Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

 

ಬೆಂಗಳೂರು ನಗರವು ಇಂದು ಎಷ್ಟೇ ಬೆಳವಣಿಗೆಯಾಗಿದ್ದರೂ ಇಂದಿಗೂ ತನ್ನ ಮೂಲ ಜನಪದ ಸಂಸ್ಕೃತಿಯನ್ನು ತನ್ನ ಒಡಲೊಳಗೆ ಅಡಗಿಸಿಟ್ಟುಕೊಂಡಿದೆ.
ಐತಿಹಾಸಿಕ ಹಾಗೂ ಪ್ರಾಚೀನ ದೇವಾಲಯಗಳು ಇಂದಿಗೂ ಬೆಂಗಳೂರಿನ ಇತಿಹಾಸವನ್ನು ಸಾರಿ ಹೇಳುತ್ತಿವೆ. ‌ಹಿಂದೆ ಇಲ್ಲಿ ಆಳ್ವಿಕೆ ಮಾಡಿದ ರಾಜವಂಶಗಳು ಇಲ್ಲಿನ ದೇವಾಲಯಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಬಡಾವಣೆಯಾದ ಗವಿಪುರ ಬಡಾವಣೆಯು ಇಲ್ಲಿರುವ ಬಂಡೆ ಹಾಗೂ ಗವಿಗಳ ಕಾರಣಕ್ಕೆ ಹೆಸರು ಪಡೆದಿದೆ. ಇಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯವು ಈ ಪ್ರದೇಶದ ಅತ್ಯಂತ ಪ್ರಾಚೀನ ಹಾಗೂ ಪುರಾತನ ದೇವಾಲಯವಾಗಿದೆ. ಐತಿಹ್ಯದಂತೆ ಹಿಂದೆ ಈ ಸ್ಥಳದಲ್ಲಿ ಗೌತಮ ಋಷಿಗಳು ಹಾಗೂ ಭಾರದ್ವಾಜ ಮುನಿಗಳು ತಪಸ್ಸನ್ನು ಆಚರಿಸಿದ್ದರು ಎನ್ನಲಾಗುತ್ತದೆ.

 

ಇದೊಂದು ಗುಹಾಂತರ ದೇವಾಲಯವಾಗಿದ್ದು, ದೇವಾಲಯದ ಒಳ ಆವರಣದಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಒಂದು ಮಾರ್ಗ ಶಿವಗಂಗೆಯ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿಗೆ ಸಂಪರ್ಕ ಕಲ್ಪಿಸಿದರೆ, ಮತ್ತೊಂದು ಕಾಶಿಗೆ ಸಂಪರ್ಕ ಕಲ್ಪಿಸುತ್ತದೆ ಎನ್ನಲಾಗುತ್ತದೆ. ದೇವಾಲಯವು 9-11 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದರೂ, 16 ನೇ ಶತಮಾನದಲ್ಲಿ ನಾಡಪ್ರಭು ಕೆಂಪೇಗೌಡರು ದೇವಾಲಯವನ್ನು ಜೀರ್ಣೋದ್ದಾರಗೊಳಿಸಿದರು ಎನ್ನಲಾಗುತ್ತದೆ.
ಹಿಂದೆ ಇದೊಂದು ಬೆಟ್ಟ ಗುಡ್ಡಗಳಿಂದ ಒಂದು ಕಾಡು ನಿರ್ಜನ ಪ್ರದೇಶವಾಗಿತ್ತು. 60-70 ರ ದಶಕದ ತನಕವೂ ಇಲ್ಲಿ ಜನಜಂಗುಳಿ ಅಷ್ಟಾಗಿ ಕಂಡು ಬರುತ್ತಿರಲಿಲ್ಲ.

