ಸುದ್ದಿಒನ್,ಬೆಂಗಳೂರು,ಮೇ.30: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ರಾಜಕೀಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ನೊಣವಿನಕೆರೆಯ ಅಜ್ಜಯ್ಯ ನೀಡಿದ್ದ ಆ ಶುಭ ಮುಹೂರ್ತದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗದ್ದುಗೆ ಏರಲಿದ್ದಾರೆ. ಜೂನ್ 3ರ ಬುಧವಾರ ಸಂಜೆ 4:05ಕ್ಕೆ ಡಿಕೆಶಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಧಿಕೃತ ಮುದ್ರೆ ಒತ್ತಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಅವರು ಇಂದು (ಮೇ 30) ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು. ಡಿಕೆಶಿ ಸಲ್ಲಿಸಿದ ಪತ್ರವನ್ನು ಪುರಸ್ಕರಿಸಿದ ರಾಜ್ಯಪಾಲರು, ತಕ್ಷಣವೇ ಸರ್ಕಾರ ರಚಿಸಲು ಆಹ್ವಾನ ನೀಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮೇ 30, 2026 ರಂದು ನೀವು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಸಲ್ಲಿಸಿದ ಪತ್ರ ನನಗೆ ತಲುಪಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಹಾಗೂ ನಿಮ್ಮ ಸಚಿವ ಸಂಪುಟದ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನಾನು ನಿಮಗೆ ಮುಕ್ತ ಆಹ್ವಾನ ನೀಡುತ್ತಿದ್ದೇನೆ ಎಂದು ರಾಜಪಾಲರ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ಕನಕಪುರ ಬಂಡೆ ಎಂದೇ ಖ್ಯಾತರಾದ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಮಹತ್ತರ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಜ್ಜಯ್ಯನ ಪರಮ ಭಕ್ತರಾಗಿರುವ ಡಿಕೆಶಿ, ಅವರು ಸೂಚಿಸಿದ ಸಮಯದಲ್ಲೇ ಪದಗ್ರಹಣ ಮಾಡುತ್ತಿರುವುದು ವಿಶೇಷ.
ದಿನಾಂಕ: ಜೂನ್ 3, 2026 (ಬುಧವಾರ)
ಸಮಯ: ಸಂಜೆ ಸರಿಯಾಗಿ 4:05 ಗಂಟೆಗೆ
ಸ್ಥಳ: ಬೆಂಗಳೂರಿನ ಲೋಕಭವನದ ಆವರಣ
ರಾಜ್ಯಪಾಲರು ಕಳುಹಿಸಿರುವ ಈ ಅಧಿಕೃತ ಆಹ್ವಾನ ಪತ್ರದ ಪ್ರತಿ ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಿದೆ. ಇದರೊಂದಿಗೆ ಮುಂದಿನ ವಾರದಿಂದ ಕರ್ನಾಟಕದಲ್ಲಿ ಅಧಿಕೃತವಾಗಿ ‘ಡಿಕೆಶಿ ಪರ್ವ’ ಆರಂಭವಾಗುವುದು ಗ್ಯಾರಂಟಿ ಆದಂತಾಗಿದೆ.











