Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೋಲಿಗೆ ಸೆಡ್ಡು ಹೊಡೆದು ಸಮಾಜದ ಬೆನ್ನೆಲುಬಾದ ಕೋಟೆನಾಡಿನ ಹೆಮ್ಮೆಯ ಪುತ್ರ ಕಾರ್ತಿಕ್’!

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್‌. 30 : ಚಿತ್ರದುರ್ಗ ಎಂದರೆ ನೆನಪಾಗುವುದು ಕಲ್ಲಿನ ಕೋಟೆ, ಓಬವ್ವನ ಶೌರ್ಯ. ಆದರೆ ಇಂದಿನ ಆಧುನಿಕ ಯುಗದಲ್ಲಿ ಇದೇ ಮಣ್ಣಿನಿಂದ ಮೂಡಿಬಂದ ಮತ್ತೊಂದು ವಿಶಿಷ್ಟ ಹೆಸರು ಕಾರ್ತಿಕ್ ಎಂ. ಕೇವಲ ಶೈಕ್ಷಣಿಕ ಅಂಕಪಟ್ಟಿಗಳು ಒಬ್ಬ ಮನುಷ್ಯನ ಭವಿಷ್ಯವನ್ನು ಬರೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇವರೇ ಜೀವಂತ ಸಾಕ್ಷಿ. ಪಿಯುಸಿ ಪರೀಕ್ಷೆಯಲ್ಲಿ ಎದುರಾದ ಹಿನ್ನಡೆಯನ್ನು ಮೆಟ್ಟಿ ನಿಂತು, ಇಂದು ಉದ್ಯಮ, ಪರಿಸರ, ಕಲೆ ಹಾಗೂ ಸಮಾಜ ಸೇವೆಯಲ್ಲಿ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಕಾರ್ತಿಕ್ ಅವರ ಯಶೋಗಾಥೆ ಪ್ರತಿಯೊಬ್ಬ ಯುವಕನಿಗೂ ದಾರಿದೀಪವಾಗಿದೆ.

ಕೌಟುಂಬಿಕ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಆದರ್ಶ ಪುತ್ರ
1978 ರ ನವೆಂಬರ್ 14 ರಂದು ಚಿತ್ರದುರ್ಗದ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಕಾರ್ತಿಕ್ ಅವರಿಗೆ ತಾಯಿ ಸೀತಾಲಕ್ಷ್ಮಿ ಅವರ ಸಂಸ್ಕಾರ ಹಾಗೂ ತಂದೆ ಮಂಜುನಾಥ್ ಅವರ ಶ್ರಮದ ಬದುಕು ಆದರ್ಶವಾಯಿತು. ಬರೋಬ್ಬರಿ 16 ಜನರಿದ್ದ ಜಂಟಿ ಕುಟುಂಬವನ್ನು ಮುನ್ನಡೆಸಲು ತಂದೆ ಪಡುತ್ತಿದ್ದ ಕಷ್ಟವನ್ನು ಕಣ್ಣಾರೆ ಕಂಡ ಕಾರ್ತಿಕ್, ತಾವೂ ಉದ್ಯಮಕ್ಕೆ ಇಳಿದು ತಂದೆಯ ಮೇಲಿದ್ದ ಕೌಟುಂಬಿಕ ಜವಾಬ್ದಾರಿಯ ಸಂಪೂರ್ಣ ಹೊರೆಯನ್ನು ಪ್ರೀತಿಯಿಂದ ತಮ್ಮ ಹೆಗಲಿಗೆ ತೆಗೆದುಕೊಂಡರು. ಇವರ ಈ ಸುದೀರ್ಘ ಸಾಧನೆಯ ಪಯಣಕ್ಕೆ ಪತ್ನಿ ಡಾ. ಶ್ವೇತಾ (ಅಕ್ಯುಪಂಕ್ಚರ್ ವೈದ್ಯರು) ಹಾಗೂ ಪುತ್ರ ಪ್ರಥಮ್ (ಎಂಜಿನಿಯರಿಂಗ್ ವಿದ್ಯಾರ್ಥಿ) ಗಟ್ಟಿ ಆಸರೆಯಾಗಿ ನಿಂತಿದ್ದಾರೆ.

