ಚಿತ್ರದುರ್ಗ. ಅ.14: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಉಂಟಾಗುತ್ತಿರುವ ಸಂಘರ್ಷಗಳನ್ನು ತಪ್ಪಿಸುವ ಸಲುವಾಗಿ, ಸಂಘರ್ಷಾತ್ಮಕ ಘಟನೆಗಳು ನಡೆದ ಸ್ಥಳಗಳಲ್ಲಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಎಸ್.ರಮ್ಯಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘರ್ಷದ ಕುರಿತು ಮಾಹಿತಿ ದೊರತ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಗಳಿಗೆ ಭೇಟಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಅಹವಾಲುಗಳನ್ನು ಆಸಲಿಸಬೇಕು. ತಕ್ಷಣವೇ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದರು.
ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಹಾಗೂ ಸಂತ್ರಸ್ತರು ಕುಂದು ಕೊರತೆಗಳನ್ನು ಸಲ್ಲಿಸಲು ಅನುವಾಗುವಂತೆ, ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಕುಂದು ಕೊರತೆ ಸಭೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಸಲುವಾಗಿ, ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಉಚ್ಛನ್ಯಾಯಾಲಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಪ್ರತಿ ತಿಂಗಳ ಮೂರನೇ ಅಥವಾ ನಾಲ್ಕನೇ ಶನಿವಾರ ದೌರ್ಜನ್ಯ ತಡೆ ಕುರಿತು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಜಿಲ್ಲಾ ಮಟ್ಟದಲ್ಲಿ ತಿಂಗಳಿಗೆ ಒಮ್ಮೆ ಈ ಕುರಿತು ಸ್ವತಃ ಸಭೆ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸಭೆಯಲ್ಲಿ ತಿಳಿಸಿದರು.
ಸರ್ಕಾರ ಹೊರಡಿಸಿರುವ ಎಸ್.ಓ.ಪಿ ಅನುಸರಿಸಿಯೇ, ರೌಡಿ ಶೀಟರ್ಗಳನ್ನು ಗುರುತಿಸಲಾಗುತ್ತಿದೆ. ಯಾವುದೇ ನಿಯಮಗಳ ಉಲಂಘನೆ ಕಂಡುಬಂದಿಲ್ಲ. ಒಂದು ವೇಳೆ ನಿರ್ದಿಷ್ಟ ಪ್ರಕರಣದ ಕುರಿತು ಮಾಹಿತಿ ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವರ್ಷವೂ ರೌಡಿ ಶೀಟರ್ಗಳ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಿದರು.
ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಿ:
ವಿವಿಧ ಇಲಾಖೆಗಳ ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ. ಅನುದಾನ ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಸೌಲಭ್ಯ ನೀಡುವಾಗ ದೌಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಬೇಕು. ಇದರೊಂದಿಗೆ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಆಯಾ ಠಾಣಾಧಿಕಾರಿಗಳು ಪ್ರತಿ 15 ದಿನಗಳಿಗೆ ಒಮ್ಮೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳನ್ನು ಸಭೆ ನಡೆಸಬೇಕು ಎಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಟಿ.ಡಿ.ರಾಜಗಿರಿ ಕೋರಿದರು.
371(ಎ) ಸೇರಿಸಲು ಒತ್ತಾಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೆಚ್ಚಾಗಿ ವಾಸಿಸುವ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ವಿಶಿಷ್ಟ ಸಂಪ್ರದಾಯ ಹಾಗೂ ಸಂಸ್ಕøತಿಯನ್ನು ರಕ್ಷಿಸುವ ಸಲುವಾಗಿ ನಾಗಾಲ್ಯಾಂಡ್ ಮಾದರಿಯಲ್ಲಿ ಸಂವಿಧಾನದಲ್ಲಿ 371(ಎ) ಜಾರಿಗೊಳಿಸಿ, ಚಳ್ಳಕೆರೆ ಮತ್ತು ಮೊಳಕಾಲ್ಮೂರುಗಳನ್ನು ಸೇರಿಸಲು ಶಿಫಾರಸ್ಸು ಮಾಡುವಂತೆ ಸಮಿತಿ ಸದಸ್ಯ ಪ್ರಶಾಂತ್ ಕುಮಾರ್ ಸಭೆಯಲ್ಲಿ ಒತ್ತಾಯಿಸಿದರು.
ಜಿಲ್ಲೆಯ 25 ಕಡೆ ಪರಿಶಿಷ್ಟ ವರ್ಗದವರು ದೇವರ ಎತ್ತು ಹಾಗೂ ಕಿಲಾರಿ ಸಂಪ್ರದಾಯ ಪಾಲಿಸುತ್ತಿದ್ದು, ದೇಶಿ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಇವರಿಗೆ ಸರ್ಕಾರ ವತಿಯಿಂದ ಸೌಲಭ್ಯ ನೀಡುವಂತೆ ಕೋರಿದರು.
ಈಗಾಗಲೇ ದೇವರ ಎತ್ತುಗಳ ರಕ್ಷಣೆಗಾಗಿ ಟ್ರಸ್ಟ್ ರಚಿಸಲಾಗುತ್ತಿದೆ. ಇವುಗಳನ್ನು ನೊಂದಾಯಿಸಿ, ದೇವರ ಎತ್ತುಗಳಿಗೆ ದೈನಂದಿನ ಮೇವು, ಆರೋಗ್ಯ ನಿರ್ವಹಣೆ ಹಾಗೂ ವೈದ್ಯಕೀಯ ನೆರವುಗಳನ್ನು ಒದಗಿಸಲಾಗುತ್ತಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.
74 ಪ್ರಕರಣಗಳು ದಾಖಲು:
ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ 10 ವರೆಗೆ ಒಟ್ಟು 74 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಮೇಲೆ 59 ಹಾಗೂ ಪರಿಶಿಷ್ಟ ವರ್ಗದವರ ಮೇಲೆ 15 ದೌರ್ಜನ್ಯಗಳು ನಡೆದಿವೆ. ಒಟ್ಟು 62 ಲಕ್ಷ ಪರಿಹಾರವನ್ನು ಸಂತ್ರಸ್ತರಿಗೆ ನೀಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಜರುಗಿದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ರೂ.1.02 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಸದ್ಯ ರೂ.20 ಲಕ್ಷ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಬಿ.ರಾಜಪ್ಪ, ಮುದ್ದಪ್ಪ.ವೈ, ಪ್ರಶಾಂತ್ ಕುಮಾರ್, ಟಿ.ರವೀಂದ್ರ, ಹೇಮೇಗೌಡ, ಜಿ.ಪಿ.ರವಿಶಂಕರ್, ಎಂ.ರಾಜಣ್ಣ, ಓಂಕಾರ ಮೂರ್ತಿ, ಅರುಣ್ ಕುಮಾರ್, ಅವಿನಾಶ್, ನರೇನಹಳ್ಳಿ ಅರುಣ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿರಿದ್ದರು.













