ಬೆಂಗಳೂರು, ಜನವರಿ. 20 : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು
ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಬೆಂಗಳೂರಿನ ಲೋಕಭವನದ ರಾಜ್ಯ ಪಾಲರ ಕಚೇರಿಗೆ ಭೇಟಿ ನೀಡಿದ ನಿಯೋಗ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿತು.
ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಯಲ್ಲಿ ಉಪವರ್ಗೀಕರಣ ಮಾಡಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುತ್ತದೆ ಎಂದು ತೀರ್ಪು ನೀಡಿದೆ. ಮತ್ತು ಒಳ ಮೀಸಲಾತಿ ಕಲ್ಪಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ತನ್ನ ಆದೇಶದಲ್ಲಿ ಹೇಳಿರುತ್ತದೆ. ಆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರವು ನಿರ್ಧರಿಸಿ. ನ್ಯಾಯಮೂರ್ತಿ ಶ್ರೀ. ಎಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವನ್ನು ರಚಿಸಿ ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ವರದಿಯನ್ನು ಪಡೆದು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ ಆಯೋಗದ ವರದಿಯ ಶಿಫಾರಸುಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಿ ದಿನಾಂಕ 25.08.2025 ರಂದು ಸರ್ಕಾರಿ ಆದೇಶದ ಮೂಲಕ ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಮೂರು ಗುಂಪುಗಳನ್ನಾಗಿ ಉಪವರ್ಗೀಕರಿಸಿ 6;6;5ರ ಅನುಪಾತದಲ್ಲಿ ಶೇ.17ರಷ್ಟಿರುವ ಮೀಸಲಾತಿಯನ್ನು ಹಂಚಿಕೆ ಮಾಡಿರುತ್ತದೆ. ಸಮೀಕ್ಷೆ ನಡೆಸಿದ ಆಯೋಗವು ನಿಖರವಾದ ಮತ್ತು ವಾಸ್ತವಿಕ ನೆಲೆಗಟ್ಟಿನಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಲು ವಿಫಲವಾಗಿದ್ದರೂ ಸಹ ಆ ವರದಿಯನ್ನು ಒಪ್ಪಿಕೊಂಡು ಒಳ ಮೀಸಲಾತಿ ಜಾರಿಗೊಳಿಸಿರುತ್ತದೆ.
ಹಾಗೆಯೇ, ಮೂರನೇ ಗುಂಪು ಅಥವಾ “ಪ್ರವರ್ಗ-ಸಿ” ಗುಂಪಿನಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳು ಸೇರಿದಂತೆ ಒಟ್ಟು 63 ಜಾತಿಗಳು ಬರುತ್ತವೆ. ಅಷ್ಟು ಜಾತಿಗಳನ್ನು ಒಂದೇ ಗುಂಪಿಗೆ ಸೇರಿಸಿದ್ದರೂ ಕೇವಲ ಶೇ 5ರಷ್ಟು ಒಳಮೀಸಲಾತಿಯನ್ನು ಮಾತ್ರ ನಿಗದಿಗೊಳಿಸಲಾಗಿರುತ್ತದೆ. ಆದರೆ ಈ ಮೇಲಿನಂತೆ ಉಪವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡುವಾಗ ಈ ಸಮುದಾಯಗಳ ಜನಸಂಖ್ಯೆ ಶೈಕ್ಷಣಿಕ, ಸಾಮಾಜಿಕ, ಹಿಂದುಳಿದಿರುವಿಕೆಯನ್ನು ಮಾನದಂಡವಾಗಿಟ್ಟುಕೊಂಡಿರುವುದಿಲ್ಲ ಹೀಗಾಗಿ ಈ ಸಮುದಾಯಗಳಿಗೆ ಕಡಿಮೆ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ. ಮತ್ತು ವಾಸ್ತವಿಕ ದತ್ತಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ.
ಈಗಾಗಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಶೇಕಡ 15 ರಿಂದ 17 ಕ್ಕೆ ಹೆಚ್ಚಿಸಲಾಗಿತ್ತು. ಇದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿಲ್ಲ. ಹಾಗಾಗಿ ಈಗಾಗಲೇ ಕರ್ನಾಟಕ
ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ತರಾತುರಿಯಲ್ಲಿ ಪರಿಶಿಷ್ಟ ಜಾತಿಗಳ ಅಸಂವಿಧಾನಿಕ ವರ್ಗೀಕರಣ ಅನಗತ್ಯ.
ಹೀಗಿರುವಾಗ್ಗೆ, ರಾಜ್ಯ ಸರ್ಕಾರವು ಸರ್ಕಾರಿ ಆದೇಶಕ್ಕೆ ಕಾನೂನಿನ ರೂಪ ನೀಡುವ ಉದ್ದೇಶದಿಂದ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ “ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025″ ಎಂಬ ಹೆಸರಿನಲ್ಲಿ ಒಳ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿ ತಮ್ಮ ಅಂಕಿತಕ್ಕೆ ಕಳುಹಿಸಲಾಗಿದೆ. ಮಸೂದೆಯಲ್ಲಿ ಪ್ರರ್ಗ-ಸಿ” ಗುಂಪಿನಲ್ಲಿ ಇದ್ದ 63 ಜಾತಿಗಳ ಪೈಕಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಹೊರತು ಪಡಿಸಿ 59 ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ಐದು ಹುದ್ದೆಯಲ್ಲಿ ಒಂದು ಹುದ್ದೆ ಮೀಸಲು ಇಡಲು ನಿರ್ಧರಿಸಲಾಗಿದೆ. ಆದರೆ ಅದಕ್ಕೆ ಅನುಸರಿಸಿದ ಮಾನದಂಡವೇನು ಎಂಬುದನ್ನು ಸ್ಪಷ್ಟ ಪಡಿಸಿರುವುದಿಲ್ಲ. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಒಳಮೀಸಲಾತಿ ಆದೇಶದ ನಂತರ ಹೊರಡಿಸಲಾದ ರೋಸ್ಟರ್ ಆದೇಶ ಅನುಗುಣವಾಗಿರುವುದಿಲ್ಲ. ಇದರಿಂದ ರೋಸ್ಟರ್ ಬಿಂದುಗಳನ್ನು ಅನುಸರಿಸುವಾಗ ಅನೇಕ ಗೊಂದಲಗಳು ಉಂಟಾಗುತ್ತವೆ. ಮತ್ತು ಮೀಸಲಾತಿ ಮೂರೂ ಗುಂಪುಗಳಿಗೆ ಸಮಾನವಾಗಿ, ಸಮರ್ಪಕ ಹಂಚಿಕೆಯಾಗುವುದಿಲ್ಲ.
