ದೆಹಲಿ.ಜೂನ್.28: ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆಯೇ? ಹಾಗಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಐಟಿ ನೋಟಿಸ್ ಬಂದ ತಕ್ಷಣ ತೆರಿಗೆ ಕಚೇರಿಗಳಿಗೆ ಅಲೆದಾಡುವ ದಿನಗಳು ಈಗ ಮುಗಿದಿವೆ. ತೆರಿಗೆ ಪಾವತಿದಾರರ ಸಮಯ ಮತ್ತು ಶ್ರಮವನ್ನು ಉಳಿಸಲು ಆದಾಯ ತೆರಿಗೆ ಇಲಾಖೆಯು ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲೇ ಉತ್ತರ ಸಲ್ಲಿಸುವ ಸುಲಭ ವ್ಯವಸ್ಥೆಯನ್ನು ಕಲ್ಪಿಸಿದೆ.
ವೇತನದಾರರು, ಉದ್ಯಮಿಗಳು, ವೃತ್ತಿಪರರು ಮತ್ತು ತೆರಿಗೆ ಕಡಿತಗೊಳಿಸುವವರು (Tax Deductors) ಯಾವುದೇ ಕಾಗದದ ಪತ್ರವ್ಯವಹಾರವಿಲ್ಲದೆ, ನಿಗದಿತ ಸಮಯದೊಳಗೆ ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಈ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಏನಿದು ಇ-ಪ್ರೊಸೀಡಿಂಗ್ಸ್?
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ನಲ್ಲಿ ಲಭ್ಯವಿರುವ ಆನ್ಲೈನ್ ಸೇವೆಯೇ ‘ಇ-ಪ್ರೊಸೀಡಿಂಗ್ಸ್’. ಇದರ ಮೂಲಕ ನೋಂದಾಯಿತ ಬಳಕೆದಾರರು ತಮಗೆ ಬಂದಿರುವ ಬಾಕಿ ಬೇಡಿಕೆಗಳು ರಿಫಂಡ್ ಹೊಂದಾಣಿಕೆಗಳು, ತಿದ್ದುಪಡಿ ವಿಷಯಗಳು ಅಥವಾ ಮೌಲ್ಯಮಾಪನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ನೋಟಿಸ್ಗಳನ್ನು ವೀಕ್ಷಿಸಬಹುದು ಮತ್ತು ಅದಕ್ಕೆ ಪ್ರತಿಕ್ರಿಯಿಸಬಹುದು.
ಒಮ್ಮೆ ನೀವು ಆನ್ ಲೈನ್ ನಲ್ಲಿ ಉತ್ತರವನ್ನು ಸಲ್ಲಿಸಿದ ನಂತರ, ಪೋರ್ಟಲ್ ನಿಮಗೆ ‘ಅಕ್ನಾಲೆಡ್ಜ್ಮೆಂಟ್’ (ಸ್ವೀಕೃತಿ ಪತ್ರ) ಅನ್ನು ನೀಡುತ್ತದೆ. ಇದನ್ನು ಇಟ್ಟುಕೊಂಡು ನಿಮ್ಮ ಪ್ರಕರಣದ ಪ್ರಗತಿಯನ್ನು ನೀವು ಆನ್ಲೈನ್ನಲ್ಲೇ ಟ್ರ್ಯಾಕ್ ಮಾಡಬಹುದು.
ಯಾವೆಲ್ಲಾ ನೋಟಿಸ್ ಇಲ್ಲಿ ಉತ್ತರಿಸಬಹುದು?
ಸೆಕ್ಷನ್ 139(9) ಅಡಿಯಲ್ಲಿ ದೋಷಪೂರಿತ ರಿಟರ್ನ್ ನೋಟಿಸ್.
ಸೆಕ್ಷನ್ 245 ರ ಅಡಿಯಲ್ಲಿನ ಸೂಚನೆಗಳು.
ಸೆಕ್ಷನ್ 143(1)(a) ಅಡಿಯಲ್ಲಿನ ಪ್ರೈಮಾ ಫೇಸಿ ಅಡ್ಜಸ್ಟ್ಮೆಂಟ್ ನೋಟಿಸ್.

ಸೆಕ್ಷನ್ 154 ರ ಅಡಿಯಲ್ಲಿ ರಿಕ್ಟಿಫಿಕೇಶನ್ (ತಿದ್ದುಪಡಿ) ನೋಟಿಸ್ ಹಾಗೂ ಅಸ್ಸೆಸಿಂಗ್ ಅಧಿಕಾರಿಯಿಂದ ಬಂದ ಇತರೆ ಕಮ್ಯುನಿಕೇಶನ್ಗಳು.
