ಸುದ್ದಿಒನ್,ಬೆಂಗಳೂರು,ಮೇ.23: ರಾಜ್ಯದ ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಹಾಜರಾತಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಸಿಬ್ಬಂದಿಗಳ ಹಾಜರಾತಿಗಾಗಿ ‘ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ (ಕರ್ತವ್ಯ-KAAMS) ಎಂಬ ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಇದರೊಂದಿಗೆ ಈ ಹಿಂದೆ ಚಾಲ್ತಿಯಲ್ಲಿದ್ದ ಹಳೆಯ ಬಯೋಮೆಟ್ರಿಕ್ ವ್ಯವಸ್ಥೆಯು ಸಂಪೂರ್ಣವಾಗಿ ರದ್ದಾಗಲಿದೆ. ಈ ಮೊಬೈಲ್ ಆ್ಯಪ್ ಕೃತಕ ಬುದ್ಧಿಮತ್ತೆ (AI) ಮತ್ತು ಜಿಐಎಸ್ (GIS) ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಮುಖಚಹರೆ ಗುರುತಿಸುವಿಕೆ (Face Recognition): ಸಿಬ್ಬಂದಿಗಳು ಕೇವಲ ಬೆರಳಚ್ಚು ನೀಡುವುದರ ಬದಲಾಗಿ, ಮುಖಚಹರೆ ಗುರುತಿಸುವಿಕೆಯೊಂದಿಗೆ ತಮ್ಮ ಹಾಜರಾತಿಯನ್ನು ದಾಖಲಿಸಬೇಕಾಗುತ್ತದೆ.

ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುವಾಗ (In Time) ಮತ್ತು ಕರ್ತವ್ಯ ಮುಗಿಸಿ ಹೊರಡುವಾಗ (Out Time) ಹೀಗೆ ಎರಡು ಬಾರಿ ಆ್ಯಪ್ ಮೂಲಕವೇ ಹಾಜರಾತಿ ಹಾಕುವುದು ಕಡ್ಡಾಯವಾಗಿದೆ.ಸಿಬ್ಬಂದಿಗಳು ತಮ್ಮ ನಿಗದಿತ ಕರ್ತವ್ಯದ ಸ್ಥಳ, ನಿಯೋಜಿತ ತರಬೇತಿ ಕೇಂದ್ರಗಳು ಅಥವಾ ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಲ್ಲಿದ್ದಾಗ ಮಾತ್ರ ಈ ಆ್ಯಪ್ ಮೂಲಕ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ.
ಇನ್ನು ಮುಂದೆ KAAMS ಅಪ್ಲಿಕೇಶನ್‌ನಲ್ಲಿ ದಾಖಲಾಗುವ ಹಾಜರಾತಿಯನ್ನು ಮಾತ್ರ ಸಿಬ್ಬಂದಿಗಳ ಮಾಸಿಕ ವೇತನ ಪಾವತಿ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಒದಗಿಸಲು ಅಧಿಕೃತವಾಗಿ ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಈ ಹೊಸ ನಿಯಮದಿಂದಾಗಿ ಶೈಕ್ಷಣಿಕ ವಲಯದಲ್ಲಿ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.










