ಬೇಸಿಗೆ ಬಂದಾಕ್ಷಣ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಸದ್ದು ಜೋರಾಗುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಮಾವೂ ನೈಸರ್ಗಿಕವಾಗಿ ಹಣ್ಣಾಗಿರುವುದಿಲ್ಲ. ಬೇಗ ಮಾರಾಟಕ್ಕಾಗಿ ಎಳೆಕಾಯಿಗಳನ್ನು ಕೃತಕವಾಗಿ ಹಣ್ಣಾಗಿಸುವ ಪ್ರವೃತ್ತಿ ಹೆಚ್ಚಾಗಿದೆ.
ಮಾವಿನ ಹಣ್ಣನ್ನು ಬೇಗ ಹಣ್ಣಾಗಿಸಲು ಕೆಲ ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವನ್ನು ಬಳಸುತ್ತಾರೆ. ಈ ಕೆಮಿಕಲ್ನಿಂದ ಹಣ್ಣುಗಳಿಗೆ ಆಕರ್ಷಕ ಹಳದಿ ಬಣ್ಣ ಬರುತ್ತದೆ. ಆದರೆ ಇದರ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಕ್ಯಾಲ್ಸಿಯಂ ಕಾರ್ಬೈಡ್ನಿಂದ ಅಸಿಟಲೀನ್ ಅನಿಲ ಹೊರಬರುತ್ತದೆ. ಇದು ನೈಸರ್ಗಿಕ ಹಣ್ಣಾಗುವಿಕೆಯಂತೆ ಕಾಣಿಸಿದರೂ, ಹಣ್ಣಿನಲ್ಲಿ ವಿಷಕಾರಿ ಅಂಶಗಳು ಉಳಿಯುವ ಸಾಧ್ಯತೆ ಇರುತ್ತದೆ. ಇಂತಹ ಹಣ್ಣುಗಳನ್ನು ಪದೇಪದೇ ಸೇವಿಸಿದರೆ ತಲೆತಿರುಗುವಿಕೆ, ಹೊಟ್ಟೆ ಸಮಸ್ಯೆ, ಕಿರಿಕಿರಿ ಸೇರಿದಂತೆ ಹಲವು ಆರೋಗ್ಯ ತೊಂದರೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ನಿಂಬೆಹಣ್ಣಿನಿಂದಲೇ ಕೆಮಿಕಲ್ ಟೆಸ್ಟ್!
ಮಾರುಕಟ್ಟೆಯಿಂದ ತಂದ ಮಾವಿನ ಹಣ್ಣಿಗೆ ಕೆಮಿಕಲ್ ಬಳಸಿದರೇ ಇಲ್ಲವೇ ಎಂಬುದನ್ನು ಸರಳವಾಗಿ ಪರೀಕ್ಷಿಸಬಹುದು.
ಒಂದು ನಿಂಬೆಹಣ್ಣನ್ನು ಕತ್ತರಿಸಿ ಅದರ ಅರ್ಧ ಭಾಗವನ್ನು ಮಾವಿನ ಹಣ್ಣಿನ ತೊಟ್ಟಿನ ಭಾಗಕ್ಕೆ ಸುಮಾರು ಐದು ಸೆಕೆಂಡುಗಳ ಕಾಲ ಚೆನ್ನಾಗಿ ಉಜ್ಜಬೇಕು. ಬಳಿಕ ಅದರ ಬಣ್ಣ ಬದಲಾವಣೆಯನ್ನು ಗಮನಿಸಬೇಕು.
ಒಂದು ವೇಳೆ ತೊಟ್ಟಿನ ಭಾಗ ನೀಲಿ ಅಥವಾ ಪರ್ಪಲ್ ಬಣ್ಣಕ್ಕೆ ತಿರುಗಿದರೆ, ಆ ಮಾವಿಗೆ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿರುವ ಸಾಧ್ಯತೆ ಇದೆ. ಬಣ್ಣದಲ್ಲಿ ಯಾವುದೇ ಬದಲಾವಣೆ ಕಾಣದಿದ್ದರೆ ಅದು ನೈಸರ್ಗಿಕವಾಗಿ ಹಣ್ಣಾಗಿರುವ ಮಾವು ಎಂದು ತಿಳಿಯಬಹುದು.
ನೈಸರ್ಗಿಕ ಮಾವನ್ನು ಗುರುತಿಸುವುದು ಹೇಗೆ?
ನೈಸರ್ಗಿಕವಾಗಿ ಹಣ್ಣಾದ ಮಾವಿನಲ್ಲಿ ಸೌಮ್ಯವಾದ ಸಿಹಿ ಪರಿಮಳ ಇರುತ್ತದೆ. ರಾಸಾಯನಿಕದ ತೀವ್ರ ವಾಸನೆ ಇರುವುದಿಲ್ಲ. ಕೈಯಿಂದ ಒತ್ತಿದಾಗ ಹಣ್ಣು ಮೃದುವಾಗಿರುತ್ತದೆ.
ಸೇವಿಸುವ ಮುನ್ನ ಈ ಮುನ್ನೆಚ್ಚರಿಕೆ ಇರಲಿ
ಮಾವಿನ ಹಣ್ಣನ್ನು ತೊಳೆಯದೆ ತಿನ್ನಬಾರದು. ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ಸೇವಿಸಬೇಕು. ತೊಟ್ಟಿನ ಭಾಗವನ್ನು ಸ್ವಲ್ಪ ಕತ್ತರಿಸಿ, ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ತಿಂದರೆ ಹಣ್ಣಿನ ಉಷ್ಣತೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ತಜ್ಞರ ಪ್ರಕಾರ, ವಿಶ್ವಾಸಾರ್ಹ ಮಾರುಕಟ್ಟೆ ಅಥವಾ ಪರಿಚಿತ ವ್ಯಾಪಾರಿಗಳಿಂದಲೇ ಮಾವಿನ ಹಣ್ಣು ಖರೀದಿಸುವುದು ಉತ್ತಮ.