ಶೈಕ್ಷಣಿಕ ಸೋಲಿಗೆ ಸೆಡ್ಡು ಹೊಡೆದ ಮುದ್ರಣ ಲೋಕದ ಚತುರ
ಶಾಲಾ ದಿನಗಳ ನಂತರ ಪಿಯುಸಿಯಲ್ಲಿ ಅನುತ್ತೀರ್ಣರಾದಾಗ ಕಾರ್ತಿಕ್ ಧೃತಿಗೆಡಲಿಲ್ಲ. ಭವಿಷ್ಯದ ತಂತ್ರಜ್ಞಾನದ ಅರಿವಿದ್ದ ಅವರು ತಕ್ಷಣವೇ ADDTP ಕೋರ್ಸ್ ಮುಗಿಸಿದರು. 1947 ರಲ್ಲೇ ಇವರ ಅಜ್ಜ ಎ.ಆರ್. ಕೃಷ್ಣಸ್ವಾಮಿ ಶೆಟ್ಟಿ ಅವರು ಆರಂಭಿಸಿದ್ದ ‘ವಿನಾಯಕ ಪ್ರಿಂಟಿಂಗ್ ಪ್ರೆಸ್’ ಉದ್ಯಮಕ್ಕೆ 1997 ರಲ್ಲಿ ಕಾರ್ತಿಕ್ ಅಧಿಕೃತವಾಗಿ ಕಾಲಿಟ್ಟರು. ಮುದ್ರಣ ಲೋಕದ ನಾವೀನ್ಯತೆಗಾಗಿ ತಮಿಳುನಾಡಿನ ಶಿವಕಾಶಿಗೆ ತೆರಳಿ ಆಫ್ಸೆಟ್ ತಂತ್ರಜ್ಞಾನ ಕಲಿತು ಬಂದ ಇವರು, ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಬಾರಿಗೆ ಆಫ್ಸೆಟ್ ಪ್ರಿಂಟಿಂಗ್ ಪರಿಚಯಿಸಿದರು.

ಬಳಿಕ 2006 ರಲ್ಲಿ ‘ವಿನಾಯಕ ಡಿಜಿಟಲ್ ಪ್ಲಾನೆಟ್’ ಸ್ಥಾಪಿಸಿ ಹೈಟೆಕ್ ಮುದ್ರಣ, ಕಲಾತ್ಮಕ ಟ್ರೋಫಿಗಳ ವಿನ್ಯಾಸದಲ್ಲಿ ಕ್ರಾಂತಿ ಮಾಡಿದರು. ಇವರ ಈ ಅದ್ಭುತ ಸೃಜನಶೀಲತೆಯನ್ನು ಕಂಡು ಸಾರ್ವಜನಿಕರೇ ಇವರಿಗೆ “ಕ್ರಿಯೇಟಿವ್ ಕಾರ್ತಿಕ್” ಎಂದು ಬಿರುದು ನೀಡಿದರು.

ಕಾಡಿನ ಮಡಲಲ್ಲಿ ದಶಕದ ತಪಸ್ಸು: “ಚಿತ್ರದುರ್ಗದ ಸಲೀಂ ಅಲಿ”
ವನ್ಯಜೀವಿ ಮತ್ತು ಪಕ್ಷಿ ಛಾಯಾಗ್ರಹಣದಲ್ಲಿ ಕಾರ್ತಿಕ್ ಅವರದ್ದು ಅಪ್ರತಿಮ ಸಾಧನೆ. ಸತತ ಹತ್ತು ವರ್ಷಗಳ ಕಾಲ ಕಾಡು-ಮೇಡು ಅಲೆದು ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲಿನ 200 ಕ್ಕೂ ಹೆಚ್ಚು ಅಪರೂಪದ ಹಕ್ಕಿಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಿದ ಇವರು, “Birds of Chitradurga” ಎಂಬ ಜಿಲ್ಲೆಯ ಏಕೈಕ ಸಂಶೋಧನಾ ಗ್ರಂಥವನ್ನು ಹೊರತಂದರು. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ 500 ಕ್ಕೂ ಹೆಚ್ಚು ಅಪರೂಪದ ವನ್ಯಜೀವಿಗಳ ಹೈ-ರೆಸಲ್ಯೂಷನ್ ಚಿತ್ರಗಳ ಪ್ರದರ್ಶನ ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಇವರ ಪರಿಸರ ಪ್ರೇಮವನ್ನು ಗೌರವಿಸಿ ಜನತೆ ಇವರನ್ನು ‘ಪಕ್ಷಿ ರಾಜ’, ‘ಪಕ್ಷಿ ಪ್ರೇಮಿ’ ಹಾಗೂ ‘ಚಿತ್ರದುರ್ಗದ ಸಲೀಂ ಅಲಿ’ ಎಂದು ಕರೆದರೆ, ಕರ್ನಾಟಕ ಸರ್ಕಾರ ಇವರನ್ನು ಜಿಲ್ಲೆಯ ಗೌರವಾನ್ವಿತ ವನ್ಯಜೀವಿ ಪಾಲಕರನ್ನಾಗಿ (Honorary Wildlife Warden) ನೇಮಿಸಿ ಗೌರವಿಸಿತು.

