ಕೃತ್ವಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ, ಬಹುನಿರೀಕ್ಷಿತ ‘ಲವ್ ಸೀಸನ್ಸ್’ ಚಿತ್ರವು ಇದೇ ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿತ್ರದ ಮೂರು ಹಾಡುಗಳಿಗೆ ಕೇಳುಗರಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡುಗಳ ಭರ್ಜರಿ ಗೆಲುವಿನ ಸಿಹಿಯನ್ನು ಚಿತ್ರತಂಡವು ಇತ್ತೀಚೆಗೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಮೂಲಕ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ-ಗಾಯಕಿಯರು ಹಾಗೂ ಸಾಹಿತಿಗಳನ್ನು ಒಟ್ಟಿಗೆ ಸೇರಿಸಿ, ಹಾಡುಗಳ ಯಶಸ್ಸನ್ನು ತಂಡ ಸಂಭ್ರಮಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಗೀತಸಾಹಿತಿ ಕೆ. ಕಲ್ಯಾಣ್ ಅವರು, ಹಾಡುಗಳು ಯಾವತ್ತಿಗೂ ಚಿತ್ರವೊಂದರ ಆಮಂತ್ರಣ ಪತ್ರಿಕೆಯಿದ್ದಂತೆ. ಹಿಂದೆಲ್ಲಾ ಆಡಿಯೋ ರಿಲೀಸ್ ಮಾಡುವ ಮೂಲಕವೇ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತಿತ್ತು. ಆದರೆ ಇಂದು ಟ್ರೆಂಡ್ ಬದಲಾಗಿದೆ. ಈ ಬದಲಾದ ಕಾಲದಲ್ಲೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಸದಾ ನೆನಪಿನಲ್ಲಿ ಉಳಿಯುವಂತಹ ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಆರಂಭದಲ್ಲಿ ನನಗೆ ವೀರ್ ಸಮರ್ಥ್ ಬಿಟ್ಟರೆ ಬೇರೆ ಯಾರ ಮುಖ ಪರಿಚಯವೂ ಇರಲಿಲ್ಲ. ಆದರೂ ನಾವೆಲ್ಲರೂ ಒಟ್ಟಾಗಿ ಸೇರಿ ಇಂತಹದೊಂದು ಸುಂದರ ಹಾಡನ್ನು ಸೃಷ್ಟಿಸಿದ್ದಕ್ಕೆ ನನಗೆ ತುಂಬು ಖುಷಿಯಿದೆ ಎಂದರು.ಇದೇ ವೇಳೆ ಅವರು ಇಡೀ ಪ್ರತಿಭಾನ್ವಿತ ತಂಡಕ್ಕೆ ಗೆಲುವಾಗಲಿ ಎಂದು ಮನಸಾರೆ ಹಾರೈಸಿದರು.
ಮತ್ತೊಬ್ಬ ಜನಪ್ರಿಯ ಗೀತ ರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು “ಲವ್ ಸೀಸನ್ಸ್” ಚಿತ್ರದ ಹಾಡುಗಳ ಗೆಲುವಿನ ಭಾಗವಾಗಿರುವುದಕ್ಕೆ ತಮ್ಮ ಹೆಮ್ಮೆಯ ಮಾತುಗಳನ್ನು ಹಂಚಿಕೊಂಡರು.
ಎನ್.ಆರ್ ಸ್ಟುಡಿಯೋಸ್ ಬ್ಯಾನರ್ನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ಅವರು ಅತ್ಯಂತ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕೃತ್ವಿಕ್ ಅವರ ನಿರ್ದೇಶನವಿದ್ದರೆ, ವೀರ್ ಸಮರ್ಥ್ ಅವರ ಮಧುರ ಸಂಗೀತವಿದೆ. ಚಿತ್ರದ ಹಾಡುಗಳಿಗೆ ಕೆ. ಕಲ್ಯಾಣ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.
ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದು, ಅವರಿಗೆ ಜೋಡಿಯಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಸ್ಯಾಂಡಲ್ವುಡ್ನ ಪ್ರಮುಖ ಕಲಾವಿದರಾದ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಖ್ಯಾತಿಯ ಸದಾನಂದ, ಹುಲಿ ಕಾರ್ತಿಕ್ ಮತ್ತು ಬಾಲನಟಿ ಬೇಬಿ ರೀತು ಸಿಂಗ್ ಮುಂತಾದ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.
ಒಟ್ಟಾರೆಯಾಗಿ, ಹಾಡುಗಳ ಮೂಲಕವೇ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ‘ಲವ್ ಸೀಸನ್ಸ್’ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈ ಪ್ರತಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಎನ್.ಆರ್ ಮಂಜುನಾಥ್ (ನೀಲೇರಿ), ನಿರ್ದೇಶಕ ಕೃತ್ವಿಕ್, ಹಿರಿಯ ಗೀತಸಾಹಿತಿ ಕೆ.ಕಲ್ಯಾಣ್, ಸಂಗೀತ ನಿರ್ದೇಶಕ ವೀರ್ ಸಮರ್ಥ್, ಗೀತ ರಚನೆಕಾರರಾದ ಪ್ರಮೋದ್ ಮರವಂತೆ, ಸಾಯಿ ಸರ್ವೇಶ್, ನಾಯಕ ಮುಕುಂದ ರಾಮಸ್ವಾಮಿ, ನಾಯಕಿಯರು ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ, ಗಾಯಕಿ ಪ್ರಜ್ಞಾ ಮರಾಠೆ ಉಪಸ್ಥಿತರಿದ್ದರು.