ಈ ಎಲ್ಲ ಅಂಶಗಳನ್ನು ನೋಡಿದಾಗ. ಆಯೋಗದ ವರದಿಯು ಅಪೂರ್ಣ ದತ್ತಾಂಶಗಳಿಂದ ಕೂಡಿದ್ದರೂ ಸಹ ಅದರ ವರದಿಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರವು ಮಾರ್ಪಾಡಿನ ಹೆಸರಿನಲ್ಲಿ ತನಗೆ ಬೇಕಾದಂತೆ ಪರಿಶಿಷ್ಟ ಜಾತಿಗಳಲ್ಲಿ ಪ್ರವರ್ಗಗಳನ್ನು ಮಾಡಿ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಹಂಚಿ ಒಳಮೀಸಲಾತಿ ಪಾಲನೆಯಲ್ಲಿ ಅನುಸರಿಸಬೇಕಾದ ಯಾವ ಮಾನದಂಡಗಳನ್ನು ಅನುಸರಿಸದೆ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಸರ್ಕಾರಿ ಆದೇಶದ ಮೂಲಕ ಒಳ ಮೀಸಲಾತಿ ಜಾರಿಗೊಳಿಸಿ ಈಗ ಕಾನೂನು ರೂಪ ನೀಡಲು ಹೊರಟಿರುವುದಕ್ಕೆ ನಮ್ಮ ಸಮುದಾಯಗಳ ವಿರೋಧವಿರುತ್ತದೆ. ಅಸಂವಿಧಾನಿಕವಾದ ರೀತಿಯಲ್ಲಿ ಒಳಮೀಸಲಾತಿ ಕಾನೂನು ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವಲ್ಲ. ಇದನ್ನು ಸರಿಪಡಿಸುವ ಮೂಲಕ ಸಂವಿಧಾನವನ್ನು ಕಾಪಾಡಬೇಕೇಂದು ಘನತೆವೆತ್ತ ತಮ್ಮಲ್ಲಿ ನಿವೇದಿಸಿಕೊಳ್ಳುತ್ತಾ ಈ ಕೆಳಕಂಡ ಹಕ್ಕೊತ್ತಾಯಗಳನ್ನು ತಮ್ಮ ಮುಂದೆ ಮಂಡಿಸುತ್ತಿದ್ದೇವೆ.
ಹಕ್ಕೊತ್ತಾಯಗಳು:
1. “ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025ರ ಪ್ರಕಾರ “ಪ್ರರ್ಗ-ಸಿ” ಗುಂಪಿನಲ್ಲಿ ಇರುವ 63 ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 6ಕ್ಕೆ ಹೆಚ್ಚಿಸಬೇಕು. ಅಲೆಮಾರಿ. ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇಕಡಾ 1 ಮೀಸಲಾತಿ ಒದಗಿಸಬೇಕು. ಪ್ರವರ್ಗ-ಸಿ ಗುಂಪಿನ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲೇ ಸಾಮಾಜಿಕ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಗುಂಪು ಎಂಬುದು ನ್ಯಾಯಮೂರ್ತಿ ಎಚ್.ಎನ್.ನಾಗಮೋನ್ ದಾಸ್ ಆಯೋಗದ ವರದಿಯ ಅಂಕಿ ಅಂಶಗಳು ಅಧ್ಯಯನ ಮಾಡಿದಾಗ ತಿಳಿದುಬರುತ್ತದೆ. ಹೀಗಾಗಿ ಪ್ರವರ್ಗ-ಸಿ ಗುಂಪನ್ನು ಬದಲಾಯಿಸಿ ಪ್ರವರ್ಗ-1 ಎಂದು ಮರು ಸಂಯೋಜನೆ ಮಾಡಲು ಕೋರಿದೆ. ಆ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಮೀಸಲಾತಿ ಪ್ರಮಾಣ ವನ್ನು ಕನಿಷ್ಠ ಶೇಕಡಾ 18ಕ್ಕೆ ಹೆಚ್ಚಿಸಬೇಕು.
