ಸುದ್ದಿಒನ್,ಮುಂಬೈ,ಮೇ.15: ಭಾರತೀಯ ರೂಪಾಯಿ ಮೌಲ್ಯವು ಶುಕ್ರವಾರ ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಅಮೆರಿಕನ್ ಡಾಲರ್ ಎದುರು ಮೊದಲ ಬಾರಿಗೆ 96 ರೂಪಾಯಿಗಳ ಗಡಿ ದಾಟುವ ಮೂಲಕ ರೂಪಾಯಿ ಐತಿಹಾಸಿಕ ಕುಸಿತ ದಾಖಲಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದು ಭಾರತೀಯ ಕರೆನ್ಸಿಯ ಮೇಲೆ ತೀವ್ರ ಒತ್ತಡ ಹೇರಿದೆ. ಕಳೆದ ವಹಿವಾಟಿನಲ್ಲಿ 95.9575 ಮಟ್ಟದಲ್ಲಿದ್ದ ರೂಪಾಯಿ ಮೌಲ್ಯವು ಇಂದು ಶೇ. 0.3 ರಷ್ಟು ಕುಸಿದು 96.05 ಕ್ಕೆ ತಲುಪಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 110 ಡಾಲರ್ ಆಸುಪಾಸಿನಲ್ಲಿದೆ.ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿನ ಉದ್ವಿಗ್ನತೆಯು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ಭಾರತವು ತನ್ನ ಒಟ್ಟು ಬಳಕೆಯ ಶೇ. 85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆ ಏರಿಕೆಯಾದಾಗ ಆಮದು ವೆಚ್ಚ ಹೆಚ್ಚಾಗಿ ರೂಪಾಯಿ ಮೌಲ್ಯ ಕುಸಿಯುತ್ತದೆ.ಜಾಗತಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಏರುತ್ತಿರುವುದು ಇತರ ಕರೆನ್ಸಿಗಳ ಮೇಲೆ ಪರಿಣಾಮ ಬೀರುತ್ತಿದೆ.


















