಕವೇ ಸಬ್ಸ್ಕ್ರೈಬ್ ಮಾಡಿ.
ಆಫರ್ಗಳ ಬಗ್ಗೆ ಎಚ್ಚರ: ಅತಿಯಾದ ರಿಯಾಯಿತಿಗಳು, ಉಚಿತ ಟ್ರಯಲ್ಗಾಗಿ ಮುಂಗಡವಾಗಿ ಪೇಮೆಂಟ್ ವಿವರ ಕೇಳುವ ಆಫರ್ಗಳಿಂದ ದೂರವಿರಿ.
ಸುರಕ್ಷತೆ ಹೆಚ್ಚಿಸಿ: ನಿಮ್ಮ ಎಐ ಖಾತೆಗಳಿಗೆ ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (MFA) ಸಕ್ರಿಯಗೊಳಿಸಿ.
ಪೇಮೆಂಟ್ ಗೇಟ್ವೇ ಗಮನಿಸಿ: ನಕಲಿ ಅಥವಾ ಅನುಮಾನಾಸ್ಪದ ಪೇಮೆಂಟ್ ಲಿಂಕ್ಗಳ ಮೂಲಕ ಹಣ ಪಾವತಿಸಬೇಡಿ.
ಕಾನೂನು ಕ್ರಮದ ಎಚ್ಚರಿಕೆ:
ಬಳಕೆದಾರರ ಡೇಟಾವನ್ನು ನಿರ್ವಹಿಸುವ ಸಂಸ್ಥೆಗಳು ಸಹ ತಮ್ಮ ಡೇಟಾ ಸುರಕ್ಷತೆಯನ್ನು ಬಲಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಮಾಹಿತಿ ಸೋರಿಕೆಯಾದರೆ ಭಾರತದ ‘ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ (DPDP), 2023’ ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.


















