ಸುದ್ದಿಒನ್, ಚಿತ್ರದುರ್ಗ, ಮೇ. 22 : ಮಳೆನೀರಿನ ಪ್ರತಿ ಹನಿಯೂ ಒಂದು ಚಿನ್ನದ ನಾಣ್ಯವಿದ್ದಂತೆ. ಒಂದೊಂದು ಹನಿ ನೀರನ್ನು ನಾವು ವ್ಯರ್ಥ ಮಾಡಿದರೂ, ಒಂದೊಂದು ಬಂಗಾರದ ನಾಣ್ಯವನ್ನು ಕಳೆದುಕೊಂಡಷ್ಟೇ ನಷ್ಟ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ನೀರಿನ ಮಹತ್ವವನ್ನರಿತು ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು” ಎಂದು ಜಲತಜ್ಞ ದೇವರಾಜ್ ರೆಡ್ಡಿ ಅವರು ಕರೆ ನೀಡಿದ್ದಾರೆ.
ಸುದ್ದಿಒನ್ ನೀರು ಉಳಿಸಿ ಅಭಿಯಾನದ ಭಾಗವಾಗಿ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ತಮ್ಮ ಮನೆಯ ಮುಂಭಾಗ ಪೋಷಕರೊಂದಿಗೆ ಕುಳಿತು ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಲ ಸಂರಕ್ಷಣೆ ಮತ್ತು ಆರೋಗ್ಯದ ದೃಷ್ಟಿಯಿಂದ ತಾವು ಕೈಗೊಂಡಿರುವ ವಿಶಿಷ್ಟ ಮಳೆನೀರು ಕೊಯ್ಲು ಪ್ರಯತ್ನದ ಕುರಿತು ಮಾಹಿತಿ ಹಂಚಿಕೊಂಡರು.
ತಮ್ಮ ಹಳೆಯ ಕಾಲದ ಮಣ್ಣಿನ ಮನೆಯಲ್ಲೇ ಜಾಗದ ಅಭಾವದ ನಡುವೆಯೂ, ಮನೆಯ ಒಳಗಡೆಯೇ ಮಳೆನೀರು ಸಂಗ್ರಹಣಾ ತೊಟ್ಟಿಯನ್ನು ನಿರ್ಮಿಸಿರುವುದಾಗಿ ಅವರು ತಿಳಿಸಿದರು. ಈ ತೊಟ್ಟಿಯು 9 ಅಡಿ ಉದ್ದ, 5 ಅಡಿ ಅಗಲ ಹಾಗೂ 7 ಅಡಿ ಆಳ ಹೊಂದಿದ್ದು, ಸುಮಾರು 10,000 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.
ವರ್ಷಕ್ಕೆ 60,000 ಲೀಟರ್ ನೀರು ಕೊಯ್ಲು!
ನಮ್ಮ ಹಂಚಿನ ಹಾಗೂ ಮಣ್ಣಿನ ಸ್ಲ್ಯಾಬ್ ಹೊಂದಿರುವ ಸಣ್ಣ ಮನೆಯ ಮೇಲ್ಛಾವಣಿಯಿಂದ ವರ್ಷಕ್ಕೆ ಸರಾಸರಿ 60,000 ಲೀಟರ್ ಮಳೆನೀರು ಲಭ್ಯವಾಗುತ್ತದೆ. ಅಂದರೆ ವರ್ಷದಲ್ಲಿ ಕನಿಷ್ಠ 6 ಬಾರಿ ನಮ್ಮ ಈ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿ ಸಂಪೂರ್ಣವಾಗಿ ತುಂಬುತ್ತದೆ. ಮೇಲ್ಛಾವಣಿಯಿಂದ ಪೈಪ್ಗಳ ಮೂಲಕ ಬರುವ ನೀರನ್ನು ಮನೆಯೊಳಗೆ ಅಳವಡಿಸಲಾಗಿರುವ ಫಿಲ್ಟರ್ ಮೂಲಕ ಹಾಯಿಸಿ, ಸಂಪೂರ್ಣ ಶುದ್ಧೀಕರಿಸಿದ ಬಳಿಕವೇ ತೊಟ್ಟಿಗೆ ಸೇರಿಸಲಾಗುತ್ತದೆ” ಎಂದು ಅವರು ವಿವರಿಸಿದರು.

