ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 14 : ಅಸ್ಪøಶ್ಯತೆ, ಅಸಮಾನತೆ, ಶೋಷಣೆಗಳನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನಿರಂತರವಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು.
ಜೆಡಿಎಸ್. ಕಚೇರಿಯಲ್ಲಿ ಮಂಗಳವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶತ ಶತಮಾನಗಳಿಂದಲೂ ತುಳಿತಕ್ಕೊಳಪಟ್ಟಿದ್ದ ಜನತೆಗೆ ಸಮಾನತೆ ಸಿಗಲಿ ಎನ್ನುವ ಉದ್ದೇಶವಿಟ್ಟುಕೊಂಡು ಅನೇಕ ವರ್ಷಗಳ ಕಾಲ ಹೋರಾಟ ನಡೆಸಿದರು. ಬಾಲ್ಯದಲ್ಲಿಯೇ ಶೋಷಣೆ, ಅಸ್ಪøಶ್ಯತೆ, ಅವಮಾನ, ಹಿಂಸೆ, ಸಂಕಟಗಳನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದಿಂದ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ ಎನ್ನುವುದನ್ನು ಮನಗಂಡು ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ನೀಡಿದ್ದಾರೆಂದು ಗುಣಗಾನ ಮಾಡಿದರು.
ಸ್ವಪ್ರಯತ್ನಗಳಿಂದ ಮಹಾನ್ ಮಾನವತಾವಾದಿಯಾಗಿ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಮೂಲಕ ಶೋಷಿತರಿಗೆ ಧ್ವನಿ ನೀಡಿದರು. ದೇಶದ ಸರ್ವಾಂಗೀಣ ಅಭಿವೃದ್ದಿಗೆ ಸಾಮಾಜಿಕ ಕ್ರಾಂತಿ ಅತ್ಯಗತ್ಯ ಎನ್ನುವುದನ್ನು ಬಲವಾಗಿ ನಂಬಿದ್ದರು. ಅಂತಹ ಮಹಾನ್ ಪುರುಷನ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕಿದೆ ಎಂದು ಹೇಳಿದರು.
ಜೆಡಿಎಸ್.ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಶೋಷಿತ ಜನಾಂಗ ಮೊದಲು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕಾದರೆ ಬೌದ್ದಿಕ ವಿಕಾಸಕ್ಕೆ ಸಮಾಜ ನೆರವು ನೀಡಬೇಕು. ಭಾರತದ ಸಂವಿಧಾನ ಶಿಲ್ಪಿಯಾಗಿ ಮಹತ್ತರ ಸಾಧನೆ ಮಾಡಿ ಅಸ್ಪøಶ್ಯತೆ ನಿರ್ಮೂಲನೆಗಾಗಿ ದಲಿತರನ್ನು ರಾಜಕೀಯ ಮತ್ತು ಸಾಮಾಜಿಕ ಸಮಾನತೆಗೆ ತರಬೇಕೆಂಬುದೇ ಡಾ.ಬಿ.ಆರ್.ಅಂಬೇಡ್ಕರ್‍ರವರ ಬದುಕಿನ ಆಶಯವಾಗಿತ್ತದೆಂದು ಹೇಳಿದರು.
ಅಂಬೇಡ್ಕರ್‍ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಮಹತ್ವ ಕೊಟ್ಟಾಗ ಮಾತ್ರ ಸೌಹಾರ್ಧಯುತ ಸಮಾಜ ನಿರ್ಮಾಣ ಸಾಧ್ಯ. ಮಾನವ ಕುಲ ಒಂದೆ ಎಂದು ಬಲವಾಗಿ ನಂಬಿದ್ದ ಅವರು ಭಾರತದ ಕಟ್ಟ ಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಬದುಕುವಂತಾಗಬೇಕೆಂಬ ಆಸೆಯಿಟ್ಟುಕೊಂಡು ಭದ್ರವಾದ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದು ಸ್ಮರಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ, ಹಿರಿಯೂರು ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಜಲದಪ್ಪ ಇವರುಗಳು ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
















