ಸಾಲ ವಸೂಲಾತಿಯ ಹೆಸರಿನಲ್ಲಿ ಗ್ರಾಹಕರಿಗೆ ಕಿರುಕುಳ, ಬೆದರಿಕೆ ಹಾಗೂ ಮಾನಸಿಕ ಒತ್ತಡ ನೀಡುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಲ ವಸೂಲಾತಿ ಏಜೆಂಟರ ಕಾರ್ಯವೈಖರಿಯನ್ನು ನಿಯಂತ್ರಿಸಲು ಆರ್‌ಬಿಐ ಹೊಸ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, 2026ರ ಅಕ್ಟೋಬರ್ 1ರಿಂದ ಅವು ಜಾರಿಗೆ ಬರಲಿವೆ.
ಹೊಸ ನಿಯಮಗಳನ್ನು ಉಲ್ಲಂಘಿಸುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರ್‌ಬಿಐ ಎಚ್ಚರಿಕೆ ನೀಡಿದೆ. ಸಾಲ ವಸೂಲಾತಿಯ ನೆಪದಲ್ಲಿ ಗ್ರಾಹಕರಿಗೆ ಬೆದರಿಕೆ ಹಾಕುವುದು, ಅವಮಾನಿಸುವುದು ಅಥವಾ ಅನಗತ್ಯ ಕಿರುಕುಳ ನೀಡುವುದು ಸಂಪೂರ್ಣ ಅಸಹ್ಯಕರ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಸಾಲ ಮರುಪಾವತಿ ವಿಚಾರದಲ್ಲಿ ಏಜೆಂಟರ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರಿಂದ ಆರ್‌ಬಿಐಗೆ ಅನೇಕ ದೂರುಗಳು ಬಂದಿದ್ದವು. ಕೆಲ ಸಂದರ್ಭಗಳಲ್ಲಿ ಗ್ರಾಹಕರ ಮನೆಗಳಿಗೆ ತೆರಳಿ ಬೆದರಿಕೆ ಹಾಕುವುದು, ಅವಹೇಳನಕಾರಿ ಭಾಷೆ ಬಳಸುವುದು ಹಾಗೂ ಕುಟುಂಬ ಸದಸ್ಯರ ಮೇಲೂ ಒತ್ತಡ ಹೇರುವ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಹಲವು ತಿಂಗಳುಗಳಿಂದ ಕಠಿಣ ನಿಯಮಗಳ ರೂಪುರೇಷೆ ಸಿದ್ಧಪಡಿಸುತ್ತಿತ್ತು.
ಹೊಸ ನಿಯಮಗಳ ಪ್ರಕಾರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಯಲ್ಲಿ ನೈತಿಕ ಹಾಗೂ ಕಾನೂನುಬದ್ಧ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಗ್ರಾಹಕರ ಗೌರವ ಮತ್ತು ಖಾಸಗಿತನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮಾತ್ರ ವಸೂಲಾತಿ ಪ್ರಕ್ರಿಯೆ ನಡೆಯಬೇಕು ಎಂದು ಸೂಚಿಸಲಾಗಿದೆ.
ಆದರೆ, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಪೇಮೆಂಟ್ ಬ್ಯಾಂಕುಗಳು ಹಾಗೂ ಲೋಕಲ್ ಏರಿಯಾ ಬ್ಯಾಂಕುಗಳಿಗೆ ಈ ಹೊಸ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಈ ಕ್ರಮದಿಂದ ಮುಂದಿನ ದಿನಗಳಲ್ಲಿ ಸಾಲ ವಸೂಲಾತಿ ಏಜೆಂಟರ ದೌರ್ಜನ್ಯಕ್ಕೆ ಕಡಿವಾಣ ಬೀಳಲಿದ್ದು, ಬ್ಯಾಂಕ್ ಗ್ರಾಹಕರ ಹಕ್ಕುಗಳಿಗೆ ಹೆಚ್ಚಿನ ರಕ್ಷಣೆ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















