ಚಿತ್ರದುರ್ಗ. ಮೇ.20: ಚಿತ್ರದುರ್ಗ ನಗರದ ತರಾಸು ರಂಗಮಂದಿರದ ನವೀಕರಣ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿದ್ದು, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಬುಧವಾರ ರಂಗಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಕಳೆದ ಒಂದು ವರ್ಷದಿಂದ ತರಾಸು ರಂಗಮಂದಿರದ ಸ್ಥಿತಿ ತೀರಾ ಹದಗೆಟ್ಟಿತ್ತು. ಹೀಗಾಗಿ ಸಾರ್ವಜನಿಕರ ಬಳಕೆ ನಿಲ್ಲಿಸಿ, ನವೀಕರಣ ಕಾಮಗಾರಿ ಕೈಗೆತ್ತಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ಶಾಸಕರ ಸಮಾಲೋಚನೆಯಂತೆ ಸುಸಜ್ಜಿತ ರಂಗಮಂದಿರ ನಿರ್ಮಾಣದ ಉದ್ದೇಶದಿಂದ ನಿರ್ಮಿತಿ ಕೇಂದ್ರದ ವತಿಯಿಂದ ಈ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.
2016ರಲ್ಲೂ ಒಮ್ಮೆ ರಂಗಮಂದಿರದ ನವೀಕರಣ ಮಾಡಲಾಗಿತ್ತು. ಆದರೆ ಈ ಬಾರಿ ಇದನ್ನು ಒಂದು ಸವಾಲಾಗಿ ಸ್ವೀಕರಿಸಿ, ಪಿವಿಆರ್ ಮಾದರಿಯಲ್ಲಿ ಅತ್ಯಾಧುನಿಕ ಸೌಂಡ್ ಮತ್ತು ಲೈಟಿಂಗ್ಸ್ ಹೊಂದಿರುವ ‘ಅಕಾಸ್ಟಿಕ್ ಥಿಯೇಟರ್’ ಆಗಿ ಪರಿವರ್ತಿಸಲಾಗಿದೆ. ಬೆಂಗಳೂರಿನ ‘ಬ್ರಿಕ್ಸ್ ವಾಲ್’ ಎಂಬ ಹೆಸರಾಂತ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಈ ಸುಸಜ್ಜಿತ ಒಳಾಂಗಣ ವಿನ್ಯಾಸ ಮಾಡಲಾಗಿದ್ದು, ಇನ್ನು ಹೊರಗಡೆ ಕೇವಲ ನಾಮಫಲಕ ಹಾಗೂ ಪ್ಲಾಂಟೇಶನ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್) ನಿಧಿಯಿಂದ ರೂ.2.5 ಕೋಟಿ ರೂಪಾಯಿ ವೆಚ್ಚದಲ್ಲಿ ರಂಗಮಂದಿರದ ಒಳಾಂಗಣ ಹಾಗೂ ಹೊರಾಂಗಣದ ಸಿವಿಲ್ ಸ್ಟ್ರಕ್ಚರ್, ಪೇವರ್ಸ್ ಮತ್ತು ಮೇಲ್ಛಾವಣಿ ಸೇರಿದಂತೆ ಸಂಪೂರ್ಣ ದುರಸ್ತಿ ಕಾರ್ಯ ಮಾಡಲಾಗಿದ್ದು, ಆಧುನೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.
ತರಾಸು ಕಾದಂಬರಿಗಳ ಹೆಸರುಗಳ ಪ್ರದರ್ಶನ: ಜಿಲ್ಲೆಯ ಹೆಮ್ಮೆಯ ಬರಹಗಾರರಾದ ತರಾಸು ಅವರ ಸ್ಮರಣಾರ್ಥವಾಗಿಯೇ ಈ ರಂಗಮಂದಿರ ನಿರ್ಮಾಣವಾಗಿದ್ದು, ಇಂದಿನ ಪೀಳಿಗೆಗೆ ತರಾಸು ಅವರ ಕೊಡುಗೆ ಹಾಗೂ ಕಾದಂಬರಿಗಳ ಪರಿಚಯ ಇರಲಿ ಎಂಬ ಉದ್ದೇಶದಿಂದ, ಅವರ ಪ್ರಸಿದ್ಧ ಕಾದಂಬರಿಗಳಾದ ‘ದುರ್ಗಾಸ್ತಮಾನ’, ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’ ಸೇರಿದಂತೆ ಹಲವು ಕೃತಿಗಳ ಹೆಸರುಗಳನ್ನು ಒಳಾಂಗಣದಲ್ಲಿ ಪ್ರದರ್ಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರು ನಿಧನದ ಹೊಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ, ಸೂಕ್ತ ಸಮಯ ನಿಗದಿಪಡಿಸಿ ಸಾರ್ವಜನಿಕರ ಬಳಕೆಗೆ ರಂಗಮಂದಿರ ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಎಂ.ಜೆ.ಮಹೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಬಿ.ಎಸ್.ಹರೀಶ್ ಕುಮಾರ್ ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















