ಬೆಂಗಳೂರು.ಜುಲೈ.02: ಬೆಂಗಳೂರು ದಕ್ಷಿಣ ತಾಲೂಕಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಾದಾಪಟ್ಟಣದಲ್ಲಿ ಗುರುವಾರ ಮುಂಜಾನೆ ಭೀಕರ ದುರಂತವೊಂದು ಸಂಭವಿಸಿದೆ. ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟದ ತೀವ್ರತೆಗೆ ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದು, ಬಿಹಾರ ಮೂಲದ ಏಳು ಮಂದಿ ಕಾರ್ಮಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಐದಕ್ಕೂ ಹೆಚ್ಚು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕನಹಳ್ಳಿ ವ್ಯಾಪ್ತಿಯ ಈ ಕಲ್ಲು ಕ್ವಾರಿಯಲ್ಲಿ ಎಂದಿನಂತೆ ಮುಂಜಾನೆ ವೇಳೆ 15ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಬಂಡೆಗಳನ್ನು ಸೀಳಲು ಬಳಸಲಾದ ಜಿಲೆಟಿನ್ ಕಡ್ಡಿಗಳು ಏಕಾಏಕಿ ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಬೃಹತ್ ಕಲ್ಲುಗಳು ಕಾರ್ಮಿಕರ ಮೇಲೆಯೇ ಉರುಳಿ ಬಿದ್ದಿದ್ದು, ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಕಲ್ಲುಗಳ ಅಡಿಯಲ್ಲಿ ಇನ್ನು ಕೆಲವು ಕಾರ್ಮಿಕರು ಸಿಲುಕಿರುವ ಆತಂಕ ಎದುರಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.




