ಈ ರೀತಿ ಸಂಗ್ರಹವಾಗುವ ಅಮೂಲ್ಯವಾದ ನೀರನ್ನು ಅವರ ಕುಟುಂಬಸ್ಥರು ಕೇವಲ ಕುಡಿಯಲು ಮತ್ತು ಅಡುಗೆಗೆ ಮಾತ್ರ ಅತ್ಯಂತ ಮಿತವ್ಯಯದಿಂದ ಬಳಸುತ್ತಿದ್ದಾರೆ. ಈ ನೀರು ಅತ್ಯಂತ ರುಚಿಕರವಾಗಿದ್ದು, ಮನೆಗೆ ಬರುವ ಅತಿಥಿಗಳು ಸಹ ಈ ನೀರಿನ ಸ್ವಾದವನ್ನು ಮೆಚ್ಚಿ, ತಮಗಾಗಿ ಕೊಂಡೊಯ್ಯುತ್ತಾರೆ ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡರು.
ಇದೇ ವೇಳೆ ಜಲ ಜಾಗೃತಿ ಮೂಡಿಸುತ್ತಿರುವ ಸುದ್ದಿಒನ್ ಕಾರ್ಯವನ್ನು ಶ್ಲಾಘಿಸಿದ ದೇವರಾಜ್ ರೆಡ್ಡಿ ಅವರು, “ಇಡೀ ರಾಜ್ಯದ ಜನತೆ ಜಲ ಸಂರಕ್ಷಣೆಯ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕಿದೆ. ನಾವಿಂದು ಎಚ್ಚೆತ್ತುಕೊಳ್ಳದಿದ್ದರೆ, ದೇಶದಲ್ಲಿ ರಾಜಸ್ಥಾನದ ನಂತರದ ಸ್ಥಾನದಲ್ಲಿ ಕರ್ನಾಟಕವೇ ಸಂಪೂರ್ಣ ಮರಳುಗಾಡಾಗಿ ಪರಿವರ್ತನೆಯಾಗುವ ಭೀತಿ ಎದುರಾಗಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇಂದಿನಿಂದಲೇ ನೀರನ್ನು ಉಳಿಸುವ ಪಣ ತೊಡೋಣ ಎಂದು ಕಳಕಳಿಯ ವಿನಂತಿ ಮಾಡಿಕೊಂಡರು.
ಶುದ್ಧ ಕುಡಿಯುವ ನೀರಿಗೆ ಮಳೆ ನೀರು ಕೊಯ್ಲೇ ಸಂಜೀವಿನಿ: ಜಯಶೀಲ ರೆಡ್ಡಿ ಅನುಭವದ ಮಾತು :
ಇಂದಿನ ದಿನಗಳಲ್ಲಿ ವಾಣಿಜ್ಯೀಕರಣಗೊಂಡಿರುವ ಮಾರುಕಟ್ಟೆಯಲ್ಲಿ ಬಾಟಲಿ ನೀರಿಗಿರುವ ಬೆಲೆಯನ್ನು ನಾವು ನಿಗದಿಪಡಿಸಬಹುದು, ಆದರೆ ಪ್ರಕೃತಿ ನೀಡುವ ಮಳೆ ನೀರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹಿರಿಯ ನಾಗರಿಕರಾದ ನಾಡಿಗ ಜಯಶೀಲ ರೆಡ್ಡಿ ಅವರು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಂಡಿದ್ದಾರೆ. ಪ್ರಸಿದ್ಧ ಜಲತಜ್ಞ ದೇವರಾಜ್ ರೆಡ್ಡಿ ಅವರ ತಂದೆಯಾದ ಇವರು, ಮಳೆ ನೀರು ಸಂರಕ್ಷಣೆ ಮತ್ತು ಅದರ ಬಳಕೆಯ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.
2015 ರಿಂದಲೇ ಮಳೆ ನೀರು ಕೊಯ್ಲು ಅಳವಡಿಕೆ :
ತಮ್ಮ ನಿವಾಸದಲ್ಲಿ ಸುಮಾರು 2015 ರಲ್ಲೇ ಮಳೆ ನೀರು ಸಂಗ್ರಹಣಾ ತೊಟ್ಟಿಯನ್ನು (ರೇನ್ ವಾಟರ್ ಹಾರ್ವೆಸ್ಟಿಂಗ್ ಟ್ಯಾಂಕ್) ನಿರ್ಮಿಸಿಕೊಂಡಿರುವುದಾಗಿ ತಿಳಿಸಿದ ಅವರು, ಆರಂಭದ ಒಂದೆರಡು ವರ್ಷ ಮಳೆ ಕೊರತೆಯಾದಾಗ ಹೊರಗಿನಿಂದ ನೀರು ತರಿಸಿ ಬಳಸಬೇಕಾಗಿ ಬಂದಿತ್ತು. ಆದರೆ ನಂತರದ ದಿನಗಳಲ್ಲಿ ಮಳೆ ಉತ್ತಮವಾಗಿ ಆದಾಗ, ತೊಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸುಣ್ಣದ ಬಣ್ಣ ಬಳಿದು ಸಿದ್ಧಪಡಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಕುಡಿಯಲು ಬಳಸಲಾರಂಭಿಸಿದೆವು ಎಂದು ನೆನಪಿಸಿಕೊಂಡರು.