ಆನ್ ಲೈನ್ ನಲ್ಲಿ ಐಟಿ ನೋಟಿಸ್ಗೆ ಉತ್ತರಿಸುವುದು ಹೇಗೆ?
ಹಂತ 1: ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಿ, ನಿಮ್ಮ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
ಹಂತ 2: ಲಾಗಿನ್ ಆದ ನಂತರ ಡ್ಯಾಶ್ಬೋರ್ಡ್ನಲ್ಲಿರುವ ‘Pending Actions’ ಮೆನುಗೆ ಹೋಗಿ.
ಹಂತ 3: ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ‘e-Proceedings’ ಎಂಬುದನ್ನು ಕ್ಲಿಕ್ ಮಾಡಿ.
ಹಂತ 4: ಈಗ ‘Self’ ಆಯ್ಕೆಯನ್ನು ಆರಿಸಿ (ಒಂದು ವೇಳೆ ನಿಮ್ಮ ಪರವಾಗಿ ಆಡಿಟರ್ ಅಥವಾ ಪ್ರತಿನಿಧಿ ಉತ್ತರಿಸುತ್ತಿದ್ದರೆ ಸಂಬಂಧಿತ ಆಯ್ಕೆಯನ್ನು ಆರಿಸಬೇಕು). ಇಲ್ಲಿ ನಿಮ್ಮ ಹೆಸರಿನಲ್ಲಿ ಜಾರಿಯಾಗಿರುವ ನೋಟಿಸ್ಗಳು ಕಾಣಿಸುತ್ತವೆ.
ಹಂತ 5: ನೋಟಿಸ್ ಮೇಲೆ ಕ್ಲಿಕ್ ಮಾಡಿ, ಇಲಾಖೆಯು ನಿಮ್ಮಿಂದ ಯಾವ ವಿವರಗಳನ್ನು ಕೇಳಿದೆ ಎಂಬುದನ್ನು ಸೂಕ್ಷ್ಮವಾಗಿ ಓದಿಕೊಳ್ಳಿ. ಧಾವಂತದಲ್ಲಿ ತಪ್ಪು ಮಾಹಿತಿ ನೀಡಬೇಡಿ.
ಹಂತ 6: ನೋಟಿಸ್ನ ಅಗತ್ಯಕ್ಕೆ ತಕ್ಕಂತೆ ಬ್ಯಾಂಕ್ ವಿವರಗಳು, ಹೂಡಿಕೆ ಪುರಾವೆಗಳು, ಫಾರ್ಮ್ 16, ಫಾರ್ಮ್ 26AS ಅಥವಾ ಪರಿಷ್ಕೃತ ಲೆಕ್ಕಾಚಾರದ ಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ.
ಹಂತ 7: ಕೇಳಲಾದ ಸ್ಪಷ್ಟನೆ ಮತ್ತು ಸೂಕ್ತ ದಾಖಲೆಗಳನ್ನು (ಲೆಜಿಬಲ್ ಮತ್ತು ಸ್ಪಷ್ಟವಾಗಿರುವ ಫೈಲ್ಗಳು) ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ.
ಹಂತ 8: ಕೊನೆಯದಾಗಿ ಡಿಕ್ಲರೇಶನ್ ಅನ್ನು ಒಪ್ಪಿಕೊಂಡು, ನಿಮ್ಮ ಉತ್ತರವನ್ನು ಸಬ್ಮಿಟ್ ಮಾಡಿ.
ಯಶಸ್ವಿಯಾಗಿ ಸಬ್ಮಿಟ್ ಆದ ತಕ್ಷಣ, ಪೋರ್ಟಲ್ನಲ್ಲಿ ಟ್ರಾನ್ಸಾಕ್ಷನ್ ಐಡಿ ಮತ್ತು ಅಕ್ನಾಲೆಡ್ಜ್ಮೆಂಟ್ ಸಂಖ್ಯೆ ಜನರೇಟ್ ಆಗುತ್ತದೆ. ಇದರ ದೃಢೀಕರಣ ಸಂದೇಶವು ನಿಮ್ಮ ನೋಂದಾಯಿತ ಇಮೇಲ್ ಐಡಿಗೂ ಬರುತ್ತದೆ. ಮುಂದಿನ ಉಲ್ಲೇಖಗಳಿಗಾಗಿ ಈ ಸ್ವೀಕೃತಿ ಪತ್ರವನ್ನು ಸುರಕ್ಷಿತವಾಗಿ ಕಾಯ್ದಿರಿಸಿಕೊಳ್ಳಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











