ಸುದ್ದಿಒನ್, ಚಿತ್ರದುರ್ಗ.ಜ.19: ರಸ್ತೆ ಅಗಲೀಕರಣದ ನೆಪದಲ್ಲಿ ಸಮೀಪದ ಕವಾಡಿಗರಹಟ್ಟಿಯ ದಲಿತರ ಕಾಲೋನಿಯ ಮನೆಗಳನ್ನು ದ್ವಂಸ ಮಾಡಲಾಗಿದ್ದು, ನಿರಾಶ್ರಿತ ದಲಿತರು ಪರಿಹಾರಕ್ಕಾಗಿ ಸರ್ಕರವನ್ನು ಆಗ್ರಹಿಸಿದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಅವರು ಭೇಟಿನೀಡಿ, ಕವಾಡಿಗರಹಟ್ಟಿ ದಲಿತರ ಸಮಸ್ಯೆ ಸವಾಲು ಮತ್ತು ಮನೆಗಳು ದ್ವಂಸವಾಗಿರುವುದನ್ನು ವೀಕ್ಷಣೆಮಾಡಿ ಸಮಸ್ಯೆಗಳನ್ನು ಆಲಿಸಿದರು.
ಕವಾಡಿಗರಹಟ್ಟಿಯ ದಲಿತರ ಸಮಸ್ಯೆಗಳನ್ನು ಸವಿವರವಾಗಿ ಮಾಹಿತಿ ನೀಡಿದ ದಲಿತ ಮುಖಂಡ ಬಾಳೇಕಾಯಿ ಶ್ರೀನಿವಾಸ ಅವರು, ರಸ್ತೆ ಅಗಲೀಕರಣದ ನೆಪದಲ್ಲಿ ಕವಾಡಿಗರಹಟ್ಟಿಯಲ್ಲಿರುವ ದಲಿತರ ಮನೆಗಳನ್ನು ಅಷ್ಟೋ ಇಷ್ಟೋ ಪರಿಹಾರ ನೀಡಿ ಮನೆಗಳನ್ನು ದ್ವಂಸಮಾಡಲಾಗಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಗಳು ಮಕ್ಕಳು ಮಹಿಳೆಯರು ಸೇರಿದಂತೆ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ-13 ನ್ನು ವಿಸ್ತೀರ್ಣಗೊಳಿಸುವ ಉದ್ದೇಶದಿಂದ ಅಗಲೀಕರಣಕ್ಕೆ ಮುಂದಾಗಿರುವ ಅಧಿಕಾರಿಗಳು, ದಲಿತರ ಕುಟುಂಬಗಳಿಗೆ ಒಂದಿಷ್ಟು ಪರಿಹಾರ ನೀಡಿ, ಏಕಾಏಕಿಯಾಗಿ ಮನೆಗಳನ್ನು ದ್ವಂಸಗೊಳಿಸಿ, ಕವಾಡಿಗರಹಟ್ಟಿ ದಲಿತ ಕಾಲೋನಿಯ ಜನರು ಬೀದಿಗೆ ಬರುವಂತೆ ಮಾಡಿದ್ದಾರೆ.
ಸರ್ಕಾರದ ಗಮನ ಸೆಳೆಯಲು ಈಗಾಗಲೇ ನಾಲ್ಕೈದುಬಾರಿ ಪ್ರತಿಭಟನೆಗಳನ್ನು ನಡೆಸಲಾಗಿದ್ದು, ಸ್ವಯಂ ಆಗಿ ಕಾಂಗ್ರೇಸ್‍ಗೆ ಮತದಾನ ಮಾಡಿದ ತಪ್ಪಿಗಾಗಿ ನಮ್ಮ ಚಪ್ಪಲಿಗಳಿಂದ ನಾವೇ ಹೊಡೆದುಕೊಂಡಿದ್ದು, ನಮ್ಮ ಸಂಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಅಂದುಕೊಳ್ಳುವ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ನಮ್ಮ ಸಮಸ್ಯೆ ಆಲಿಸುವಂತೆ, ಮನವಿ ಮಾಡಿಕೊಳ್ಳಲಾಗಿತ್ತು. ಆದಾಗ್ಯೂ ಯಾವುದೇ ಪ್ರಯೋಜನವಾಗಿರಲಿಲ್ಲ. ಒಂದು ವಾರದ ನಂತರ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪರವರು ದಲಿತ ಜನರ ಭವಣೆಯನ್ನು ಕೇಳಲು ಗ್ರಾಮಕ್ಕೆ ಭೇಟಿ ನೀಡಿದ್ದು, ನಿರಾಶ್ರಿತ ದಲಿತ ಕುಟುಂಬಗಳಿಗೆ ಪರಿಹಾರ ನೀಡುವಂತೆ, ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು.
ಮಹಿಳೆಯರು ಮತ್ತು ಮಕ್ಕಳು ಭೀಕರವಾದ ಚಳಿಗಾಲದಲ್ಲಿ ಸಣ್ಣಪುಟ್ಟ ಗುಡಿಸಲಿನಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಯಾವುದೇ ಕಾರಣಕ್ಕೂ ಕವಾಡಿಗರಹಟ್ಟಿಯ ದಲಿತರಿಗೆ ಪರ್ಯಾಯವಾಗಿ ನಿವೇಶನ, ನಿರುದ್ಯೋಗಿಗಳಿಗೆ ಉದ್ಯೋಗ, ಮಕ್ಕಳಿಗೆ ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯ ನಾಗರೀಕ ಸೌಲಭ್ಯಗಳನ್ನು ಸರ್ಕಾರ ವ್ಯವಸ್ಥೆ ಮಾಡಿಕೊಡಬೇಕೆಂದು ಸಮಾಜ ಕಲ್ಯಾಣ ಇಲಾಖೆಗೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಕವಾಡಿಗರಹಟ್ಟಿ ಗ್ರಾಮದ ಮಹಿಳೆಯರು ಮಾತನಾಡಿ, ನಿವೇಶನ ಸೇರಿದಂತೆ, ನಾಗರೀಕ ಮೂಲಭೂತ ಸೌಲಭ್ಯ ಕಲ್ಪಿಸದೇ ಹೋದರೆ ಯಾವುದೇ ಕಾರಣಕ್ಕೂ ಕವಾಡಿಗರಹಟ್ಟಿಯನ್ನು ತೆರವುಮಾಡುವುದಿಲ್ಲ ಎಂದು ಒಕ್ಕರಳಿನಿಂದ ಪರಮೇಶ್ವರಪ್ಪ ಅವರ ಬಳಿ ಮನವಿ ಮಾಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿನೀಡಿದ ಸಂದರ್ಭದಲ್ಲಿ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್, ಕಣುಮಪ್ಪ, ಪ್ರಸಾದ್, ಹನುಮಂತಪ್ಪ, ಸ್ವಾಮಿ, ಮಂಜುನಾಥ್, ಮುಂತಾದ ಕವಾಡಿಗರಹಟ್ಟಿ ಮುಖಂಡರು ಇದೇ ಸಂದರ್ಭದಲ್ಲಿ ಹಾಜರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







