ಸುದ್ದಿಒನ್, ಬೆಂಗಳೂರು, ಜೂನ್ 22: ಓಸಿ, ಸಿಸಿ ಇಲ್ಲದೆ ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಲು ವರ್ಷಕ್ಕೂ ಹೆಚ್ಚು ಕಾಲದಿಂದ ಕಾಯುತ್ತಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಲು ಸ್ವಾಧೀನ ಪ್ರಮಾಣಪತ್ರ (OC) ನೀಡುವುದರಿಂದ ಒಂದು ಬಾರಿಯ ವಿನಾಯಿತಿ ನೀಡಿ ಸೋಮವಾರ ಆದೇಶ ಹೊರಡಿಸಿದ್ದು,ಆದೇಶ ತ್ವರಿತಗತಿಯಲ್ಲಿ ಜಾರಿಗೆ ತರಲು ಇಂಧನ ಇಲಾಖೆ ಎಲ್ಲಾ ಎಸ್ಕಾಂಗಳಿಗೆ ಮಾರ್ಗಚೂಚಿಯನ್ನು ಹೊರಡಿಸಿದೆ.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅರ್ಹ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಲು ಸ್ವಾಧೀನ ಪ್ರಮಾಣಪತ್ರ (Occupancy Certificate – OC) ಹಾಜರುಪಡಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ ನೀಡಿದೆ. ಈ ವಿನಾಯಿತಿಯು ದಿನಾಂಕ: 31.05.2026 ರಂದು ಅಥವಾ ಅದಕ್ಕೂ ಮುಂಚಿತವಾಗಿ ಪೂರ್ಣಗೊಂಡಿರುವ ಕಟ್ಟಡಗಳಿಗೆ ಮಾತ್ರ ಅನ್ವಯಿಸುತ್ತದೆ.

ಸರ್ಕಾರ ಹೊರಡಿಸಿರುವ ಆದೇಶವನ್ನು ಪಾರದರ್ಶಕವಾಗಿ ಮತ್ತು ಕಾಲಮಿತಿಯಲ್ಲಿ ಜಾರಿಗೊಳಿಸಲು ರಾಜ್ಯದ ಎಲ್ಲಾ ಐದು ಎಸ್ಕಾಂಗಳಿಗೆ ಇಂಧನ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದ್ದು, ಆದೇಶ ಹೊರಬಿದ್ದ 15 ದಿನಗಳ ಒಳಗಾಗಿ ಮಾಲಿಕರಿಂದ ನಿಯಮಾನುಸಾರ ಅರ್ಜಿ ಪಡೆದು ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ದೇಶಿಸಲಾಗಿದೆ.
ಮಾರ್ಗಸೂಚಿ ವಿವರ :
ಶಾಶ್ವತ ಸಂಪರ್ಕಕ್ಕೆ ಕೋರಿರುವ ಅರ್ಜಿಗಳು: ದಿನಾಂಕ 31.05.2026 ರ ಒಳಗೆ ಕಟ್ಟಡ ಪೂರ್ಣಗೊಂಡು, ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು, ಅರ್ಜಿಯ ವಿವರಗಳನ್ನ , ಅರ್ಜಿ ಸಂಖ್ಯೆ (Application ID) ಮತ್ತು ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕು. ಅರ್ಜಿದಾರರು ಹಾಗೂ ಸೇವಾ ಸಂಪರ್ಕ ಕಲ್ಪಿಸಿರುವ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿರುವ ಕಟ್ಟಡದ ಭೌಗೋಳಿಕ ಮಾಹಿತಿ ಹಾಗೂ ದಿನಾಂಕ , ಸಮಯ ಹಾಗೂ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಅಪಲೋಡ್ ಮಾಡಿಕೊಳ್ಳಬೇಕು.
ಶಾಶ್ವತ ಸಂಪರ್ಕಕ್ಕೆ ಕೋರಿರದ ಪ್ರಕರಣಗಳು: ದಿನಾಂಕ 31.05.2026 ರ ಒಳಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿದ್ದು, ಇದುವರೆಗೆ ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸದ ಪ್ರಕರಣಗಳಲ್ಲಿ ಅರ್ಜಿಯಲ್ಲಿ ಸಲ್ಲಿಸಿರುವ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲಿರುವ ಅರ್ಜಿದಾರರ ಹೆಸರು ಹಾಗೂ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಿರುವ ಅರ್ಜಿಯಲ್ಲಿರುವ ಅರ್ಜಿದಾರರ ಹೆಸರು ಒಂದೇ ಎಂಬ ಕುರಿತ ಖಾತರಿಪಡಿಸಿಕೊಳ್ಳುವುದು. ಸರ್ಕಾರ ಆದೇಶ ಹೊರಡಿಸಿದ 15 ದಿನಗಳ ಒಳಗೆ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಹಾಗೂ ಸೇವಾ ಸಂಪರ್ಕ ಕಲ್ಪಿಸಿರುವ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿರುವ ಕಟ್ಟಡದ ಭೌಗೋಳಿಕ ಮಾಹಿತಿ ಹಾಗೂ ದಿನಾಂಕ , ಸಮಯ ಹಾಗೂ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಅಪಲೋಡ್ ಮಾಡಿಕೊಳ್ಳಬೇಕು.
