ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಪ್ರತಿಯೊಬ್ಬರ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿದೆ. ಉಳಿತಾಯ, ಸಂಬಳ ಸ್ವೀಕಾರ ಹಾಗೂ ವ್ಯಾಪಾರ ವಹಿವಾಟುಗಳಿಗಾಗಿ ಬ್ಯಾಂಕ್ ಖಾತೆಗಳ ಅವಲಂಬನೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ.ಈ ಕುರಿತು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಇತರ ಹಣಕಾಸು ನಿಯಂತ್ರಣ ಸಂಸ್ಥೆಗಳು ಒಬ್ಬ ವ್ಯಕ್ತಿ ಎಷ್ಟು ಖಾತೆಗಳನ್ನು ಹೊಂದಬೇಕು ಎಂಬುದಕ್ಕೆ ಯಾವುದೇ ಮಿತಿಯನ್ನು ವಿಧಿಸಿಲ್ಲ. ಕಾನೂನುಬದ್ಧವಾಗಿ ವ್ಯಕ್ತಿಯು ತನ್ನ ಅಗತ್ಯಕ್ಕೆ ಅನುಗುಣವಾಗಿ ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು.ಸಾಮಾನ್ಯವಾಗಿ ಜನರು ತಮ್ಮ ಹಣಕಾಸಿನ ಗುರಿಗಳನ್ನು ಸುಗಮವಾಗಿ ನಿರ್ವಹಿಸಲು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಬಳಸುತ್ತಾರೆ. ದಿನನಿತ್ಯದ ಖರ್ಚು, ಉಳಿತಾಯ ಮತ್ತು ಹೂಡಿಕೆ ಉದ್ದೇಶಗಳಿಗೆ ಪ್ರತ್ಯೇಕ ಖಾತೆಗಳನ್ನು ಹೊಂದುವುದು ಹಣಕಾಸಿನ ನಿಯಂತ್ರಣಕ್ಕೆ ಸಹಕಾರಿ ಆಗುತ್ತದೆ.

ಹೆಚ್ಚಿನ ಖಾತೆಗಳನ್ನು ಹೊಂದುವುದು ನಿರ್ವಹಣಾ ದೃಷ್ಟಿಯಿಂದ ಸವಾಲಿನ ವಿಷಯವಾಗಬಹುದು. ಪ್ರತಿಯೊಂದು ಖಾತೆಯಲ್ಲಿ ಕನಿಷ್ಠ ಬಾಕಿ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಅದನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಡೆಬಿಟ್ ಕಾರ್ಡ್, ಎಸ್ಎಂಎಸ್ ಸೇವೆಗಳಂತಹ ವಾರ್ಷಿಕ ಶುಲ್ಕಗಳು ಕೂಡ ಖರ್ಚು ಹೆಚ್ಚಿಸುತ್ತವೆ.
ಇದಲ್ಲದೆ, ಹಲವು ಖಾತೆಗಳ ಪಾಸ್ವರ್ಡ್ ಮತ್ತು ಲಾಗಿನ್ ವಿವರಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು ಕಷ್ಟಕರವಾಗಬಹುದು. ದೀರ್ಘಕಾಲ ಬಳಕೆಯಾಗದ ಖಾತೆಗಳು ನಿಷ್ಕ್ರಿಯವಾಗುವ ಸಾಧ್ಯತೆ ಇದ್ದು, ಅವುಗಳನ್ನು ಮರುಸಕ್ರಿಯಗೊಳಿಸಲು ಪ್ರಕ್ರಿಯೆಗಳು ಅಗತ್ಯವಾಗುತ್ತವೆ.
ಹೀಗಾಗಿ, ಅಗತ್ಯವಿರುವಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿ, ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಉತ್ತಮ. ಬಳಕೆಯಲ್ಲಿಲ್ಲದ ಖಾತೆಗಳನ್ನು ಮುಚ್ಚುವುದು ಆರ್ಥಿಕ ಶಿಸ್ತು ಕಾಪಾಡಲು ಸಹಾಯಕವಾಗುತ್ತದೆ. ಒಟ್ಟಿನಲ್ಲಿ, ಖಾತೆಗಳ ಸಂಖ್ಯೆಗೆ ಹೋಲಿಸಿದರೆ ಅವುಗಳ ಸಮರ್ಪಕ ನಿರ್ವಹಣೆ ಮತ್ತು ಭದ್ರತೆ ಹೆಚ್ಚು ಮಹತ್ವದ್ದಾಗಿದೆ.



















