ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ತೋಟಗಾರಿಕೆ ಇಲಾಖೆ ಆವರಣದಲ್ಲಿ ಮರಗಳನ್ನು ಕಡಿಯುವ ಸರ್ಕಾರದ ನಿರ್ಧಾರದ ವಿರುದ್ಧ ಪರಿಸರ ಪ್ರೇಮಿಗಳು ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸರ ನಾಶದ ವಿರುದ್ಧ ಧರಣಿ ಸತ್ಯಾಗ್ರಹ
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ ಹಾಗೂ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮರ-ಗಿಡಗಳನ್ನು ಕಡಿದು ಪರಿಸರ ನಾಶಪಡಿಸುತ್ತಿರುವುದರ ವಿರುದ್ಧ ಜಿಲ್ಲೆಯ ವಿವಿಧ ಪರಿಸರ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸೋಮವಾರ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಮರಗಳ ಮಾರಣ ಹೋಮಕ್ಕೆ ಕೆ.ಎಸ್. ನವೀನ್ ಕಿಡಿ
“ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿರುವ ಮರ-ಗಿಡಗಳನ್ನು ಕಡಿದು ಅಲ್ಲಿ ಕಟ್ಟಡಗಳನ್ನು ಕಟ್ಟಲು ಅಧಿಕಾರಿಗಳು ಉದ್ದಟತನ ತೋರಿದರೆ ಒಂದು ಇಟ್ಟಿಗೆ ಇಡಲು ಬಿಡುವುದಿಲ್ಲ” ಎಂದು ಕೆ.ಎಸ್. ನವೀನ್ ಎಚ್ಚರಿಸಿದರು. ವಿಜ್ಞಾನ ಕಾಲೇಜು ಆವರಣದಲ್ಲಿ 200ಕ್ಕೂ ಹೆಚ್ಚು ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮರಗಳ ಮಾರಣ ಹೋಮ ನಡೆಸಲಾಗುತ್ತಿದೆ ಎಂದು ಅವರು ದೂರಿದರು.
ನಿಯಮ ಬಾಹಿರ ಕಟ್ಟಡ ನಿರ್ಮಾಣದ ಆರೋಪ
ಮಹಿಳಾ ಕಾಲೇಜು ಕಟ್ಟಡ ಹಾಗೂ ಲಾಂಜ್ ನಿರ್ಮಾಣದ ವಿಚಾರದಲ್ಲಿ ಅಧಿಕಾರಿಗಳ ಹಠಮಾರಿ ಧೋರಣೆಯನ್ನು ನವೀನ್ ಪ್ರಶ್ನಿಸಿದರು. ಕಾಲೇಜು ಕಟ್ಟಡ ಒಂದು ಕಡೆ ಮತ್ತೊಂದು ಕಡೆ ಲಾಂಜ್ ಇರಬಾರದೆಂಬ ನಿಯಮವಿದ್ದರೂ, ಯಾರ ಮಾತಿಗೂ ಮನ್ನಣೆ ನೀಡದೆ ಅಧಿಕಾರಿಗಳು ಹದ್ದುಮೀರಿ ವರ್ತಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪರ್ಯಾಯ ಜಾಗದ ಸಲಹೆ
ಪರಿಸರ ನಾಶ ಮಾಡುವ ಬದಲು ವಿ.ಶೇಪ್‍ನಲ್ಲಿ ಕಟ್ಟಿ ಸ್ಟೇಡಿಯಂಗೆ ಹೋಗುವ ರಸ್ತೆಯ ಮೂಲೆಯಲ್ಲಿ ಅಥವಾ ತೋಟಗಾರಿಕೆ ಇಲಾಖೆ ಪಕ್ಕದಲ್ಲಿರುವ ಹಳೆಯ ಕ್ವಾಟ್ರಸ್‍ಗಳನ್ನು ಕೆಡವಿ ಅಲ್ಲಿ ಹೊಸ ಕಟ್ಟಡಗಳನ್ನು ಕಟ್ಟಬಹುದು. ಹಸಿರು ಪರಿಸರ ಹಾಳು ಮಾಡಿ ಕಟ್ಟಡ ಕಟ್ಟುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯ ಪರಿಸರ ಸ್ಥಿತಿ ಮತ್ತು ಎಚ್ಚರಿಕೆ
ಜಿಲ್ಲೆಯಲ್ಲಿ ಶೇ.33 ರಷ್ಟು ಇರಬೇಕಾದ ಅರಣ್ಯ ಪ್ರದೇಶ ಕೇವಲ ಶೇ.10 ರಷ್ಟಿದೆ. ಬರ ಪೀಡಿತ ಪ್ರದೇಶದಲ್ಲಿ ಮರಗಳನ್ನು ಕಡಿದರೆ ತಾಪಮಾನ ಹೆಚ್ಚಿ ಜೀವಸಂಕುಲಕ್ಕೆ ತೊಂದರೆಯಾಗುತ್ತದೆ. ಹಸಿರು ಪರಿಸರ ಉಳಿಸದಿದ್ದರೆ ಬೀದಿ ಹೋರಾಟಕ್ಕೆ ಸಿದ್ಧ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಭಾಗಿಯಾದ ಗಣ್ಯರು
ಪರಿಸರವಾದಿ ಹೆಚ್.ಎಸ್.ಕೆ.ಸ್ವಾಮಿ, ಕವಿತರೆಡ್ಡಿ, ಇನ್ನರ್‍ವೀಲ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ಜಾನ ಚಂದ್ರಕಲಾ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನ್ಯಾಯವಾದಿ ದಿಲ್‍ಶಾದ್, ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ನಾಗರಾಜ್‍ಬೇದ್ರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಪದ್ಮಾವತಿ, ಕಸವನಹಳ್ಳಿ ರಮೇಶ್, ಮಾಲತೇಶ್ ಅರಸ್, ಮಂಜುನಾಥ್ ಕಳ್ಳಿಹಟ್ಟಿ, ವಕೀಲ ಸೈಯದ್ ಸ್ವಾಲೇಹ, ರೀನ ವೀರಭದ್ರಪ್ಪ, ಗಿರೀಶ್, ತೇಜಮೂರ್ತಿ, ಕೆ.ಆರ್.ರಘುನಾಥ್, ನಿವೃತ್ತ ಸಬ್‍ಇನ್ಸ್‍ಪೆಕ್ಟರ್ ನಾಗರಾಜ್, ಎಂ.ಬಿ.ಜಯದೇವಮೂರ್ತಿ, ಶಿವರುದ್ರಪ್ಪ
ಕರಿಯಮ್ಮ, ಶಶಿಕಲಾ, ಕೆಂಚಮ್ಮ, ಎಪಿಜೆ.ಅಬ್ದುಲ್ ಕಲಾಂ ಸಂಘದ ರೇಷ್ಮ, ಕೆ.ಕುಮಾರ್, ಜೀವೇಶ್ ಇನ್ನು ಅನೇಕರು ಪಾಲ್ಗೊಂಡು ಬೆಂಬಲ ಸೂಚಿಸಿದರು.
















