ಬೆಂಗಳೂರು, ಏಪ್ರಿಲ್ 24: ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್ ಕೆ ಸಿಸಿಐ ನ ಪ್ರಯತ್ನ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026″ನ್ನು ಉದ್ಘಾಟಿಸಿ ಮಾತನಾಡಿದರು.
*ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು*
ಎಫ್ ಕೆ ಸಿಸಿಐ ಅಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ ಅವರು ಉತ್ತಮ ವಾಣಿಜ್ಯೋದ್ಯಮಿಯಾಗಿ ನನಗೆ ಚಿರಪರಿಚಿತರು. ಕೃಷಿ ವಿವಿ ಹಾಗೂ ಎಫ್ ಕೆ ಸಿಸಿಐ ಸಹಭಾಗಿತ್ವದಲ್ಲಿ ಏರ್ಪಡಿಸಲಾದ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026 ರೈತರಿಗೆ ಸಹಕಾರಿಯಾಗಿದೆ. ರೈತರಿಗೆ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನ ಏರ್ಪಡಿಸಿರುವುದು ಉತ್ತಮವಾಗಿದೆ. ಆದರೆ ವಸ್ತುಪ್ರದರ್ಶನವನ್ನು ಪ್ರತ್ಯೇಕವಾಗಿ ಆಯೋಜಿಸುವುದು ಉತ್ತಮವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಕೃಷಿ ಲಾಭದಾಯಕಗೊಳಿಸಲು ಸರ್ಕಾರದ ಯೋಜನೆಗಳು :
ಭಾರತ ದೇಶ ಕೃಷಿಪ್ರಧಾನ ದೇಶ. ಕೃಷಿಯನ್ನು ಸುಸ್ಥಿರಗೊಳಿಸುವುದು ಹಾಗೂ ಲಾಭದಾಯಕಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದಿನ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕವಾದರೆ ಯುವಜನತೆ ಸಹಜವಾಗಿ ಕೃಷಿಯತ್ತ ಮುಖಮಾಡುತ್ತಾರೆ. ಸರ್ಕಾರ ಕೃಷಿಯನ್ನು ಲಾಭದಾಯಕಗೊಳಿಸಲು ಹಲವು ಯೋಜನೆಗಳನ್ನು ರೂಪಿಸಿ, ಈ ಉದ್ದೇಶಕ್ಕೆ ಕೈಗಾರಿಕೆಗಳೂ ಕೈಜೋಡಿಸಬೇಕು ಎಂದರು.
ಕೃಷಿ ತಂತ್ರಜ್ಞಾನಕ್ಕೂ ಬೆಂಗಳೂರು ರಾಜಧಾನಿಯಾಗಬೇಕು :
ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರು ರಾಜಧಾನಿಯಾದಂತೆ, ಕೃಷಿ ತಂತ್ರಜ್ಞಾನದಲ್ಲಿಯೂ ಬೆಂಗಳೂರು ರಾಜಧಾನಿಯಾಗಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ದಿಮತ್ತೆ ಸೇರಿದಂತೆ ಎಲ್ಲ ಕ್ಷೇತ್ರಗಳ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.
ಬಿಜೆಪಿ ಸ್ಥಗಿತಗೊಳಿಸಿದ್ದ ‘ಕೃಷಿಭಾಗ್ಯ’ವನ್ನು ಸರ್ಕಾರ ಪುನ: ಜಾರಿಗೊಳಿಸಿದೆ :
ರಾಜ್ಯದಲ್ಲಿ ಒಣಭೂಮಿಯ ಪ್ರಮಾಣ ಹೆಚ್ಚಿದ್ದು, ಸಣ್ಣಹಿಡುವಳಿದಾರರಿಗೆ ಕೃಷಿಯನ್ನು ಲಾಭದಾಯಕಗೊಳಿಸಬೇಕಿದೆ. ಆದ್ದರಿಂದ ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಹೆಚ್ಚು ಒಣಭೂಮಿಯಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಕೃಷಿಭಾಗ್ಯವನ್ನು ಸ್ಥಗಿತಗೊಳಿಸಿದ್ದು, ನಮ್ಮ ಸರ್ಕಾರ ಈ ಯೋಜನೆಗೆ ಮರುಜಾರಿಗೊಳಿಸಿದೆ. ಸುಮಾರು 83 ಲಕ್ಷ ರೈತರಿಗೆ 70 ಸಾವಿರ ಕೋಟಿ ರೂ.ಗಳ ಕೃಷಿಸಾಲವನ್ನು ನೀಡಲಾಗಿದೆ. ಕಳೆದ ವರ್ಷ 8 ಸಾವಿರ ಕೋಟಿ ಗಳನ್ನು ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳಿಗೆ ಇಡಲಾಗಿತ್ತು. ಬಂಡವಾಳ ಹೂಡಿಕೆ ಅಧಿಕಗೊಳ್ಳಬೇಕು. ಕೈಗಾರಿಕೆ, ಗ್ರಾಮೀಣಾಭೀವೃದ್ಧಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ಕೃಷಿ ಕ್ಷೇತ್ರದಲ್ಲಿಯೂ ಹೂಡಿಕೆಗಳು ಹೆಚ್ಚಾಗಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗಲಿದೆ ಎಂದರು.

















