ಎಚ್.ಪಿ.ವಿ ಲಸಿಕೆ ಅತ್ಯಂತ ಸುರಕ್ಷಿತ : ಡಾ. ಮೆಲ್ವಿನ್ ಕುಮಾರ್

2 Min Read

ಚಿತ್ರದುರ್ಗ. ಮಾ.13: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಂಡುಬರುಲು ಹ್ಯೂಮನ್ ಪ್ಯಾಪಿಲೋಮ ವೈರಸ್(ಎಚ್.ಪಿ.ವಿ) ಹೆಚ್ಚಾಗಿ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ನೀಡುವ ಎಚ್.ಪಿ.ವಿ ಲಸಿಕೆ ಸುರಕ್ಷಿತವಾಗಿದ್ದು, ಗರ್ಭಕಂಠದ ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ ಎಂದು ಲಸಿಕಾಕಾರಣದ ರಾಜ್ಯ ಯೋಜನಾಧಿಕಾರಿ ಡಾ.ಮೆಲ್ವಿನ್ ಕುಮಾರ್ ಹೇಳಿದರು.

 

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ನಗರದ ನೆಹರು ನಗರ ಆರೋಗ್ಯ ಕೇಂದ್ರದಲ್ಲಿ, ಶುಕ್ರವಾರ ಆಯೋಜಿಸಿದ ಎಚ್.ಪಿ.ವಿ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಚ್.ಪಿ.ವಿ ಜನನಾಂಗದ ಸೋಂಕುಗಳಿಗೆ ಕಾರಣವಾಗುವ ಒಂದು ಸಾಮಾನ್ಯ ವೈರಸ್. ಭಾರತದಲ್ಲಿ ಕ್ಯಾನ್ಸರ್ ಪತ್ತೆಯಾದ ಮಹಿಳೆಯರ ಪೈಕಿ ಗರ್ಭಕಂಠದ ಕ್ಯಾನ್ಸರ್ ತುತ್ತಾದವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ದೇಶಾದ್ಯಂತ ನಡೆಯುತ್ತಿರುವ ಲಿಸಿಕಾಕರಣದ ಅಭಿಯಾನದಲ್ಲಿ ಮುಖ್ಯವಾಗಿ 14 ವರ್ಷ ತುಂಬಿದ 15 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಎಚ್.ಪಿ.ವಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

 

ತಾಲೂಕಾ ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡುತ್ತಾ ಎಚ್.ಪಿ.ವಿ ಲಸಿಕೆ ಹೊಸದೇನಲ್ಲ ಜಗತ್ತಿನಾದ್ಯಂತ ಈಗಾಗಲೇ 50 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಕಳೆದ 15 ವರ್ಷಗಳ ಅಂಕಿ ಅಂಶಗಳು ಎಚ್.ಪಿ.ವಿ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತುಪಡಿಸಿವೆ ಎಂದರು.

 

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾಹಿತಿ ನೀಡುತ್ತಾ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಪೋಷಕರು 14 ವರ್ಷ ತುಂಬಿದ 15 ವರ್ಷದ ಒಳಗಿನ ಹೆಣ್ಣು ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆಗಳನ್ನು ಹಾಕಿಸಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಯಲು ಮುಂದೆ ಬರಬೇಕೆಂದರು.

 

ನೆಹರು ನಗರ ಆರೋಗ್ಯ ಕೇಂದ್ರದಲ್ಲಿ 8 ಅರ್ಹ ಮಕ್ಕಳಿಗೆ ಎಚ್.ಪಿ.ವಿ ಲಸಿಕೆ ನೀಡಲಾಯಿತು. ಈ ವೇಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣನಾಯಕ್ , ಡಾ. ಸೈಯದ್ ಬಿಲಾಲ್. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಬಿ.ಪಿ.ಎಂ ಯೂನಿಟ್ ಸಂತೋಷ್, ವ್ಯಾಕ್ಸಿನ್ ಕೋಲ್ಡ್ ಚೈನ್ ಮ್ಯಾನೇಜರ್ ವೀರೇಶ್, ಆಶಾ ಮೆಂಟರ್ ತಬಿತಾ, ಎಚ್‌ಓ ಹನುಮಂತಪ್ಪ. ಪಿ.ಎಚ್.ಸಿ.ಓ ಮನು, ಸಿಬ್ಬಂದಿ ಲಿಖಿತ, ಪದ್ಮ, ಆಶಾ ಕಾರ್ಯಕರ್ತೆಯರಾದ ಕೆಂಚಮ್ಮ, ಭಾಗ್ಯಮ್ಮ, ನಮ್ರತಾ, ನೇತ್ರಾವತಿ ಇತರೆ ಸಿಬ್ಬಂದಿ ವರ್ಗದವರು ಪೋಷಕರು ಹಾಜರಿದ್ದರು.

Share This Article