ಬೆಂಗಳೂರು.ಸೆಪ್ಟೆಂಬರ್.02 : ನಮ್ಮ ಸರ್ಕಾರ 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಶೈಕ್ಷಣಿಕ ಜಿಲ್ಲಾವಾರು ಗರಿಷ್ಠ ಅಂಕ ಪಡೆದ ಮೂವರು ವಿದ್ಯಾಥಿಗಳಿಗೆ ಹಾಗೂ ಶೈಕ್ಷಣಿಕ ಬ್ಲಾಕ್ ವಾರು ಗರಿಷ್ಠ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ (ಜಿಲ್ಲಾವಾರು ಆಯ್ಕೆಯಾದ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಒಟ್ಟಾರೆ ರಾಜ್ಯದ ಅಂದಾಜು 800 ಅರ್ಹ ವಿದ್ಯಾರ್ಥಿಗಳಿಗೆ ತಲಾ 50,000 ರೂ. ನಂತೆ ನಗದು ಪುರಸ್ಕಾರ ನೀಡಲು ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈಗಾಗಲೇ ಈ ಸಂಬಂಧ ಆದೇಶ ಕೂಡ ಹೊರಡಿಸಿದ್ದೇವೆ. ಈ ನಗದು ಪುರಸ್ಕಾರವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿ ಪ್ರೇರಣಾ ಉಪಕ್ರಮದಡಿ ಅನುಮೋದನೆಯಾದ 3.25 ಕೋಟಿ ರೂ.ಗಳ ಅನುದಾನವನ್ನುಇದಕ್ಕೆ ಬಿಡುಗಡೆ ಮಾಡಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ 50 ಸಾವಿರ ರೂ. ನಗದು ಪುರಸ್ಕಾರ ಸಂದಾಯವಾಗುವಂತೆ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಓದಿ, ಹೆಚ್ಚು ಅಂಕಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಣ ಖಂಡಿತವಾಗಿಯೂ ನೆರವಾಗಲಿದೆ ಎಂಬ ನಂಬಿಕೆ ನನ್ನದು. ಈ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ನಾಡು ಹೆಮ್ಮೆಪಡುವಂತಹ ಸಾಧನೆ ಮಾಡಲಿ ಎಂದು ಹೇಳಿದ್ದಾರೆ.