70 ಬಾರಿ ರಕ್ತದಾನ ಮಾಡಿದ ಜೀವದಾತ :
ಕಾರ್ತಿಕ್ ಅವರು ಕೇವಲ ಪ್ರಕೃತಿ ಪ್ರೇಮಿಯಷ್ಟೇ ಅಲ್ಲ, ನೊಂದವರ ಪಾಲಿನ ಸಂಜೀವಿನಿ. ಸ್ವತಃ 70 ಬಾರಿ ರಕ್ತದಾನ ಮಾಡಿರುವ ಇವರು, ಬರೋಬ್ಬರಿ 3000 ಕ್ಕೂ ಹೆಚ್ಚು ಜನರಿಗೆ ತುರ್ತು ರಕ್ತದ ಅಗತ್ಯವನ್ನು ಪೂರೈಸಿ ಜೀವ ಉಳಿಸಿದ್ದಾರೆ.
ಇಷ್ಟೇ ಅಲ್ಲದೆ, ಸಂಗೀತ ಲೋಕದಲ್ಲೂ ತಮ್ಮ ಛಾಪು ಮೂಡಿಸಿರುವ ಕಾರ್ತಿಕ್, ದೂರದರ್ಶನದ ‘ಮಧುರ ಮಧುರವೇ ಮಂಜುಳ ಗಾನ’ ಮತ್ತು ‘ಆಯುಷ್ ಮ್ಯೂಸಿಕ್’ ವಾಹಿನಿಗಳಲ್ಲಿ ಗಾಯಕರಾಗಿ ಭಾಗವಹಿಸಿ ನಾಡಿನಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ.

ನಿಸ್ವಾರ್ಥ ಸಮಾಜ ಸೇವೆ ಮತ್ತು ಕೋವಿಡ್ ಹೀರೊ
ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ನೂರಾರು ಬಡ ಮಕ್ಕಳಿಗೆ ಶಾಲಾ ಶುಲ್ಕ, ಪುಸ್ತಕ ಹಾಗೂ ಸಮಸ್ತ್ರ ವಿತರಣೆ. ಕಳೆದ 12 ವರ್ಷಗಳಿಂದ ‘ವಿಶ್ವ ಗುಬ್ಬಚ್ಚಿ ದಿನ’ದಂದು ಬೇಸಿಗೆಯ ಬಿಸಿಲಿನಿಂದ ಹಕ್ಕಿಗಳನ್ನು ರಕ್ಷಿಸಲು ಸಾವಿರಾರು ಉಚಿತ ಮಣ್ಣಿನ ನೀರು ಕುಡಿಯುವ ತಟ್ಟೆಗಳ ವಿತರಣೆ ಮಾಡಿದ್ದಾರೆ.

2020 ರ ಭೀಕರ ಲಾಕ್ ಡೌನ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸತತ 45 ದಿನಗಳ ಕಾಲ ಆಸ್ಪತ್ರೆ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ಜನರಿಗೆ ಉಚಿತ ಆಹಾರ ವಿತರಣೆ. ಸಂಗೀತ ಸಂಜೆಗಳನ್ನು ಆಯೋಜಿಸಿ, ಅದರಿಂದ ಬಂದ ಹಣವನ್ನು ಅನಾಥಾಶ್ರಮ ಹಾಗೂ ಬಡ ರೋಗಿಗಳ ಚಿಕಿತ್ಸೆಗೆ ದೇಣಿಗೆ ನೀಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳ ಮಹಾಪೂರ ಮತ್ತು ರೆಡ್ ಕ್ರಾಸ್ ಗೌರವ
ಕಾರ್ತಿಕ್ ಅವರ ಬಹುಮುಖಿ ಸೇವೆಯನ್ನು ಗುರುತಿಸಿ ರಾಜ್ಯದ ಹಲವು ಪ್ರತಿಷ್ಠಿತ ಸಂಸ್ಥೆಗಳು ಸಾಲು ಸಾಲು ಪ್ರಶಸ್ತಿಗಳನ್ನು ನೀಡಿವೆ.

