Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ನಗರದ ಗಾರೆಹಟ್ಟಿ ಮಹೇಶ್ವರ ದೇವಾಲಯದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

 

ಚಿತ್ರದುರ್ಗದ ಗಾರೆಹಟ್ಟಿ (ಚೋಳಗಟ್ಟ)ಯಲ್ಲಿರುವ ಮಹೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣವಾಗಿದ್ದು ,ಕ್ರಿಸ್ತಶಕ 1187 ರಲ್ಲಿ ನಿರ್ಮಾಣವಾಗಿದೆ. ಉತ್ತಮ ಸಂರಕ್ಷಣಾ ಶೈಲಿಯಲ್ಲಿದ್ದು, ಪೂರ್ವಾಭಿಮುಖವಾಗಿದೆ.ಬಹಳಷ್ಟು ಜನರು ಈ ಮಂದಿರವನ್ನು ಚೋಳೇಶ್ವರ ದೇವಸ್ಥಾನ ಎಂದು ಹೇಳುತ್ತಾರೆ. ಆದರೆ ಈ ಮಂದಿರ ಮಹೇಶ್ವರ ದೇವಾಲಯ.

 

ಇದು ಶಾಸನಗಳಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ದೇವಾಲಯದಲ್ಲಿಗರ್ಭಗೃಹ,ಅರ್ಧ ಮಂಟಪ ,ತೆರೆದ ಸಭಾಮಂಟಪ ಹಾಗೂ ಮುಂಭಾಗದಲ್ಲಿ ನಂದಿ ಮಂಟಪಗಳಿರುವ ಪ್ರಾಚೀನ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಎರಡೂವರೆ ಅಡಿ ಎತ್ತರದ ಕಪ್ಪುಶಿಲೆಯ ಪ್ರತಿಷ್ಠಾಪನಾ ಶಿವಲಿಂಗವಿದೆ. ಅರ್ಧ ಮಂಟಪದಲ್ಲಿ ಎರಡು ಚಚ್ಚೌಕ,ವೃತ್ತ ಹಾಗೂ ಅಷ್ಟ ಮುಖಗಳಲ್ಲಿ ಕಡೆಯಲಾದ ಕಂಬಗಳಿವೆ . ಸಭಾಮಂಟಪದ ಸುತ್ತಲೂ ಇದೇ ಬಗೆಯ ಕಂಬಗಳನ್ನು ಕಾಣಬಹುದು .ಹಿಂದೆ ಈ ದೇಗುಲದ ಸಭಾಮಂಟಪವು ತೆರೆದ ಸಭಾಮಂಟಪವಾಗಿತ್ತು ಸಭಾ ಮಂಟಪದಲ್ಲಿ ಈಗ ಸುತ್ತಲೂ ಗೋಡೆಯನ್ನು ನಿರ್ಮಿಸಲಾಗಿದೆ. ಸಭಾಮಂಟಪದ ಸುತ್ತಲೂ ಭಕ್ತರು ವಿಶ್ರಮಿಸಿಕೊಳ್ಳಲು ನಿರ್ಮಿಸಿದಕಕ್ಷಾಸನವಿದೆ.ದೇಗುಲದ ಗರ್ಭಗೃಹದ ಮೇಲೆ ಇತ್ತೀಚೆಗೆ ನಿರ್ಮಿಸಿದ ದ್ರಾವಿಡ ಮಾದರಿಯ ಶಿಖರವಿದ್ದು,ಮೇಲ್ಭಾಗದಲ್ಲಿ ಲೋಹದ ಕಳಸವನ್ನು ಪ್ರತಿಷ್ಟಾಪಿಸಿರುವರು.