 

ಈಗ ಈ ಪ್ರದೇಶವು ನಗರದ ಮಧ್ಯಭಾಗದಲ್ಲಿದ್ದು ಸದಾ ಕಾಲ ಜನಜಂಗುಳಿಯಿಂದ ತುಂಬಿರುತ್ತದೆ.‌ ಈ ದೇವಾಲಯ ಗರ್ಭಗೃಹ ಹಾಗೂ ಸಭಾಮಂಟಪವನ್ನು ಒಳಗೊಂಡಿದೆ. ಸಭಾಮಂಟಪದಲ್ಲಿ 4 ಬೃಹತ್ ಹೊಯ್ಸಳರ ಶೈಲಿಯ ಕಲ್ಲಿನ ವೃತ್ತಾಕಾರದ ಕಂಬಗಳನ್ನು ಕಾಣಬಹುದು.
ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ದೇವಾಲಯದ ಹೊರ ಅಂಗಳದಲ್ಲಿ ಏಕಶಿಲೆಯ ಬೃಹತ್ ಆಕಾರದ ಸೂರ್ಯಪಾನ,ಚಂದ್ರಪಾನ ಎನ್ನಲಾಗುವ ವೃತ್ತಾಕಾರದ ಬೃಹತ್ ಕಲ್ಲಿನ ದುಂಡು ಫಲಕ ತಟ್ಟೆಗಳು, ಡಮರುಗ, ತ್ರಿಶೂಲ ಕಂಡುಬರುತ್ತವೆ. ಇವು 25 ಅಡಿಗಳಷ್ಟು ಎತ್ತರವಾಗಿವೆ. ಇವು ಮೂಲತಃ ಉತ್ತರಾಯಣ ದಕ್ಷಿಣಾಯಣ ಸಮಯದಲ್ಲಿ ಸೂರ್ಯ ನೆರಳುಗಳನ್ನು ತಡೆದು ಫಲಕಗಳ ಮೇಲೆ ಬೀಳುವುದನ್ನು ಗುರುತಿಸಲು ಹಿಂದಿನ ಕಾಲದಲ್ಲಿ ಖಗೋಳ ವಿಜ್ಞಾನದ ಪ್ರಯೋಗದಂತೆ ಮಾಡಲಾಗಿತ್ತು ಎಂದು ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ನೆಹರು ತಾರಾಲಯದಡಾ. ಶೈಲಜಾ ಪ್ರಯೋಗಗಳ ಮೂಲಕ ನಿರೂಪಿಸಿ ತೋರಿಸಿ ಕೊಟ್ಟಿದ್ದಾರೆ. ಖಗೋಳ ವಿಜ್ಞಾನದ ಅವಶ್ಯಕತೆ ಕೇಂದ್ರ ಬಿಂದುವಾದ ಈ ಸ್ಥಳವು ಇಂದು ತನ್ನ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಪ್ರಭಾವಗಳನ್ನು ಉಳಿಸಿಕೊಂಡಿದೆ.

 

ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ ಈ ಫಲಕಗಳು ಮಂಗಳ ಸೂಚಕ ಸ್ಮಾರಕಗಳಾಗಿವೆ ಹಾಗೂ ಹಿಂದಿನ ರಾಜರುಗಳು ದೇವರಿಗೆ ಕೊಟ್ಟ ಕೊಡುಗೆಗಳಾಗಿವೆ ಎಂದು ನಂಬಲಾಗುತ್ತದೆ. ದೇವಾಲಯದ ಸಭಾಮಂಟಪದ ಬಲಬದಿಯಲ್ಲಿ ಪಾರ್ವತಿ ದೇವಿಯ ಶಿಲ್ಪವಿದೆ. ಒಳಭಾಗದಲ್ಲಿ ಪ್ರದಕ್ಷಿಣ ಪಥವನ್ನು ಕೂಡ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು ಪೂಜಿಸಲಾಗುತ್ತದೆ. ಸಂಕ್ರಾಂತಿ ಹಬ್ಬದಂದು ಸೂರ್ಯನ ಉತ್ತರಾಯಣ ಪುಣ್ಯಕಾಲದಲ್ಲಿ ಸೂರ್ಯ ರಶ್ಮಿಯು ನೇರವಾಗಿ ಶಿವಲಿಂಗದ ಮೇಲೆ ಬೀಳುವ ಕೌತುಕವನ್ನು ಇಂದಿಗೂ ಕಾಣಬಹುದಾಗಿದೆ.

