ಸುದ್ದಿಒನ್,ಬೆಂಗಳೂರು,ಮೇ.30: “ಸ್ಥಾನಗಳು ಬದಲಾಗಬಹುದು, ಆದರೆ ಜನಮನದಲ್ಲಿ ಶಾಶ್ವತವಾಗಿ ಉಳಿಯುವ ನಾಯಕನಿಗೆ ವಿದಾಯ ಇರುವುದಿಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಕಟಪೂರ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ಆಡಳಿತ ಮತ್ತು ವ್ಯಕ್ತಿತ್ವವನ್ನು ನೆನೆದು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಬಡವರ, ಶೋಷಿತರ ಧ್ವನಿಯಾಗಿದ್ದ ನಾಯಕ
ಮೈಸೂರಿನ ಸಾಮಾನ್ಯ ರೈತ ಕುಟುಂಬದಿಂದ ಬಂದು ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೂ, ಸಿದ್ದರಾಮಯ್ಯನವರು ಕೊನೆಯ ಕ್ಷಣದವರೆಗೂ ಬಡವರ, ಹಿಂದುಳಿದವರ ಹಾಗೂ ಶೋಷಿತರ ಧ್ವನಿಯಾಗಿ ಉಳಿದಿದ್ದರು ಎಂದು ಹೆಬ್ಬಾಳ್ಕರ್ ಸ್ಮರಿಸಿದ್ದಾರೆ.
“ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ ಒಂದು ಹುದ್ದೆಯಿಂದ ಇಳಿಯುವುದು ಮತ್ತು ಜನರ ಹೃದಯದಿಂದ ಇಳಿಯುವುದು ಎರಡು ಬೇರೆ ಸಂಗತಿಗಳು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅವರು ಬರೆದ ಅಧ್ಯಾಯ ಎಂದೆಂದಿಗೂ ಅಳಿಸಲಾಗದು. ಅವರು ಕೇವಲ ಮುಖ್ಯಮಂತ್ರಿಯಷ್ಟೇ ಆಗಿರಲಿಲ್ಲ; ಕೋಟ್ಯಂತರ ಕನ್ನಡಿಗರ ಆತ್ಮವಿಶ್ವಾಸವಾಗಿದ್ದರು” ಎಂದು ಅವರು ಬಣ್ಣಿಸಿದ್ದಾರೆ.
ತಂದೆಯಂತೆ ಬೆನ್ನು ತಟ್ಟಿದ್ದರು
ತಮ್ಮ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ಕೃತಜ್ಞತೆಯಿಂದ ನೆನೆದಿರುವ ಲಕ್ಷ್ಮೀ ಹೆಬ್ಬಾಳ್ಕರ್, “ನಾನು ಸಂಕಷ್ಟಗಳನ್ನು ಎದುರಿಸಿದ ಸಂದರ್ಭಗಳಲ್ಲಿ ಅವರು ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದ್ದರು. ನನ್ನ ಮೇಲೆ ನಂಬಿಕೆ ಇಟ್ಟು ಸಚಿವೆಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದು ನನ್ನ ರಾಜಕೀಯ ಬದುಕಿನ ಅತ್ಯಂತ ಅಮೂಲ್ಯ ಅಧ್ಯಾಯ. ಅವರ ದೂರದೃಷ್ಟಿ ಮತ್ತು ಜನರ ನೋವಿಗೆ ಸ್ಪಂದಿಸುವ ಗುಣವನ್ನು ಹತ್ತಿರದಿಂದ ಕಂಡು ಕಲಿಯುವ ಸೌಭಾಗ್ಯ ನನಗೆ ಸಿಕ್ಕಿತು” ಎಂದಿದ್ದಾರೆ.
ಆದರ್ಶಗಳು ಶಾಶ್ವತ
ರಾಜಕೀಯದಲ್ಲಿ ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ, ಆದರೆ ಜನರಿಗಾಗಿ ಬದುಕಿದ ನಾಯಕರ ಸೇವೆ ಮತ್ತು ಆದರ್ಶಗಳು ಶಾಶ್ವತವಾಗಿರುತ್ತವೆ. ಸಿದ್ದರಾಮಯ್ಯನವರು ಅಧಿಕಾರದ ಕುರ್ಚಿಯಿಂದ ಎದ್ದಿರಬಹುದು, ಆದರೆ ಅವರು ಕಟ್ಟಿದ ಸಾಮಾಜಿಕ ನ್ಯಾಯದ ಚಳವಳಿ ಮತ್ತು ಜನಪರ ರಾಜಕಾರಣ ನಮ್ಮನ್ನು ಸದಾ ಮುನ್ನಡೆಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾಯಕತ್ವ ಎಂದರೆ ಕೇವಲ ಅಧಿಕಾರವಲ್ಲ, ಜನರ ಹೃದಯದಲ್ಲಿ ಅಚ್ಚಳಿಯದ ಗುರುತು ಮೂಡಿಸುವುದು” ಎಂದು ಹೇಳಿರುವ ಲಕ್ಷ್ಮೀ ಹೆಬ್ಬಾಳ್ಕರ್, ಮುಂದಿನ ದಿನಗಳಲ್ಲೂ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ನಮಗೆ ಶಕ್ತಿಯಾಗಲಿ ಎಂದು ಆಶಿಸಿ, ತಮ್ಮ ಪ್ರೀತಿ ಹಾಗೂ ಹೃತ್ಪೂರ್ವಕ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.

ಸ್ಥಾನಗಳು ಬದಲಾಗಬಹುದು… ಆದರೆ ಜನಮನದಲ್ಲಿ ಶಾಶ್ವತವಾಗಿ ಉಳಿಯುವ ನಾಯಕನಿಗೆ ವಿದಾಯ ಇರುವುದಿಲ್ಲ.
ಮೈಸೂರಿನ ನೆಲದ ಒಂದು ಸಾಮಾನ್ಯ ರೈತ ಕುಟುಂಬದಿಂದ ಹೊರಟು, ಕರ್ನಾಟಕದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದರೂ, ತಮ್ಮ ಅಧಿಕಾರದ ಕೊನೆಯ ಕ್ಷಣದವರೆಗೂ ಬಡವರ, ಹಿಂದುಳಿದವರ, ಶೋಷಿತರ ಮತ್ತು ದುರ್ಬಲರ ಧ್ವನಿಯಾಗಿಯೇ… pic.twitter.com/hY2uIMwd12
— Laxmi Hebbalkar (@laxmi_hebbalkar) May 30, 2026
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