ದೇಗುಲಕ್ಕೆ ಎದುರಾಗಿ ನಂದಿ ಮಂಟಪವಿದೆ .ಇದೊಂದು ಚಿಕ್ಕ ದೇಗುಲ .ನಂದಿ ಮಂಟಪದಲ್ಲಿ ಮೂರು ಅಡಿ ಎತ್ತರ ಹಾಗೂ ನಾಲ್ಕು ಅಡಿ ಉದ್ದದ ನಂದಿಯಿದೆ. ಇದನ್ನು ದಂಡೆ, ಗಂಟೆಸರ, ಹಣೆಪಟ್ಟಿ ಮೊದಲಾದವುಗಳಿಂದ ಅಲಂಕರಿಸಲಾಗಿದೆ .ನಂದಿ ಮಂಟಪದ ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿರುವರು.ಈ ಮಂಟಪದಲ್ಲಿ ಗಣೇಶ ಮತ್ತು ಭೈರವ ಶಿಲ್ಪಗಳಿವೆ.
ಸಮಭಂಗಿಯಲ್ಲಿ ನಿಂತಿರುವ ಗಣೇಶನ ಎಡ ಬಲದಲ್ಲಿ ಸಿದ್ದಿ ಬುದ್ದಿ ಯನ್ನು ಕಡೆದಿರುವರು. ಸುಂದರ ಕೆತ್ತನೆಯನ್ನು ಒಳಗೊಂಡ ಭೈರವನು ಜಟ ಮುಕುಟವನ್ನು, ಮೇಲ್ಭಾಗದಲ್ಲಿ ಕೀರ್ತಿ ಮುಖದ ಪ್ರಭಾವಳಿ, ಕೊರಳಲ್ಲಿ ರುಂಡಮಾಲೆ,ಹಾರ, ಕಂಠಹಾರ,ಚೆನ್ನವೀರ, ಸೊಂಟದಲ್ಲಿ ಗಂಟೆಸರವನ್ನು, ಕಾಲುಗಳಲ್ಲಿ ಸರ್ಪಗಳು ಸುತ್ತಿಕೊಂಡಿವೆ .ಇವುಗಳಲ್ಲದೆ ಕೈಕಡಗ,ಕಾಲುಕಡಗ, ಕರ್ಣಕುಂಡಲ ಮೊದಲಾದ ಆಭರಣಗಳನ್ನು ಧರಿಸಿರುವನು.ಭೈರವನ ಇಕ್ಕೆಲಗಳಲ್ಲಿ ಅಸ್ತಿಪಂಜರ ಮಾತ್ರವಿರುವ ವ್ಯಕ್ತಿಗಳನ್ನು ಚಿತ್ರಿಸಲಾಗಿದೆ. ದೇವಾಲಯದ ಎಡ ಬದಿಯಲ್ಲಿ ವಿಷ್ಣುವಿನ ಮೂರೂವರೆ ಅಡಿಗಳೆತ್ತರದ ಸುಂದರವಾದ ಹೊಯ್ಸಳ ಶೈಲಿಯ ಶಿಲ್ಪವಿದೆ .ಇದರ ಪಕ್ಕದಲ್ಲಿ ಮಹಿಷಾಮರ್ದಿನಿಯ ಚಿಕ್ಕ ದೇಗುಲವಿದೆ .ಇದರಲ್ಲಿ ಮಹಿಷಮರ್ದಿನನ್ನು ಸಂಹರಿಸುತ್ತಿರುವ ಚಾಮುಂಡಿಯ ಶಿಲ್ಪವಿದೆ.