ಪ್ರಕೃತಿಯೇ ನೀಡುವ ಅತ್ಯಂತ ಶುದ್ಧ ನೀರು :
ನಾವು ಕಣ್ಣಾರೆ ನೋಡಿ ಸಂಗ್ರಹಿಸುವ ಈ ಮಳೆ ನೀರು ನೆಲದ ಮೇಲೆ ಬೀಳುವ ಮುನ್ನವೇ ನೇರವಾಗಿ ಫಿಲ್ಟರ್ ಆಗಿ ನಮ್ಮ ತೊಟ್ಟಿಗೆ ಬಂದು ಸೇರುತ್ತದೆ. ಮಳೆಗಾಲದ ಆರಂಭದಲ್ಲಿ ಬರುವ ಮೊದಲ ಮಳೆಯ ನೀರನ್ನು ಹೊರಗಡೆ ಬಿಟ್ಟು, ನಂತರ ಬರುವ ನೀರನ್ನು ಪರೀಕ್ಷಿಸಿ ಅತ್ಯಂತ ಜಾಗರೂಕತೆಯಿಂದ ತೊಟ್ಟಿಗೆ ಬಿಟ್ಟುಕೊಳ್ಳುತ್ತೇವೆ. ಈ ನೀರನ್ನು ಕುಡಿಯುವುದರಿಂದ ನಮಗೆ ಯಾವುದೇ ಆರೋಗ್ಯದ ತೊಂದರೆ ಆಗಿಲ್ಲ. ವಯಸ್ಸಾಗಿರುವುದರಿಂದ ಮುನ್ನೆಚ್ಚರಿಕೆಯಾಗಿ ಹೊಸ ನೀರು ಬಂದಾಗ ಒಂದೆರಡು ದಿನ ಬಿಸಿ ಮಾಡಿ, ತಣ್ಣಗಾಗಿಸಿ ಕುಡಿಯುತ್ತೇವೆ ಎಂದು ಅವರು ವಿವರಿಸಿದರು.

ಭೂಮಿ ಮತ್ತು ಜಲ ಮಾಲಿನ್ಯದ ಕುರಿತು ಕಳಕಳಿ :
ಇಂದಿನ ದಿನಗಳಲ್ಲಿ ಮನುಷ್ಯನು ಮಿತಿಮೀರಿದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿಯ ಫಲವತ್ತತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾನೆ. ಹಿಂದೆಲ್ಲಾ ಎತ್ತುಗಳನ್ನು ಕಟ್ಟಿ, ಸಾವಯವ ಗೊಬ್ಬರ ಬಳಸಿ ಉತ್ತಮ ಬೆಳೆ ತೆಗೆಯಲಾಗುತ್ತಿತ್ತು ಮತ್ತು ಅಂದಿನ ನೀರು ಕೂಡ ಅತ್ಯಂತ ಶುದ್ಧವಾಗಿರುತ್ತಿತ್ತು. ಆದರೆ ಇಂದು ಭೂಮಿಯ ಜೊತೆಗೆ ನೀರನ್ನೂ ಕಲುಷಿತಗೊಳಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನೀರೂ ಕೂಡ ಕಲುಷಿತಗೊಂಡರೆ ಮನುಷ್ಯನ ಜೀವನವೇ ಮುಗಿದುಹೋಗುತ್ತದೆ ಎಂದು ಅವರು ಎಚ್ಚರಿಸಿದರು.
ಆರೋಗ್ಯದ ಕಡೆಗೆ ಗಮನ ಹರಿಸಲು ಕರೆ :
ಇತ್ತೀಚಿನ ದಿನಗಳಲ್ಲಿ ಜನರು ಕೇವಲ ಹಣ ಗಳಿಕೆಯತ್ತ ಗಮನ ಹರಿಸುತ್ತಿದ್ದಾರೆಯೇ ವಿನಃ ತಮ್ಮ ಆರೋಗ್ಯ ಹಾಗೂ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪ್ರಕೃತಿ ದತ್ತವಾಗಿ ಸಿಗುವ ಮಳೆ ನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಬಳಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ದೃಷ್ಟಿಯಿಂದ ನೀರಿನ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜಯಶೀಲ ರೆಡ್ಡಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ನೀರು ಉಳಿಸಿ, ಜೀವ ಸಂರಕ್ಷಿಸಿ: ಜಲತಜ್ಞ ದೇವರಾಜ್ ರೆಡ್ಡಿ ತಾಯಿ ಅವರ ಕರೆ :
ನೀರನ್ನು ಅಮೂಲ್ಯವಾದ ಸಂಪತ್ತನ್ನಾಗಿ ಕಾಣಬೇಕು. ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡಬೇಡಿ ಎಂದು ಜಲತಜ್ಞ ದೇವರಾಜ್ ರೆಡ್ಡಿ ಅವರ ತಾಯಿ ರತ್ನಮ್ಮ ಅವರು ಸಾರ್ವಜನಿಕರಲ್ಲಿ ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.
