ಸುದ್ದಿಒನ್
ಭಾರತದಲ್ಲಿ ಹೂಡಿಕೆ ಮಾಡುವ ವಿಚಾರವಾಗಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರು ಮಂಗಳವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ತಮ್ಮ ಕಂಪನಿಯು ಭಾರತದಲ್ಲಿ $17.5 ಬಿಲಿಯನ್ (ನಮ್ಮ ಕರೆನ್ಸಿಯಲ್ಲಿ ಸುಮಾರು ರೂ. 1.5 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಏಷ್ಯಾದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆಯಾಗಿದೆ. AI- ಫಸ್ಟ್ ಗೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ಮೂಲಸೌಕರ್ಯ, ಕೌಶಲ್ಯ ಮತ್ತು ಇತರೆ ಸೌಲಭ್ಯಗಳನ್ನು ನಿರ್ಮಿಸಲು ಭಾರತಕ್ಕೆ ಸಹಾಯ ಮಾಡಲು ಈ ಹೂಡಿಕೆಯನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಿರುವ ನಾದೆಲ್ಲಾ, ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ದೇಶದ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುವ ಸಲುವಾಗಿ, ಭಾರತದ AI-ಫಸ್ಟ್ ಭವಿಷ್ಯಕ್ಕೆ ಅಗತ್ಯವಾದ ಮೂಲಸೌಕರ್ಯ ಮತ್ತು ಕೌಶಲ್ಯಗಳನ್ನು ನಿರ್ಮಿಸಲು ಮೈಕ್ರೋಸಾಫ್ಟ್ $17.5 ಬಿಲಿಯನ್ ಹೂಡಿಕೆ ಮಾಡುತ್ತಿದೆ ಎಂದು ಅವರು ಹೇಳಿದರು. ಇದು ಏಷ್ಯಾದಲ್ಲಿಯೇ ಅತಿದೊಡ್ಡ ಹೂಡಿಕೆಯಾಗಿದೆ ಎಂದು ಅವರು ಹೇಳಿದರು. ಈ ವರ್ಷದ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಕ್ಲೌಡ್, AI ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಭಾರತದಲ್ಲಿ $3 ಬಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ನಾಡೆಲ್ಲಾ ಘೋಷಿಸಿದ್ದರು. ಇದರಲ್ಲಿ ಹೊಸ ಡೇಟಾ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದೆ.
ಈ ಹೂಡಿಕೆಯು ಭಾರತದಲ್ಲಿ AI ನಾವೀನ್ಯತೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರ (ವಿಕಸಿತ್ ಭಾರತ) ಆಗಬೇಕೆಂಬ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಧಿಸಲು ಇದು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ತನ್ನ ಅಡ್ವಾಂಟಾ(I)GE ಇಂಡಿಯಾ ಕಾರ್ಯಕ್ರಮದ ಎರಡನೇ ಆವೃತ್ತಿಯ ಭಾಗವಾಗಿ, ಮುಂದಿನ ಐದು ವರ್ಷಗಳಲ್ಲಿ 10 ಮಿಲಿಯನ್ ಜನರಿಗೆ AI ಕೌಶಲ್ಯಗಳೊಂದಿಗೆ ತರಬೇತಿ ನೀಡುವ ಮೂಲಕ ದೇಶದ ದೀರ್ಘಕಾಲೀನ ಸ್ಪರ್ಧಾತ್ಮಕತೆಯನ್ನು ಬೆಂಬಲಿಸುತ್ತದೆ ಎಂದು ಕಂಪನಿ ಘೋಷಿಸಿದೆ.