ವಾಸವಿ ಎಕ್ಸಲೆನ್ಸ್ ರಾಜ್ಯ ಪ್ರಶಸ್ತಿ (2017)

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2018)

ಜಿಲ್ಲಾ ಸ್ವಾತಂತ್ರ್ಯೋತ್ಸವ ಪ್ರಶಸ್ತಿ (2020)

ಪ್ರಜಾವಾಣಿ ಸಾಧಕ ಪ್ರಶಸ್ತಿ (2022)

ಆರ್ಯ ವೈಶ್ಯ ಸಾಧಕ ಸಿರಿ ರಾಜ್ಯ ಪ್ರಶಸ್ತಿ (2025)

ಪರಿಸರ ಸೇವಾ ವಿಶೇಷ ಗೌರವ (2026)

ಇತ್ತೀಚಿನ ಅತ್ಯುನ್ನತ ಗೌರವ:
2026 ರ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ, ಬೆಂಗಳೂರಿನ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಇವರಿಗೆ ರಾಜ್ಯ ಮಟ್ಟದ “ಅಪ್ರತಿಮ ರಕ್ತದಾನಿ ಗೌರವ” ನೀಡಿ ಸನ್ಮಾನಿಸಲಾಗಿದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಟಾಪ್ 10 ಸಾಧಕರಲ್ಲಿ ಚಿತ್ರದುರ್ಗದಿಂದ ಕಾರ್ತಿಕ್ ಆಯ್ಕೆಯಾಗಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ. ಇವರ ಈ ಅದ್ಭುತ ಬದುಕನ್ನು ನೋಡಿ ಪ್ರಮುಖ ವಾಹಿನಿಗಳಾದ ‘ಪಬ್ಲಿಕ್ ಟಿವಿ’ ಇವರನ್ನು “ಪಬ್ಲಿಕ್ ಹೀರೊ” ಎಂದು ಘೋಷಿಸಿದರೆ, ‘ಉದಯ ನ್ಯೂಸ್’ ತನ್ನ ಜನಪ್ರಿಯ “ನಮ್ಮ ನಾಡು – ನಮ್ಮ ಜನ” ಸಾಕ್ಷ್ಯಚಿತ್ರದಲ್ಲಿ ಇವರ ಜೀವನ ಸಾಧನೆಯನ್ನು ಬಿತ್ತರಿಸಿದೆ.

ಯುವ ಪೀಳಿಗೆಗೊಂದು ಜೀವಂತ ಪಾಠಶಾಲೆ :
ಸೋಲು ಎನ್ನುವುದು ಬದುಕಿನ ಅಂತ್ಯವಲ್ಲ, ಅದು ಹೊಸ ಅಧ್ಯಾಯದ ಆರಂಭ ಎಂಬುದನ್ನು ಕಾರ್ತಿಕ್ ಸಾಧಿಸಿ ತೋರಿಸಿದ್ದಾರೆ. ಒಂದೆಡೆ ಯಶಸ್ವಿ ಉದ್ಯಮಿ, ಇನ್ನೊಂದೆಡೆ ಪರಿಸರ ಯೋಗಿ, ಮಗದೊಂದೆಡೆ ಜೀವದಾತ ರಕ್ತದಾನಿ – ಹೀಗೆ ಬಹುಮುಖ ವ್ಯಕ್ತಿತ್ವದ ಶ್ರೀ ಕಾರ್ತಿಕ್ ಎಂ. ಅವರ ಬದುಕು ಕಷ್ಟಗಳನ್ನು ಸೀಳಿ ನಗುವುದನ್ನು ಕಲಿಸುವ ಒಂದು ಜೀವಂತ ವಿಶ್ವವಿದ್ಯಾಲಯ. ಕೋಟೆ ನಾಡಿನ ಈ ಹೆಮ್ಮೆಯ ಪುತ್ರನ ಯಶೋಗಾಥೆ ಇಂದಿನ ಯುವ ಪೀಳಿಗೆಗೆ ಸದಾ ಕಾಲ ಸ್ಪೂರ್ತಿಯ ಜಲಧಾರೆಯಾಗಿರಲಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now