ಸುದ್ದಿಒನ್,ಚಿತ್ರದುರ್ಗ, ಜೂನ್ 02: ತಾಲೂಕಿನ ಚಿಕ್ಕಜಗಳೂರಿನ (ತಮ್ಮಯ್ಯನ ಹಟ್ಟಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಸಹ ಶಿಕ್ಷಕರಾಗಿ ಅಪ್ರತಿಮ ಸೇವೆ ಸಲ್ಲಿಸಿದ್ದ ಬಿ. ವೆಂಕಟೇಶ್ ರವರು ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದಿದ್ದಾರೆ. ತಾಲೂಕಿನ ಸುಲ್ತಾನಿಪುರದ (ಲಿಂಗದಹಳ್ಳಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಗ್ರಾಮದ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಡಗೂಡಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿ ಅವರಿಗೆ ಗೌರವಾನ್ವಿತವಾಗಿ ಬೀಳ್ಕೊಟ್ಟರು.
ಚಿಕ್ಕಜಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕ ಬಿ. ವೆಂಕಟೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಶಿಕ್ಷಕರಾದ ತಿಪ್ಪೇಸ್ವಾಮಿ ಜಿ.ಹೆಚ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಿ.ಆರ್.ಪಿ ಮಾಲತೇಶ್, ಬಿ.ಐ.ಇ.ಆರ್.ಟಿ ರಾಜಪ್ಪ, ಬಿ.ಆರ್.ಸಿ ವೇದಮೂರ್ತಿ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರಾದ ಕಮಲಾ, ಮಂಜುನಾಥಾಚಾರ್ಯಿ, ರವಿ ಶಂಕರ್, ಚನ್ನಕೇಶವ, ಉಮೇಶ್, ಮಾರುತೇಶ, ಮಹಾರುದ್ರಪ್ಪ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಪಾಪಯ್ಯ ಪಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ್ ಎನ್ ರವರು ಸೇರಿದಂತೆ ಶಾಲೆಯ ನೂರಾರು ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶಿಕ್ಷಕರಿಗೆ ಶುಭ ಹಾರೈಸಿದರು.
ಶಿಕ್ಷಕ ಬಿ. ವೆಂಕಟೇಶ್ ರವರ ವೃತ್ತಿ ಬದುಕು ಮತ್ತು ಹಿನ್ನೆಲೆ
ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆಯ ಎತ್ತಿನಬಡಯ್ಯ ಮತ್ತು ಬೊರಮ್ಮ ದಂಪತಿಗಳ ಹೆಮ್ಮೆಯ ಪುತ್ರನಾದ ಬಿ. ವೆಂಕಟೇಶ್ ರವರು 1994ರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು.
1994 – 1997: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್. ಬಿದ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಮೊದಲ ಸೇವೆ.
1997 – 2026: ಚಿತ್ರದುರ್ಗ ತಾಲೂಕಿನ ಚಿಕ್ಕಜಗಳೂರಿನ (ತಮ್ಮನಟ್ಟಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು, ಕಳೆದ 28 ವರ್ಷಗಳಿಂದ ಸುಧೀರ್ಘವಾಗಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಣೆ.
ಪ್ರಸ್ತುತ: ಮುಖ್ಯ ಶಿಕ್ಷಕರಾಗಿ ಮುಂಬಡ್ತಿ (ಪ್ರಮೋಷನ್) ಪಡೆದು, ಸುಲ್ತಾನಿಪುರದ (ಲಿಂಗದಹಳ್ಳಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ.
ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ :
ಬಿ. ವೆಂಕಟೇಶ್ ರವರು ಚಿಕ್ಕಜಗಳೂರಿನ ಶಾಲೆಗೆ ಶಿಕ್ಷಕರಾಗಿ ಬಂದ ದಿನದಿಂದ ಹಿಡಿದು ಇಂದಿನವರೆಗೂ ಶಾಲೆಯ ಮಕ್ಕಳ ಪಾಲಿಗೆ ಅತ್ಯಂತ ಅಚ್ಚುಮೆಚ್ಚಿನ ಗುರುಗಳಾಗಿಯೇ ಗುರುತಿಸಿಕೊಂಡಿದ್ದಾರೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಗ್ರಾಮದ ಜನತೆಗೆ ಮತ್ತು ಪೋಷಕರಿಗೂ ಇವರು ಉತ್ತಮ ಮಾರ್ಗದರ್ಶಕರಾಗಿದ್ದರು. ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ಮಕ್ಕಳಿಗೆ ಬದುಕಿನ ಸತ್ಪಾಠಗಳನ್ನು ಧಾರೆ ಎರೆದಿದ್ದಾರೆ.
ಶಾಲೆಯಲ್ಲಿ ಹಸಿರು ಕ್ರಾಂತಿ: ಉತ್ತಮ ಪರಿಸರ ನಿರ್ಮಿಸಿದ ಕೀರ್ತಿ ಶಾಲೆಯ ಆವರಣವನ್ನು ಕೇವಲ ಕಟ್ಟಡವಾಗಿಸದೆ, ಅದಕ್ಕೊಂದು ದಿವ್ಯ ಕಳೆಯನ್ನು ತಂದುಕೊಟ್ಟ ಕೀರ್ತಿ ವೆಂಕಟೇಶ್ ಅವರಿಗೆ ಸಲ್ಲುತ್ತದೆ. ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಪೋಷಿಸಿ, ಬೆಳೆಸುವ ಮೂಲಕ ಇಡೀ ಶಾಲೆಯನ್ನು ಹಚ್ಚಹಸುರಿನ ಪರಿಸರ ತಾಣವನ್ನಾಗಿ ಮಾರ್ಪಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಉತ್ತಮ ಆಹ್ಲಾದಕರ ಪರಿಸರ ನೆಲೆಸಲು ಅವರು ಪೂರಕವಾಗಿ ಶ್ರಮಿಸಿದ್ದಾರೆ.
ಚಿಕ್ಕಜಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೇವಲ ಕೆಲಸ ಮಾಡುವ ಸ್ಥಳವಾಗಿ ನೋಡದೆ, ಒಂದು ಪವಿತ್ರ ದೇವಾಲಯದಂತೆ ಭಾವಿಸಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ 28 ವರ್ಷಗಳ ಸುಧೀರ್ಘ ಹಾಗೂ ಮಾದರಿ ಸೇವೆಯಲ್ಲಿ ಅನೇಕ ಗ್ರಾಮೀಣ ಮಕ್ಕಳ ಬಾಳಿಗೆ ಜ್ಞಾನದ ಬೆಳಕಾಗಿದ್ದಾರೆ. ಅತ್ಯುತ್ತಮ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಿ. ವೆಂಕಟೇಶ್ ರವರು ಮುಂಬಡ್ತಿ ಪಡೆದು ಹೊಸ ಶಾಲೆಗೆ ಹೆಜ್ಜೆ ಇಡುತ್ತಿರುವ ಈ ಶುಭ ಸಂದರ್ಭದಲ್ಲಿ, ಅವರ ಮುಂದಿನ ವೃತ್ತಿ ಜೀವನ ಹಾಗೂ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂಬುದೇ ಇಡೀ ಗ್ರಾಮಸ್ಥರ ಮತ್ತು ವಿದ್ಯಾರ್ಥಿಗಳ ಆಶಯವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















