ರ‍್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಅವರು ಈ ಹಿಂದೆ ನಿವೇದಿತಾ ಗೌಡರನ್ನು ಮದುವೆಯಾಗಿದ್ದರು. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಆರಂಭವಾದ ಇವರ ಪರಿಚಯ ಹಸೆಮಣೆವರೆಗೆ ಸಾಗಿತ್ತು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರೂ ಬೇರ್ಪಟ್ಟಿದ್ದು, ಈಗ ತಮತಮ ಜೀವನದಲ್ಲಿ ಮುಂದುವರಿಯುತ್ತಿದ್ದಾರೆ.
ಇದೀಗ ಚಂದನ್ ಶೆಟ್ಟಿ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿ, ವಿವಾಹದ ಸಮಯದ ಬಗ್ಗೆ ಸುಳಿವು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ವಿಚ್ಛೇದನ ಸಾಮಾನ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿಷಯವನ್ನು ಸೆಲೆಬ್ರಿಟಿಗಳು ತೆರೆಯಾಗಿ ಹಂಚಿಕೊಳ್ಳುತ್ತಿದ್ದಾರೆ. ಚಂದನ್ ಮತ್ತು ನಿವೇದಿತಾ ಕೂಡ ವಿಚ್ಛೇದನದ ಬಳಿಕ ಸುದ್ದಿಗೋಷ್ಠಿ ನಡೆಸಿ, ಹೊಂದಾಣಿಕೆಯ ಕೊರತೆಯೇ ಬೇರ್ಪಟ್ಟ ಕಾರಣ ಎಂದು ಸ್ಪಷ್ಟಪಡಿಸಿದ್ದರು.

ಒಂದು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಚಂದನ್, “ಹೌದು, ನಾನು ಮತ್ತೆ ಮದುವೆಯಾಗುತ್ತೇನೆ. ಆದರೆ ಈ ವರ್ಷ ಅಲ್ಲ. ಒಳ್ಳೆಯ ಹುಡುಗಿಯನ್ನು ಕಂಡು ಮುಂದಿನ ವರ್ಷ ಮದುವೆಯಾಗುವ ಯೋಜನೆ ಇದೆ. ಇನ್ನೂ ಹುಡುಗಿ ಹುಡುಕುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ” ಎಂದು ತಿಳಿಸಿದ್ದಾರೆ.ಇದಲ್ಲದೆ, “ವೈಬ್ ಮ್ಯಾಚ್ ಆದ್ರೆ ಸಾಕು. ಈ ಬಗ್ಗೆ ಈಗ ಹೆಚ್ಚಿನದಾಗಿ ಹೇಳಲು ಇಷ್ಟವಿಲ್ಲ. ಮುಂದಿನ ವರ್ಷ ಮಾತನಾಡುತ್ತೇನೆ” ಎಂದೂ ಹೇಳಿದ್ದಾರೆ. ಈ ಮೂಲಕ 2027ರ ವೇಳೆಗೆ ಚಂದನ್ ಶೆಟ್ಟಿ ಎರಡನೇ ಬಾರಿ ಮದುವೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನೊಂದೆಡೆ, ಚಂದನ್ ಶೆಟ್ಟಿ ಅಭಿನಯಿಸಿರುವ ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರ ಏಪ್ರಿಲ್ 24ರಂದು ತೆರೆಗೆ ಬರುತ್ತಿದ್ದು, ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.
















