ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ತಳುಕು ಹಾಕಲಾಗುತ್ತಿದೆ ಎಂದು ಖ್ಯಾತ ನಟ Prakash Raj ಸ್ಪಷ್ಟಪಡಿಸಿದ್ದಾರೆ. ಅನ್ಯಾಯಗಳ ವಿರುದ್ಧ ಹಾಗೂ ಬಿಜೆಪಿ ವಿರುದ್ಧ ಧ್ವನಿ ಎತ್ತುತ್ತಿರುವ ಕಾರಣದಿಂದಲೇ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರಾಜ್, ಪ್ರಕರಣದ ಪ್ರಮುಖ ಸಾಕ್ಷಿದಾರನೆಂದು ಗುರುತಿಸಲ್ಪಟ್ಟಿರುವ ಚಿನ್ನಯ್ಯ ತನ್ನೊಂದಿಗೆ ಸಂಪರ್ಕ ಸಾಧಿಸಿದ್ದನ್ನು ಒಪ್ಪಿಕೊಂಡರು. “ಚಿನ್ನಯ್ಯ ನನಗೆ ಕರೆ ಮಾಡಿದ್ದು ನಿಜ. ಆದರೆ ಫೋನ್‌ನಲ್ಲಿ ಮಾತನಾಡುವ ಬದಲು ವಾಯ್ಸ್ ಮೆಸೇಜ್ ಕಳುಹಿಸುವಂತೆ ಹೇಳಿದ್ದೆ. ಬಳಿಕ ಆ ಮಾಹಿತಿಯನ್ನು ಎಸ್‌ಐಟಿ ಮುಖ್ಯಸ್ಥರಿಗೆ ತಕ್ಷಣವೇ ರವಾನಿಸಿದ್ದೆ” ಎಂದು ವಿವರಿಸಿದರು.
ಚಿನ್ನಯ್ಯ ತನ್ನ ಬಳಿ ಭಯ ವ್ಯಕ್ತಪಡಿಸಿ ಹಲವು ವಿಷಯಗಳನ್ನು ಹೇಳಿಕೊಳ್ಳಲು ಬಯಸಿದ್ದಾನೆ. ಆಗ “ನಿನಗೆ ಗೊತ್ತಿರುವ ಸತ್ಯವನ್ನು ಎಸ್‌ಐಟಿ ಮುಂದೆ ಹೇಳು. ಸತ್ಯ ಹೇಳಿದರೆ ಇಡೀ ಸಮಾಜ ನಿನ್ನನ್ನು ಗೌರವಿಸುತ್ತದೆ, ನಾನು ಕೂಡ ನಿನ್ನನ್ನು ತಬ್ಬಿಕೊಳ್ಳುತ್ತೇನೆ” ಎಂದು ಹೇಳಿದ್ದಾಗಿ ಪ್ರಕಾಶ್ ರಾಜ್ ತಿಳಿಸಿದರು.
ಕೆಲ ದಿನಗಳ ಬಳಿಕ ಚಿನ್ನಯ್ಯ ವಿರುದ್ಧವೇ ತನಿಖಾ ಸಂಸ್ಥೆಗಳಿಂದ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ, ಅವನಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದು ಅವರು ಹೇಳಿದರು.
ತಮ್ಮ ವಿರುದ್ಧ 200 ಕೋಟಿ ರೂಪಾಯಿ ಬಜೆಟ್‌ನ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ನಾನು ಅಷ್ಟು ಹಣವನ್ನು ಎಲ್ಲಿಂದ ತರಲಿ? ವಿಚಾರಗಳನ್ನು ತಿರುಚಿ ನನ್ನನ್ನು ಧರ್ಮ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸೌಜನ್ಯ ಸೇರಿದಂತೆ ಅನುಮಾನಾಸ್ಪದ ಸಾವುಗಳ ಕುರಿತು ಪ್ರಶ್ನೆ ಎತ್ತಿರುವುದು ನ್ಯಾಯಕ್ಕಾಗಿ ಮಾತ್ರ, ಯಾವುದೇ ಕ್ಷೇತ್ರ ಅಥವಾ ಸಂಸ್ಥೆಯ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಮೃತರಾದ ಹೆಣ್ಣು ಮಕ್ಕಳು ನಮ್ಮ ಸಮಾಜದವರಲ್ಲವೇ? ಅವರ ಸಾವಿನ ಸತ್ಯ ಹೊರಬರಬೇಕು ಎಂಬುದೇ ನನ್ನ ಆಶಯ” ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ ಅವರನ್ನು ಒಮ್ಮೆ ಭೇಟಿ ಮಾಡಿದ್ದಾಗಿ ಹೇಳಿದ ಪ್ರಕಾಶ್ ರಾಜ್, “ಅವರು ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ವ್ಯಕ್ತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ “ಸೋಲ್ಡ್ ಔಟ್ ಮೀಡಿಯಾ” ಎಂಬ ಪದ ಬಳಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದರು. “ಪ್ರೆಸ್ ಕ್ಲಬ್‌ಗೆ ಕಳುಹಿಸಿದ ಅಧಿಕೃತ ಆಹ್ವಾನದಲ್ಲಿ ಆ ಪದ ಬಳಸಿಲ್ಲ. ಮಾಧ್ಯಮದವರನ್ನು ನಾನು ಆತ್ಮೀಯರಂತೆ ಗೌರವಿಸುತ್ತೇನೆ” ಎಂದರು.ರಾಜಕೀಯ ಪಕ್ಷ ಅಥವಾ ಸರ್ಕಾರವನ್ನು ಟೀಕಿಸುವುದನ್ನು ಧರ್ಮ ವಿರೋಧಿ ಎಂದು ಬಿಂಬಿಸುವುದು ತಪ್ಪು ಎಂದು ಹೇಳಿದ ಪ್ರಕಾಶ್ ರಾಜ್, “ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವುದು ಹಿಂದುತ್ವವನ್ನು ಪ್ರಶ್ನಿಸಿದಂತಲ್ಲ” ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















