Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೋದಿ ಮೇಲಿನ ಗೌರವ ಉಳಿಸಿ ಬಿಜೆಪಿ ತೊರೆದ ಅಣ್ಣಾಮಲೈ; ರಜನಿಕಾಂತ್ ಫೋನ್ ಕಾಲ್ ರಹಸ್ಯ ಬಯಲು

---Advertisement---

ಸುದ್ದಿಒನ್, ಚೆನೈ, ಜೂನ್‌. 05 : ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಯಣಕ್ಕೆ ಚಾಲನೆ ನೀಡಿದ್ದಾರೆ. ಈ ನಿರ್ಧಾರ ತಮಿಳುನಾಡು ಮಾತ್ರವಲ್ಲದೆ ರಾಷ್ಟ್ರೀಯ ರಾಜಕೀಯ ವಲಯದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ತಮಿಳುನಾಡಿನಲ್ಲಿ ಬಿಜೆಪಿಯನ್ನು ಮುನ್ನಡೆಸುವ ವಿಚಾರದಲ್ಲಿ ತಮ್ಮ ಸಿದ್ಧಾಂತ ಮತ್ತು ಕಾರ್ಯತಂತ್ರಗಳು ಪಕ್ಷದ ರಾಷ್ಟ್ರೀಯ ನಾಯಕತ್ವದ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಹಲವು ಬಾರಿ ಚರ್ಚೆ ನಡೆಸಿದರೂ ಫಲ ದೊರಕದ ಹಿನ್ನೆಲೆಯಲ್ಲಿ ಪಕ್ಷದಿಂದ ಹೊರಬರುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿಯನ್ನು ತೊರೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳಿರುವ ಅಣ್ಣಾಮಲೈ, ಪಕ್ಷದಲ್ಲಿ ಅವಕಾಶ ನೀಡಿದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ತಮ್ಮ ರಾಜಕೀಯ ಪ್ರವೇಶದ ಹಿಂದಿನ ವಾಸ್ತವವನ್ನು ಬಹಿರಂಗಪಡಿಸಿದ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಭರವಸೆ ಮತ್ತು ಮಾತಿನ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಸೇರ್ಪಡೆಯಾಗಿದ್ದೆ ಎಂದು ಹೇಳಿದ್ದಾರೆ.
ರಾಜಕೀಯಕ್ಕೆ ಬರುವ ಮುನ್ನ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದರು ಎಂಬ ಅಚ್ಚರಿಯ ಮಾಹಿತಿಯನ್ನೂ ಅಣ್ಣಾಮಲೈ ಬಹಿರಂಗಪಡಿಸಿದ್ದಾರೆ. ಆದರೆ ಬಿಜೆಪಿಗೆ ಸೇರುವುದಾಗಿ ಈಗಾಗಲೇ ಬಿ.ಎಲ್. ಸಂತೋಷ್ ಅವರಿಗೆ ಮಾತು ನೀಡಿದ್ದ ಕಾರಣ ಆ ಆಹ್ವಾನವನ್ನು ವಿನಮ್ರವಾಗಿ ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.

ತಾವು ಪಕ್ಷ ತೊರೆಯುವ ನಿರ್ಧಾರವನ್ನು 2025ರ ಡಿಸೆಂಬರ್‌ನಲ್ಲಿಯೇ ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದೆ. ಆದರೆ ಚುನಾವಣೆ ಸಂಬಂಧಿತ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮುಂದೂಡಲಾಗಿತ್ತು ಎಂದು ಅವರು ಹೇಳಿದ್ದಾರೆ.ಇನ್ನು ತಮಿಳುನಾಡಿನಲ್ಲಿ ವ್ಯಕ್ತಿ ಆರಾಧನೆಗೆ ತೆರೆ ಎಳೆಯುವ ಉದ್ದೇಶದಿಂದ ಹೊಸ ರಾಜಕೀಯ ವೇದಿಕೆಯನ್ನು ಆರಂಭಿಸಿರುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ‘ಅಣ್ಣಾಮಲೈ ಮಕ್ಕಳ್ ಇಯಕ್ಕಂ’ (AMI) ಹೆಸರಿನ ಹೊಸ ರಾಜಕೀಯ ಚಳವಳಿಗೆ ಚಾಲನೆ ನೀಡಲಾಗಿದ್ದು, ಆರಂಭಿಕ ಹಂತದಲ್ಲೇ ಸಾವಿರಾರು ಮಂದಿ ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಜೀನಾಮೆ ನೀಡುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ತಮಿಳುನಾಡು ಬಿಜೆಪಿಯಲ್ಲಿರುವ ಸಮಸ್ಯೆಗಳು ಮತ್ತು ತಮ್ಮ ನಿರ್ಧಾರದ ಕಾರಣಗಳನ್ನು ವಿವರಿಸಿದ್ದಾಗಿ ಅಣ್ಣಾಮಲೈ ಹೇಳಿದ್ದಾರೆ. ಎಲ್ಲ ವಿಚಾರಗಳನ್ನು ಮುಖಾಮುಖಿಯಾಗಿ ತಿಳಿಸಿದ ಬಳಿಕವೇ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ಇತ್ತ ಅಣ್ಣಾಮಲೈ ನಿರ್ಗಮನಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಅಣ್ಣಾಮಲೈ ಪಕ್ಷ ತೊರೆದರೂ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಪಕ್ಷದ ಸಂಘಟನೆ ಮತ್ತಷ್ಟು ಬಲವಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಅಣ್ಣಾಮಲೈ ಅವರ ಈ ನಿರ್ಧಾರ ತಮಿಳುನಾಡಿನ ರಾಜಕೀಯ ಸಮೀಕರಣಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