ತಾತ್ಕಲಿಕ/ ಶಾಶ್ವತ ಸಂಪರ್ಕ ಪಡೆಯದ ಪ್ರಕರಣಗಳು: ದಿನಾಂಕ 31.05.2026 ರ ಒಳಗೆ ಕಟ್ಟಡ ಪೂರ್ಣಗೊಂಡಿದ್ದರೂ, ಇದುವರೆಗೆ ಯಾವುದೇ ತಾತ್ಕಾಲಿಕ ಅಥವಾ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸದ ಪ್ರಕರಣಗಳಿದ್ದರೆ, ಈ ವರ್ಗದ ಅರ್ಜಿಗಳನ್ನು ಉಪ ವಿಭಾಗಗಳ ಕಚೇರಿಗಳಲ್ಲಿ ಭೌತಿಕವಾಗಿ ನೋಂದಾಯಿಸಲು ಅವಕಾಶ ಕಲ್ಪಿಸಬೇಕು.
31.05.2026 ರ ಒಳಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ತಾತ್ಕಾಲಿಕ ಹಾಗೂ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸದಿರುವ ಪ್ರಕರಣಗಳಲ್ಲಿ ಮಾಲಿಕರು ಸರ್ಕಾರಿ ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಟ್ಟಡದ ಭೌಗೋಳಿಕ ಮಾಹಿತಿ, ದಿನಾಂಕ ಮತ್ತು ಸಮಯಮುದ್ರೆ ಒಳಗೊಂಡ ಜಿಯೋ ಟ್ಯಾಗ್ ಪೋಟೋವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಸಂಬಂಧಪಟ್ಟ ಕ್ಷೇತ್ರಾಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿದ ನಂತರ ಸ್ಥಳ ಪರಿಶೀಲನೆಮಾಡಿ ಕಟ್ಟಡ ಪೂರ್ಣಗೊಂಡಿರುವುದನ್ನು ಖಾತರಿಪಡಿಸಿಕೊಂಡು ಪರಿಶೀಲಮನಾ ವರದಿಯೊಂದಿಗೆ ಸ್ವಯಂ ಛಾಯಚಿತ್ರ ಹಾಗೂ ಸಮಯಮುದ್ರೆಯ ಭೌಗೋಳಿಕ ಮಾಹಿತಿವಿರುವ ಜಿಯೋ ಟ್ಯಾಗ್ ಛಾಯಚಿತ್ರವನ್ನು ಸಹಾಯಕ ಅಭಿಯಂತರರ ಕಚೇರಿಗೆ ಸಲ್ಲಿಸಬೇಕು. ಸರ್ಕಾರ ಆದೇಶ ಹೊರಡಿಸಿದ 15 ದಿನಗಳ ನಂತರ ಯಾವುದೇ ಅರ್ಜಿಯನ್ನು ಕ್ಷೇತ್ರಾಧಿಕಾರಿಗಳು ಯಾವುದೇ ಹಂತದಲ್ಲಿ ಬಾಕಿ ಉಳಿಸಿಕೊಳ್ಳಬಾರದು. ಸರ್ಕಾರದ ಆದೇಶದಲ್ಲಿ ಸೂಚಿಸಿರು ಷರತ್ತುಗಳನ್ನು ಪೂರೈಸುವ ಕುರಿತು ಖಚಿತಪಡಿಸಿಕೊಂಡ ನಂತರ ಸಹಾಯಕ ಅಭಿಯಂತರರು , ಸಿಸಿಬಿ ತಂತ್ರಾಂಶದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಯನ್ನು ಅಪಲೋಡ್ ಮಾಡಬೇಕು. ಅರ್ಜಿದಾರರು ಹಾಗೂ ಸೇವಾ ಸಂಪರ್ಕ ಕಲ್ಪಿಸಿರುವ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿರುವ ಕಟ್ಟಡದ ಭೌಗೋಳಿಕ ಮಾಹಿತಿ ಹಾಗೂ ದಿನಾಂಕ , ಸಮಯ ಹಾಗೂ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಅಪಲೋಡ್ ಮಾಡಿಕೊಳ್ಳಬೇಕು.
ವಸತಿ ಕಟ್ಟಡಗಳು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು (ULB) ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2400 ಚದರ ಅಡಿಗಳವರೆಗಿನ ನಿವೇಶನಗಳಲ್ಲಿ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) (2800 ಚದರ ಅಡಿ) ನಿರ್ಮಿಸಲಾಗಿರುವ ಜಿ+3 (G+3) ಅಥವಾ ಪಾರ್ಕಿಂಗ್+4 (Stilt+4) ಅಂತಸ್ತಿನ ವಸತಿ ಕಟ್ಟಡಗಳು.
ಕೃಷಿ ಸಂಬಂಧಿತ ಕಟ್ಟಡಗಳು: ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನು ಇಡುವ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ — ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣದ ಮಿತಿ ಇಲ್ಲದೆ OC ಇಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