ಸುದ್ದಿಒನ್ ನೀರು ಉಳಿಸಿ ಅಭಿಯಾನದಲ್ಲಿ ಮಾತನಾಡಿದ ಅವರು, ಮಳೆ ಕೊರತೆ ಮತ್ತು ನೀರಿನ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಹೆಚ್ಚು ಹೆಚ್ಚು ನೀರನ್ನು ಪೋಲು ಮಾಡಬೇಡಿ. ನಾವು ನೀರನ್ನು ಎಷ್ಟು ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಸುತ್ತೇವೆಯೋ, ಅದು ಅಷ್ಟೇ ನಮಗೆ ಮುಂದೆ ಉಪಯೋಗಕ್ಕೆ ಬರುತ್ತದೆ. ಅತಿಯಾಗಿ ನೀರನ್ನು ಬಳಸಿದರೆ ಮುಂದೆ ನೀರಿನ ಲಭ್ಯತೆ ತೀರಾ ಕಡಿಮೆಯಾಗುತ್ತದೆ. ಈಗalready ಮಳೆ ಕಡಿಮೆಯಾಗಿದೆ. ಹಾಗಾಗಿ ನಾವು ನೀರನ್ನು ಬಳಸುವ ವಿಧಾನದ ಮೇಲೆಯೇ ನಮ್ಮ ಮುಂದಿನ ಒಳ್ಳೆಯ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಎಚ್ಚರಿಸಿದರು.
ಅಡುಗೆಗೆ ಶುದ್ಧ ನೀರಿನ ಮಹತ್ವ :
ಮುಂದುವರಿದು ಮಾತನಾಡಿದ ಅವರು, ಶುದ್ಧವಾದ ನೀರು ಅಡುಗೆಯ ರುಚಿಯನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಹಂಚಿಕೊಂಡರು.ಶುದ್ಧ ಹಾಗೂ ಉತ್ತಮ ಗುಣಮಟ್ಟದ ನೀರಿದ್ದರೆ ಅಡುಗೆ ತುಂಬಾ ಚೆನ್ನಾಗಿ ಮತ್ತು ಕ್ಲೀನ್ ಆಗಿ ಇರುತ್ತದೆ. ಇದರಿಂದ ಊಟ ಇನ್ನು ಹೆಚ್ಚು ರುಚಿಕರವಾಗುತ್ತದೆ. ಅಡುಗೆ ಮಾಡಲು ಯಾವುದೇ ತೊಂದರೆ ಎದುರಾಗುವುದಿಲ್ಲ. ಬೇಳೆ ಇತ್ಯಾದಿಗಳನ್ನು ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ; ಒಲೆಗೆ ಹಾಕಿದ ತಕ್ಷಣ ಸುಲಭವಾಗಿ ಬೆಂದು ಹೋಗುತ್ತದೆ, ಒಂದು ಗಂಟೆಯೂ ಬೇಕಾಗುವುದಿಲ್ಲ ಎಂದರು.
ಶುದ್ಧ ನೀರಿನಿಂದ ಮಾಡಿದ ಸಾರು ಅತ್ಯಂತ ರುಚಿಕರವಾಗಿರುತ್ತದೆ. ಈ ರಹಸ್ಯವನ್ನು ನಾನು ಎಲ್ಲರಿಗೂ ಹೇಳ್ತಾ ಇರ್ತೀನಿ. ನಾವೊಬ್ಬರೇ ತಿಂದು ಚೆನ್ನಾಗಿರಬೇಕು ಅನ್ನೋದಲ್ಲ, ಎಲ್ಲರಿಗೂ ಇದರ ಉಪಯೋಗ ತಿಳಿಯಬೇಕು. ಎಲ್ಲರೂ ಆರೋಗ್ಯವಾಗಿ, ಚೆನ್ನಾಗಿರಲಿ ಎಂಬುವುದೇ ನನ್ನ ಆಶಯ ಎಂದು ತಿಳಿಸಿದ್ದಾರೆ.





















