Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

20 ವರ್ಷಗಳಿಂದ ಪರಿಹಾರ ಸಿಗಲಿಲ್ಲ ಎನ್ನುವ ಆಕ್ರೋಶ; ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ರೈತ!

---Advertisement---

ಬಾಗಲಕೋಟೆ: ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರೊಬ್ಬರು ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ರಸ್ತೆ ಯೋಜನೆಗಾಗಿ 2004ರಲ್ಲಿ ದಾದೇನವರ್ ವೃತ್ತದ ಸಮೀಪದ ರೈತ ಬಸವರಾಜ ದೊಡ್ಡಮನಿ ಅವರ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಭೂ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ರೈತ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಬಿಟಿಡಿಎ ಕಚೇರಿಗೆ ಆಗಮಿಸಿದ ಬಸವರಾಜ ದೊಡ್ಡಮನಿ, ಕೇಸ್ ವರ್ಕರ್ ನೀಲಕಂಠ ಅಂಕದ್ ಅವರನ್ನು ಪ್ರಶ್ನಿಸಿ, ಬಳಿಕ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಈ ವೇಳೆ ಡಿಎಸ್‌ಎಸ್ (ದಲಿತ ಸಂಘರ್ಷ ಸಮಿತಿ) ಮುಖಂಡರು ಸಫಾಯಿ ಕರ್ಮಚಾರಿಗಳಿಗೆ ಪ್ಲಾಟ್ ಹಂಚಿಕೆ ವಿಚಾರವಾಗಿ ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯ ನಡುವೆಯೇ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದವರು ವಿಡಿಯೋ ಚಿತ್ರೀಕರಿಸಿದ್ದಾರೆ.

ಘಟನೆಯ ಬಳಿಕ ರೈತ ಬಸವರಾಜ ದೊಡ್ಡಮನಿ ತಮ್ಮ ಅಳಲನ್ನು ವ್ಯಕ್ತಪಡಿಸಿ, ಭೂಮಿ ಕಳೆದುಕೊಂಡು ವರ್ಷಗಳಾದರೂ ಪರಿಹಾರ ಸಿಗದೇ ಕಚೇರಿಗೆ ಅಲೆದಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಸ್ಪಂದನೆ ದೊರೆಯಲಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಇತ್ತ ಸರ್ಕಾರಿ ಅಧಿಕಾರಿಗೆ ಹಲ್ಲೆ ನಡೆಸಿದ ಆರೋಪದಡಿ ಬಸವರಾಜ ದೊಡ್ಡಮನಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಬೆದರಿಕೆ ಹಾಕಿದ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಟಿಡಿಎ ಕೇಸ್ ವರ್ಕರ್ ನೀಲಕಂಠ ಅಂಕದ್, “ರೈತನ ಫೈಲ್‌ಗೆ ನನ್ನ ಸಂಬಂಧವೇ ಇರಲಿಲ್ಲ. ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಲು ಸೂಚಿಸಿದ್ದೆ. ಆದರೆ ಏಕಾಏಕಿ ನನ್ನ ಮೇಲೆ ಆರೋಪ ಮಾಡಿ ಹಲ್ಲೆ ನಡೆಸಲಾಗಿದೆ. ಇದರಿಂದ ನನಗೆ ಮಾನಸಿಕವಾಗಿ ನೋವಾಗಿದೆ. ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.ಘಟನೆ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರೈತರ ಸಮಸ್ಯೆ ಹಾಗೂ ಪರಿಹಾರ ವಿತರಣೆಯ ವಿಳಂಬದ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now