ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 14 :
ಧಮ್ಮದೀಕ್ಷಾ ದಿನವು ಸಮಾನತೆ, ಆತ್ಮಗೌರವ ಮತ್ತು ವಿಮೋಚನೆಯ ಸಂಕೇತವಾಗಿದ್ದು, ಮಾನವ ಘನತೆಯ ಹೊಸ ಪಯಣಕ್ಕೆ ನಾಂದಿಯಾಗಿದೆ ಎಂದು ಚಳ್ಳಕೆರೆಯ ದಲಿತ ಚಿಂತಕ, ಉಪಾಸಕ ಪಿ. ದ್ಯಾಮಯ್ಯ ಮೈತ್ರಿ ಅವರು
ತಿಳಿಸಿದರು.
ಅಂಬೇಡ್ಕರ್ ವಿಚಾರ ವೇದಿಕೆ (ರಿ) ವತಿಯಿಂದ ಬುದ್ಧನಗರದ ಒನಕೆ ಓಬವ್ವ ಕ್ರೀಡಾಂಗಣ ಮುಂಭಾಗದ ಬುದ್ಧ ಪ್ರತಿಮೆಯ ಬಳಿ ಹಮ್ಮಿಕೊಳ್ಳಲಾದ 70ನೆಯ ಧಮ್ಮದೀಕ್ಷಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಪಾಲಿಗೆ ಬೌದ್ಧಧಮ್ಮವು ಧಾರ್ಮಿಕ ಚಿಂತನೆ ಮಾತ್ರವಾಗಿರಲಿಲ್ಲ, ಅದು ಜಾತಿವ್ಯವಸ್ಥೆ ಮತ್ತು ಸಾಮಾಜಿಕ ಅನ್ಯಾಯವನ್ನು ಪ್ರಶ್ನಿಸುವ ವೈಚಾರಿಕ ಶಕ್ತಿಯಾಗಿದ್ದಂತೆಯೇ ಸಮಾನತೆಯ ಸಮಾಜ ನಿರ್ಮಿಸುವ ನೈತಿಕ ಮಾರ್ಗವೂ ಆಗಿತ್ತು ಎಂದರು. ಬಾಬಾಸಾಹೇಬರ ಧಮ್ಮದೀಕ್ಷೆಗೆ 70 ವರ್ಷಗಳು ತುಂಬಿರುವ ಐತಿಹಾಸಿಕ ಸಂದರ್ಭದಲ್ಲಿ ಬುದ್ದರು ಬೋಧಿಸಿದ ಪ್ರಜ್ಞೆ ಕರುಣೆ ಮತ್ತು ಸಮತೆಯ ಮಾರ್ಗವು ಸಮಾಜಕ್ಕೆ ಅನುಸರಣೆಯ ಆದರ್ಶ ಪಥವಾಗಬೇಕು
ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪಾಸಕರಾದ ಬಿ.ಪಿ.ತಿಪ್ಪೇಸ್ವಾಮಿ ಅವರು ಧಮ್ಮದೀಪವನ್ನು ಬೆಳಗಿಸಿ ಮಾತನಾಡುತ್ತಾ, ಮಹಿಳೆಯರೂ ಸೇರಿದಂತೆ ಶೋಷಿತರೆಲ್ಲರೂ ಬುದ್ಧ ಮತ್ತು ಅಂಬೇಡ್ಕರರ ಚಿಂತನೆಯ ನೆರವಿನಲ್ಲಿ ನಡೆಯುವಂತಾಗಬೇಕು, ಅಂಬೇಡ್ಕರ್ ಅವರು ಧಮ್ಮವನ್ನು ಕಟ್ಟುವ ಅಚಲ ಕಾಯಕಕ್ಕೆ ಬದ್ಧರಾಗಿದ್ದವರು, ಮರಳಿ ಭಾರತದಲ್ಲಿ ಬುದ್ದಧಮ್ಮವನ್ನು ನೆಲೆಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮಕ್ಕೆ ಮೊದಲು ಉಪಾಸಕರೆಲ್ಲರೂ ಬುದ್ಧ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬುದ್ಧವಂದನೆ, ತ್ರಿಸರಣ ಮತ್ತು ಪಂಚಶೀಲಗಳ ಪಠಣ ಮಾಡಿದರು. ಕಾರ್ಯಕ್ರಮದ ಮೊದಲಿಗೆ ಬುದ್ದಗೀತೆಯ ಗಾಯನವನ್ನು ಶಿವಶಂಕರ ಸೀಗೆಹಟ್ಟಿ ನೆರವೇರಿಸಿದರು. ಸಾಹಿತಿ ಮೋದೂರು ತೇಜ ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಸಕ ಬುದ್ಧನಗರದ ಸಿದ್ದೇಶ್ ಬಾಬಾಸಾಹೇಬರ 22 ಪ್ರತಿಜ್ಞೆಗಳನ್ನು ಬೋಧಿಸಿದರು.
ಕಾರ್ಯಕ್ರಮದ ನಂತರ ಜೀವದಾಯಿ ಸುಜಾತ ಮಾತೆಯ ನೆನಪಿನಲ್ಲಿ ಪಾಯಸ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಂಬೂದ್ವೀಪ ಕರ್ನಾಟಕದ ಬಾಲೇನಹಳ್ಳಿ ರಾಮಣ್ಣ, ಪ್ರಾಂಶುಪಾಲರಾದ ನಾಗೇಂದ್ರಪ್ಪ, ಹೆಚ್.ಬಹುಗುಣ, ಹನುಮಂತಪ್ಪ, ಲೇಖಕರಾದ ಹೆಚ್. ಆನಂದಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಂ.ಗುರುನಾಥ, ಅಂಬೇಡ್ಕರ್ ವಿಚಾರ ವೇದಿಕೆಯ ಡಾ.ಶ್ರೀನಿವಾಸರಾಜು ದೊಡ್ಡೇರಿ, ವಿಶ್ವಾನಂದ ವದ್ದೀಕೆರೆ, ಪ್ರಕಾಶ ಯಾದಲಗಟ್ಟೆ, ಪ್ರದೀಪ್.ಎಸ್, ಸಿದ್ದಪ್ಪ, ಸದಾಶಿವ, ವಿ.ರಾಜು, ಬಿ.ಎಸ್.ಐ ಮಹಿಳಾ ಘಟಕದ ಲಕ್ಷ್ಮಕ್ಕ, ಶಕುಂತಲಾ, ಡಾ. ಆರ್.ಮಮತಾ, ಗಾನಸುಧಾ ಮುಂತಾದವರು ಉಪಸ್ಥಿತರಿದ್ದರು.