 

ಇದು ಕೆಲವು ಸೆಕೆಂಡುಗಳಿಂದ ನಿಮಿಷಗಳ ತನಕ ಜರುಗುತ್ತದೆ. ಇದನ್ನು ನೋಡಲು ಸಾವಿರಾರು ಭಕ್ತರು ಆ ದಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯವನ್ನು ಜಾಮಿತಿಯ ಆಧಾರ ಹಾಗೂ ಸೂರ್ಯನ ನಿರ್ದಿಷ್ಟ ಪಥದ ಆಧಾರದಲ್ಲಿ ಯಾವ ರೀತಿ ಕರಾರುವಕ್ಕಾಗಿ ದೇವಾಲಯ ಹಾಗೂ ಶಿವಲಿಂಗವನ್ನು ನಿರ್ಮಿಸಲಾಗಿದೆ ಎಂಬುದನ್ನು ಗಮನಿಸಬಹುದಾಗಿದೆ. ದೇವಾಲಯದ ಆವರಣದಲ್ಲಿ ಹತ್ತಾರು ವಿವಿಧ ದೇವತೆಗಳ ಶಿಲ್ಪಗಳನ್ನು ಕಾಣಬಹುದು. ಸಪ್ತ ಮಾತೃಕೆಯರು, ಗಣಪತಿ,ಸುಬ್ರಮಣ್ಯ,ಗೌತಮ ಮಹರ್ಷಿ, ಅಗ್ನಿ ದೇವ… ಮುಂತಾದವುಗಳನ್ನು ಗಮನಿಸಬಹುದು. ಇಲ್ಲಿರುವ ಅಗ್ನಿದೇವನ ಶಿಲ್ಪವನ್ನು ಪೂಜಿಸಿದರೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

 

ಸಭಾಮಂಟಪದಲ್ಲಿ ಗ್ರಾನೆಟ್ ಕಣಶಿಲೆಯ ಸುಂದರವಾದ ಕುಳಿತ ಭಂಗಿಯ ನಂದಿಯನ್ನು ಕೆತ್ತಲಾಗಿದ್ದು ಆಭರಣಗಳಿಂದ ಅಲಂಕೃತಗೊಳಿಸಲಾಗಿದೆ. 18ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಗಳು ಈ ದೇವಾಲಯದ ತೈಲ ವರ್ಣ ಚಿತ್ರವನ್ನು ರಚಿಸಿ ಅಂದಿನ ದೇವಾಲಯದ ಸ್ಪಷ್ಟ ಚಿತ್ರಣವನ್ನು ನೀಡಿರುವುದನ್ನು ಗಮನಿಸಬಹುದಾಗಿದೆ. ಪ್ರತಿ ಸೋಮವಾರ,ಸಂಕ್ರಾಂತಿ, ಶಿವರಾತ್ರಿ,ಯುಗಾದಿ ಹಬ್ಬಗಳನ್ನು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಬೆಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಪ್ರಮುಖವಾಗಿದ್ದು ಎಲ್ಲಾ ಸರ್ಕಾರಿ ಖಾಸಗಿ ವಾಹನಗಳು ಈ ಪ್ರದೇಶಕ್ಕೆ ಸಾರಿಗೆ ಸೌಲಭ್ಯ ಒದಗಿಸುತ್ತದೆ. ಬೆಂಗಳೂರು ನಗರ ಪ್ರವಾಸಿ ತಾಣಗಳಿಗೆ ಭೇಟಿ ನೀಡ ಬಯಸುವವರು ಇಲ್ಲಿಗೆ ತಪ್ಪದೇ ಬರುತ್ತಾರೆ . ದೇವಾಲಯವು ಬೆಳಿಗ್ಗೆ ಇಂದ ರಾತ್ರಿ ತನಕ ತೆರೆದಿರುತ್ತದೆ.

 

ಪೂರಕ ಮಾಹಿತಿ :
ಬೆಂಗಳೂರು ಪರಂಪರೆ ಲೇಖಕರಾದ ಶಶಿಧರ ಇವರ ಆಯ್ದ ಬರಹಗಳಿಂದ

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now