 

ಇದು ಜೀರ್ಣೋದ್ಧಾರ ಮಾಡಲಾಗಿದ್ದು ,ಸಭಾ ಮಂಟಪದ ಮೇಲೆ ಶಿವನ ಬೃಹತ್ ಮೂರ್ತಿಯನ್ನು ಇಟ್ಟಿಗೆ ಸಿಮೆಂಟ್ ಬಳಸಿ ನಿರ್ಮಿಸಿದ್ದಾರೆ.
ದೇವಾಲಯದ ಸಭಾ ಮಂಟಪದಲ್ಲಿ 1187 ಗೆ ಸೇರಿದ ಶಿಲಾಶಾಸನವಿದೆ. ಇದು ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ.ಆದರೆ ಶಾಸನದಲ್ಲಿ ಹೇಳಲಾದ ಪ್ಲವಂಗ ಸಂವತ್ಸರವು ಕ್ರಿ.ಶ.1187 ಗೆ ಸರಿಹೋಗುತ್ತಿದ್ದು ,ಈ ಅವಧಿಯಲ್ಲಿ ಆರನೇ ವಿಕ್ರಮಾದಿತ್ಯನ ಆಳ್ವಿಕೆ ಇರುವುದಿಲ್ಲ .ಹಾಗಿದ್ದೂ ಆರನೇ ವಿಕ್ರಮಾದಿತ್ಯನನ್ನು ಉಲ್ಲೇಖಿಸುತ್ತಿರುವುದು ಅವನ ಆಳ್ವಿಕೆಯು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವುದು ಇದರಿಂದ ಗೊತ್ತಾಗುತ್ತದೆ .ಅಲ್ಲದೆ ಕಲ್ಯಾಣ ಚಾಲುಕ್ಯರನ್ನು ಹತ್ತಿಕ್ಕಿ ಬಂದ ಕಲಚೂರಿಗಳನ್ನು ಉಚ್ಚಂಗಿ ಪಾಂಡ್ಯ ಮನೆತನದ ಅರಸರು ತಮ್ಮ ಅರಸರೆಂದು ಒಪ್ಪಿಕೊಂಡಿಲ್ಲವೆಂಬ ಸಂಗತಿ ಇದರಿಂದ ವ್ಯಕ್ತಗೊಳ್ಳುತ್ತದೆ.ಪಾಂಡ್ಯ ಮನೆತನದ ವಿಜಯಪಾಂಡ್ಯದೇವನು ಈ ಅವಧಿಯಲ್ಲಿ ಉಚ್ಚಂಗಿ ಯನ್ನು ಕಲ್ಯಾಣ ಚಾಲುಕ್ಯರ ಮಹಾಮಂಡಲೇಶ್ವರನಾಗಿ ಆಳುತ್ತಿದ್ದನು .ಇವನ ಅಧೀನದಲ್ಲಿ ಮಹಾಸಾಮಂತನಾದ ಕಾಮೆಯನಾಯಕ ಬಿಂಮ್ಮಚ್ಚನೂರ ನೆಲೆವೀಡನ್ನು ನೋಡಿಕೊಳ್ಳುತ್ತಿದ್ದನು.

 

ಈ ಮೇಲಿನ ಶಾಸನದಲ್ಲಿ ಹೇಳಲಾದ ಅರಸನನ್ನು ಹೊರತು ಪಡಿಸಿ ನೋಡುವುದಾದರೆ ಉದಯಾದಿತ್ಯನ ಹೆಗ್ಗಡೆಯಾದ ಮಾಚಯ್ಯನ ಮಗಳಾದ ಗಂಗವ್ವೆಯು ಶಿವಧರ್ಮೋತ್ತರದಲ್ಲಿ ಲಿಂಗಪ್ರತಿಷ್ಠೆಯ ಮಹಾತ್ಮೆಯನ್ನು ಕೇಳಿ ಲಿಂಗ ಪ್ರತಿಷ್ಟೆಯನ್ನು ಮಾಡಿದಳೆಂಬುದು ತಿಳಿಯುತ್ತದೆ. ಇದರಿಂದಾಗಿ ಈ ದೇವಾಲಯವನ್ನು ಗಂಗವ್ವೆಯು ಕಾಮಯ್ಯ ನಾಯಕನನ್ನು ಕೋರಿಕೊಂಡು ಕಟ್ಟಿಸಿದಳೆಂಬುದು ಸ್ಪಷ್ಟವಾಗುತ್ತದೆ .ದೇವಾಲಯವನ್ನು ಕಟ್ಟಿಸಿದುದಲ್ಲದೆ ಸೋಮರಾಶಿ ಪಂಡಿತರ ಕಾಲನ್ನು ತೊಳೆದು ಧಾರಾಪೂರ್ವಕವಾಗಿ ಭೂಮಿಯನ್ನು ದಾನ ಮಾಡಿದ ವಿವರವೂ ಈ ಶಾಸನದಲ್ಲಿದೆ .ಒಟ್ಟಿನಲ್ಲಿ 1187ರಲ್ಲಿ ಈ ದೇವಾಲಯವನ್ನು ನಿರ್ಮಿಸಿ ದೇವಾಲಯದ ಪೂಜೆ ಮೊದಲಾದ ಕಾರ್ಯಗಳಿಗೆ ಭೂಮಿ ದಾನ ನೀಡಿದ ವಿವರ ಸ್ಪಷ್ಟವಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...