ಸುದ್ದಿಒನ್, ಚಿತ್ರದುರ್ಗ, ಫೆ. 18 : ಯುವಕರು, ಮಹಿಳೆಯರು, ಮಕ್ಕಳು ಜಾಗೃತರಾಗಿರಿ. ನೀವೇ ನಾಡಿನ ನಾಳೆಯ ಆಸ್ತಿ ಆಗಿರುವಿರಿ. ಬನ್ನಿ ಎಲ್ಲರೂ ಸೇರಿ ಬಲಿಷ್ಠ ಭಾರತ ಕಟ್ಟೋಣ – ಇಂತಹ ಜಾಗೃತ ಘೋಷವಾಕ್ಯಗಳು ಕಡುಬಡತನದಲ್ಲಿ ಹುಟ್ಟಿ ಅನೇಕ ಸಂಕಷ್ಟಗಳನ್ನು ತಮ್ಮ ಹೋರಾಟದ ಬದುಕಿನಿಂದ ಮೆಟ್ಟಿನಿಂತು ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದ ಕರ್ನಾಟಕದ ಗಾಂಧಿ ಎಂದೇ ಕರೆಸಿಕೊಂಡಿದ್ದ ಹರ್ಡೇಕರ್ ಮಂಜಪ್ಪನವರ ಬಗ್ಗೆ ಅವರ ವ್ಯಕ್ತಿತ್ವ ಸಾಧನೆಯ ಬಗೆಗೆ ಎಷ್ಟು ಹೇಳಿದರೂ ಸಾಲದು ಎಂದು ನಿವೃತ್ತ ಕನ್ನಡ ಮುಖ್ಯಶಿಕ್ಷಕ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿಗಳೂ ಆದ ಹುರಳಿ ಎಂ. ಬಸವರಾಜು ಅವರು ಮಂಜಪ್ಪ ಅವರನ್ನು ಸ್ಮರಿಸಿಕೊಂಡರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಬುಧವಾರ ಏರ್ಪಡಿಸಿದ್ದ ಹರ್ಡೇಕರ ಮಂಜಪ್ಪ ಅವರ ಜಯಂತ್ಯುತ್ಸವ (ಶರಣೋತ್ಸವ)ದಲ್ಲಿ ವಿಷಯಾವಲೋಕನ ಮಾಡುತ್ತ, ಹುಟ್ಟು ಎಲ್ಲೇ ಪಡೆದಿರಲಿ ಸಾವು ಎಲ್ಲೇ ಆಗಲಿ, ಇವರೆಡೂ ನಮ್ಮ ಕೈಯೊಳಗಿಲ್ಲ. ಆದರೆ ಇವುಗಳ ನಡುವೆ ಇರುವ ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಅಂತಹ ಸಿದ್ಧಿಯನ್ನು ಅಂದುಕೊಂಡದ್ದನ್ನು ಸಾಧಿಸಿ, ವ್ಯಕ್ತಿಯಾಗಿ ಹುಟ್ಟಿ ಕನ್ನಡಿಗನಾಗಿ ಬೆಳೆದು ಭಾರತೀಯತೆಯ ರಾಷ್ಪ್ರಪ್ರಜ್ಞೆಯನ್ನು ಸ್ವತಃ ಜಾಗೃತಗೊಳಿಸಿಕೊಂಡು ಅದನ್ನು ಇತರರಿಗೂ ಮುಟ್ಟುವಂತೆ ಹಗಲಿರುಳು ಶ್ರಮಿಸಿದವರು ಮಂಜಪ್ಪನವರು. ಮಲೆನಾಡಿನ ಸೆರಗು ಅಕ್ಕ, ಅಲ್ಲಮ, ಪಂಪರಂತಹ ಮಹಾನ್ ಚೇತನಗಳನ್ನು ನೀಡಿದೆ. ಅದೇರೀತಿ ಮಂಜಪ್ಪನವರು ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಹುಟ್ಟಿ ಶಿಕ್ಷಣ ಕಲಿತದ್ದು ಸ್ವಲ್ಪವೇ ಆದರೂ ಸಾಧಿಸಿದ್ದು ಅಗಾಧ ಎಂದು ಹೇಳಿದರು.
