ಬೆಂಗಳೂರು: ಕಳೆದ 15 ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿದ್ದ ಶಾಸಜ ಚಂದ್ರು ಲಮಾಣಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ನಾಲ್ಕು ಗೋಡೆಗಳ ಮಧ್ಯೆ ಇದ್ದ ಚಂದ್ರು ಲಮಾಣಿ ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಐದು ಲಕ್ಷ ಲಂಚ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಈ ಸಂಬಂಧ ಜೈಲು ಸೇರಿದ್ದರು. ಇಂದು ಜನಪ್ರತಿನಿಧಿಗಳ ನ್ಯಾಯಾಲಯವೂ ಷರತ್ತು ಬದ್ಧ ಜಾಮೀನು ನೀಡಿದೆ.
ಎರಡು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನು ಪಡೆದು ಜಾಮೀನನ್ನ ನೀಡಿದೆ. ರಸ್ತೆ ಬದಿ ತಡೆಗೋಡೆ ನಿರ್ಮಾಣ ಸಂಬಂಧ 1 ಕೋಟಿ ಮೊತ್ತದ ಕಾಮಗಾರಿಗೆ ಶಾಸಕ ಚಂದ್ರು ಲಮಾಣಿ ಕ್ಲಾಸ್-1 ಗುತ್ತಿಗೆದಾರ ವಿಜಯ ಪೂಜಾರ ಎನ್ನುವವರ ಬಳಿ 11 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಇದರ ಮೊದಲ ಹಂತದ ಹಣವಾಗಿ 5 ಲಕ್ಷ ರೂ. ಪಡೆಯುವಾಗಲೇ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಶಾಸಕರು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು.
ಈ ಕೇಸ್ ಬಿಜೆಪಿ ನಾಯಕರಿಗೆ ಮುಜುಗರವನ್ನುಂಟು ಮಾಡಿತ್ತು. ಯಾಕಂದ್ರೆ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಸಣ್ಣ ಕಾರಣ ಸಿಕ್ಕಿದ್ರು ಸಿಲುಕಿಸುವ ಪ್ರಯತ್ನ ಮಾಡ್ತಿರುವ ಬಿಜೆಪಿಗರಿಗೆ ತಮ್ಮದೆರ ಪಕ್ಷದ ಶಾಸಕ ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು, ಎದುರಾಳಿಯ ಬಗ್ಗೆ ಮಾತನ್ನಾಡುವುದಕ್ಕೆ ಕಷ್ಟವಾಗಿತ್ತು. ಹೀಗಾಗಿ ಬಿಜೆಪಿ ನಾಯಕರು ಸಹ ಈ ಘಟನೆಗೆ ವಿರೋಧಿಸಿದ್ದರು. ಇದೀಗ ಚಂದ್ರು ಲಮಾಣಿಗೆ ಜಾಮೀನು ಸಿಕ್ಕಿದ್ದು, ಬಿಜೆಪಿ ಶಿಸ್ತು ಸಮಿತಿ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತೆ ಎಂಬುದನ್ನ ನೋಡಬೇಕಿದೆ.






