ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿಂದೆ ಇರುವ ಪ್ರಮುಖ ಸಂಚುಕೋರನ ಗುರುತು ಇದೀಗ ಸ್ಪಷ್ಟವಾಗಿದೆ. ಇಂಡಿಯಾ ಟುಡೇ ಟಿವಿ ನಡೆಸಿದ ವಿಶೇಷ ತನಿಖೆಯಲ್ಲಿ, ದಾಳಿಯ ಮಾಸ್ಟರ್‌ಮೈಂಡ್ ಸಜಿದ್ ಜತ್ ಅಲಿಯಾಸ್ ಹಬೀಬುಲ್ಲಾ ತಬಸ್ಸುಮ್‌ನ ಪಾಕಿಸ್ತಾನ ಸಂಪರ್ಕವನ್ನು ಪಡಿಸಲಾಯಿತು ಬಹಿರಂಗಪಡಿಸಲಾಗಿದೆ.
ತನಿಖೆಯ ಪ್ರಕಾರ, ಸಜಿದ್ ಜತ್ (ಸೈಫುಲ್ಲಾ ಸಜಿದ್ ಎಂದೂ ಪರಿಚಿತ) ಈಗ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದು, ತನ್ನ ಗುರುತು ಹಾಗೂ ವಾಸಸ್ಥಾನವನ್ನು ಪದೇಪದೇ ಬದಲಾಯಿಸುತ್ತಾ ಭಾರತೀಯ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ.ಇಂಡಿಯಾ ಟುಡೇ ತಂಡ ಪತ್ತೆಹಚ್ಚಿದ ದಾಖಲೆಗಳ ಪ್ರಕಾರ, ಈತನ ಅಸಲಿ ಹೆಸರು ಹಬೀಬುಲ್ಲಾ ತಬಸ್ಸುಮ್. 1976ರ ಮಾರ್ಚ್ 23ರಂದು ಜನಿಸಿದ್ದ ಈತ, ಪಾಕಿಸ್ತಾನದ ಕಸೂರ್ ಜಿಲ್ಲೆಯ ಪಟ್ಟೋಕಿ ತಹಸಿಲ್‌ನ ಭೋಯ್ ಅಸಲ್ ಗ್ರಾಮ ನಿವಾಸಿ.

ತಂದೆಯ ಹೆಸರು ಮೊಹಮ್ಮದ್ ರಫೀಕ್ ಎಂದು ಗುರುತಿನ ಚೀಟಿಯಲ್ಲಿ ಉಲ್ಲೇಖಿಸಲಾಗಿದೆ.ಇದಲ್ಲದೆ, ರಾವಲ್ಪಿಂಡಿಯಲ್ಲಿರುವ ಈತನ ಸೇಫ್ ಹೌಸ್‌ಗಳ ವಿವರಗಳೂ ಬೆಳಕಿಗೆ ಬಂದಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ರಕ್ಷಣೆಯಲ್ಲಿ ಇಸ್ಲಾಮಾಬಾದ್ ಹಾಗೂ ರಾವಲ್ಪಿಂಡಿಯ ನಡುವೆ ಸಂಚರಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕಣಿವೆಯ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದಾಳಿಗೆ ಮಾರ್ಗದರ್ಶನ ನೀಡಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಲಷ್ಕರ್-ಎ-ತೈಬಾ ಅಂಗಸಂಸ್ಥೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಜನರು (25 ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ) ಮೃತಪಟ್ಟಿದ್ದರು. ಬಲಿಪಶುಗಳ ಧರ್ಮವನ್ನು ಕೇಳಿ ನಂತರ ಗುಂಡಿಕ್ಕಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು.ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ ಆರಂಭಿಸಿ ಪಾಕಿಸ್ತಾನ ಮೂಲದ ಉಗ್ರ ಜಾಲವನ್ನು ಭೇದಿಸಿತು. ಬಳಿಕ ಜುಲೈ 2025ರಲ್ಲಿ ನಡೆದ ‘ಆಪರೇಷನ್ ಮಹಾದೇವ್’ ಮೂಲಕ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಇಂಡಿಯಾ ಟುಡೇ ತನಿಖೆಯಿಂದ ಪಾಕಿಸ್ತಾನದ ಉಗ್ರರಿಗೆ ನೀಡುತ್ತಿರುವ ಆಶ್ರಯ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಈ ವಿಚಾರ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಭಾರತೀಯ ತನಿಖಾ ಸಂಸ್ಥೆಗಳು ಪ್ರಮುಖ ಸಂಚುಕೋರನನ್ನು ಅಂತರಾಷ್ಟ್ರೀಯ ಕಾನೂನು ಅಡಿಯಲ್ಲಿ ಬಂಧಿಸಲು ಕ್ರಮ ಕೈಗೊಳ್ಳುತ್ತಿವೆ.
