2. ಮೀಸಲಾತಿ ಮಿತಿಯು ಶೇಕಡಾ 50ಕ್ಕೆ ಮೀರಬಾರದು ಎಂಬ ಸರ್ವೊಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಉಚ್ಚನ್ಯಾಯಾಲಯದಲ್ಲಿ ಈಗಾಲೇ ಪ್ರಶ್ನಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈಗಾಗಲೇ ಶೇಕಡಾ 17ಕ್ಕೆ ಹೆಚ್ಚಿಸಿರುವ ಮೀಸಲಾತಿ ಪ್ರಮಾಣವನ್ನು ಕಾರ್ಯಕಾರಿ ಆದೇಶದ ಮೂಲಕ ಶೇಕಡಾ. 18ಕ್ಕೆ ವಿಸ್ತರಿಸಬೇಕು. ಈ ಮತ್ತು ಮುಂದೆ ಹೆಚ್ಚಿಸಲಿರುವ ಮೀಸಲಾತಿ ಕಾರ್ಯಕಾರಿ ಆದೇಶವನ್ನು ಭಾರತದ ಸಂವಿಧಾನದ ಒಂಭತ್ತನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು
3. ರಾಜ್ಯ ಸರ್ಕಾರ ದಿನಾಂಕ: 03.09.2025ರಂದು ಹೊರಡಿಸಿರುವ ಸರ್ಕಾರಿ ಆದೇಶ ಸಂಖ್ಯೆ:
ಸಿಆಸುಇ 02 ಸೆಹಿಮ 2025, ಆದೇಶದಲ್ಲಿ ವಿವಿಧ ಬಿಂದುಗಳಲ್ಲಿ ನಿಗಧಿಪಡಿಸಲಾಗಿದೆ. ನೇಮಕಾತಿ ರೋಸ್ಟರ್ ಬಿಂದು ನಿಗದಿ ಆದೇಶದ ದೋಷದಿಂದಾಗಿ ಇತ್ತೀಚೆಗೆ ನಡೆದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯಲ್ಲಿ ‘ಪ್ರರ್ಗ-ಬಿ’ ಮತ್ತು ‘ಪ್ರರ್ಗ-ಸಿ’ ಗುಂಪಿಗೆ ಹುದ್ದೆಗಳು/ಸೀಟುಗಳು ಸಿಗದೆ ಅನ್ಯಾಯ ಆಗಿದೆ. ತಕ್ಷಣ ಈ ಆದೇಶವನ್ನು ವಾಪಸು ಪಡೆಯಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹೊಸ ನಿಯಮ ರೂಪಿಸಬೇಕು. ಅಲ್ಲಿಯವರೆಗೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಹಳೆಯ ನಿಯಮಗಳಂತೆ ಮುಂದುವರೆಸಬೇಕು
4. ಎಸ್.ಸಿ.ಪಿ, ಟಿ.ಎಸ್.ಪಿ, ಯೋಜನೆಯ 24 ಶೇಕಡ ಅನುದಾನ ಹಂಚಿಕೆಯ ನಿಯಮದಂತೆ ಈ ಪ್ರವರ್ಗ ಸಿ ಗುಂಪಿಗೆ ಒಟ್ಟು ಹಣದ ಕನಿಷ್ಠ ಶೇಕಡ 6 ರಷ್ಟನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ನಿಯೋಗವು ಒತ್ತಾಯಿಸಿತು.
ಈ ನಿಯೋಗದಲ್ಲಿ
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,
ಉಪ ಸಭಾಪತಿ ರುದ್ರಪ್ಪ ಲಮಾಣಿ,
ಮಾಜಿ ಸಚಿವರಾದ
ಅರವಿಂದ ಲಿಂಬಾವಳಿ,
ಮಾಜಿ ಸಂಸದರಾದ ಜನಾರ್ಧನ ಸ್ವಾಮಿ,
ಮಾಜಿ ಸಚಿವರಾದ ಡಾ ಬಿ ಟಿ ಲಲಿತಾನಾಯ್ಕ,
ಮಾಜಿ ಶಾಸಕರಾದ ಭೀಮನಾಯ್ಕ,
ಬಸವರಾಜ್ ನಾಯ್ಕ, ಜಲಜಾನಾಯ್ಕ,
ನಿವೃತ್ತ IAS ಅಧಿಕಾರಿ ಮಂಜುನಾಥ ಪ್ರಸಾದ್,
ರವಿ ಮಾಕಳಿ
OCCI ರಾಷ್ಟ್ರೀಯ ಅಧ್ಯಕ್ಷ,
ಅನಂತನಾಯ್ಕ ಎನ್,
ಜಯದೇವ ನಾಯ್ಕ,
ಬಾಲರಾಜ್ ನಾಯ್ಕ ,
ಶ್ರೀ ಶಂಕರಪ್ಪ
ಹಿರಿಯ ವಕೀಲರು ಭಾಗವಹಿಸಿದ್ದರು.