ಕಡುಬಡತನ ಮಂಜಪ್ಪನವರನ್ನು ಶಿಸ್ತಿನ ಜೀವನ, ಸಮಾಜ ಸೇವೆ ಹಾಗೂ ಬಡತನದಲ್ಲಿರುವವರನ್ನು ಮೇಲೆತ್ತಲು ಪ್ರೇರೇಪಿಸಿತು. ಕನ್ನಡ, ಮರಾಠಿ ಕಲಿತ ಇವರಲ್ಲಿ ಸಂಸ್ಕøತ ಕಲಿತು ಶಾಸ್ತ್ರಿ ಆಗಬೇಕೆಂಬ ಹಂಬಲ. ಆದರೆ ಆಗಿನ ಸಂಪ್ರದಾಯಸ್ಥ ವ್ಯವಸ್ಥೆ ಶೂದ್ರ ಸಂಸ್ಕøತ ಕಲಿಯುವುದೇ ಎಂದು ಹಿಯಾಳಿಸಿದ್ದುಂಟು. ಆದರೂ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕøತ ಕಲಿಕೆಯನ್ನು ರೂಢಿಸಿಕೊಂಡಿದ್ದರು. ಮರಾಠಿಯ ಅನೇಕ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ವಿವಿಧ ಪತ್ರಿಕೆಗಳಿಗೆ ಕಳಿಸುತ್ತ, ಹಲವು ಹಿರಿಯರ ಸಹಾಯದಿಂದ `ಧನುರ್ದಾರಿ’ ಪತ್ರಿಕೆ ಆರಂಭಿಸಿ ಬ್ರಿಟೀಷರ ವಿರುದ್ಧ ಪ್ರಕಟಿಸುತ್ತಿದ್ದರು. ಈ ನಡುವೆ ದಾವಣಗೆರೆ ವಿರಕ್ತಮಠದಲ್ಲಿದ್ದ ಮೃತ್ಯುಂಜಯಪ್ಪಗಳ ಸಂಪರ್ಕಕ್ಕೆ ಬಂದು ಭಜನಾ ಸಂಘ ಸ್ಥಾಪಿಸಿದರು. ಮುಂದುವರೆದು ಗಣೇಶ ಹಬ್ಬ, ರಾಮನವಮಿ ಆಚರಣೆಯಂತೆ ನಾವು ಬಸವ ಜಯಂತಿಯನ್ನು ಆಚರಿಸಬೇಕೆಂದು ಮೃತ್ಯುಂಜಯಪ್ಪಗಳು ಇತರರೊಂದಿಗೆ ಚರ್ಚಿಸಿ 1913ರಲ್ಲಿ ಮೊಟ್ಟಮೊದಲು ದಾವಣಗೆರೆ ವಿರಕ್ತಮಠದಲ್ಲಿ ಬಸವ ಜಯಂತಿ ಆಚರಣೆಯನ್ನು ಪ್ರಾರಂಭ ಮಾಡಿದ್ದು ದೊಡ್ಡ ಇತಿಹಾಸವೆಂದರು.
ಲೋಕಮಾನ್ಯ ತಿಲಕರ ಪ್ರಭಾವದಿಂದ ಮಹಾತ್ಮಗಾಂಧಿಯವರನ್ನು ಭೇಟಿ ಮಾಡಿ ಬ್ರಿಟೀಷರ ವಿರುದ್ಧ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದರು. ವೀರಶೈವ ತರುಣ ಸಂಘ, ಹುಬ್ಬಳ್ಳಿಯಲ್ಲಿ ವೀರಶೈವ ತರುಣರ ಸಮ್ಮೇಳನ, ಖಾದಿ ಚಳುವಳಿ ಆರಂಭಿಸಿ ರಾಷ್ಟ್ರಸೇವೆಗೆ ಪ್ರಚೋದನೆ ನೀಡಿದರು. ತುಂಗಾ ತೀರದ ದಂಡೆಯ ಮೇಲೆ ಸತ್ಯಾಗ್ರಹ ಆಶ್ರಮ ಸ್ಥಾಪನೆ ಮಾಡಿ ಸತ್ಯಾಗ್ರಹಿಗಳಿಗೆ ಉತ್ತೇಜನ ನೀಡಿದರು. ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧನೆ ಮಾಡಬಹುದಾ! ಎಂದು ಆಶ್ಚರ್ಯಪಡುವಷ್ಟು ಸಾಧನೆ ಮಾಡಿದರು. ಸದಾ ರಾಷ್ಟ್ರಪ್ರೇಮ ಜಾಗೃತಿಯೇ ಉಸಿರಾಗಿಸಿಕೊಂಡಿದ್ದ ಮಂಜಪ್ಪನವರು ಫ.ಗು.ಹಳಕಟ್ಟಿಯವರ ವಚನಶಾಸ್ತ್ರಸಾರ ಪ್ರಕಟಣೆಗೆ ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿಕೊಟ್ಟಿದ್ದು ಸೇರಿದಂತೆ ಕನ್ನಡಿಗರಾಗಿ ಹುಟ್ಟಿ ಭಾರತೀಯರಾಗಿ ಈ ನಾಡಿಗೆ ಬೆಳಕು ಬೀರಿದ ಮಂಜಪ್ಪನವರು ಸ್ವಾತಂತ್ಯ ಸಿಗುವ ಎಂಟು ತಿಂಗಳು ಮೊದಲು 3ನೇ ಜನವರಿ 1947ರಲ್ಲಿ ಲಿಂಗೈಕ್ಯರಾದರು. ಅವರು ಬಿಟ್ಟು ಹೋದ ಆದರ್ಶವನ್ನು ಮಕ್ಕಳು ಅರಿಯಬೇಕಿದೆ. ಇದಕ್ಕೆ ದೊಡ್ಡವರ ಪೆÇ್ರತ್ಸಾಹ ಅಗತ್ಯ ಎಂದು ಮಂಜಪ್ಪನವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ, ಸಾಮಾನ್ಯವಾಗಿ ಈ ನಾಡಿನಲ್ಲಿ ಶರಣ ಪರಂಪರೆಯನ್ನು ಇಷ್ಟೊಂದು ಗಹನವಾಗಿ ಗುರುತಿಸಿ ಆಧರಿಸಿ ಆಚರಿಸಲು ಪ್ರೇರಣೆ ಮತ್ತು ಪ್ರವರ್ತಕರಾದವರೆಂದರೆ ಹರ್ಡೇಕರ್ ಮಂಜಪ್ಪನವರು ಹಾಗೂ ಫ.ಗು. ಹಳಕಟ್ಟಿಯವರು. ನಮ್ಮ ನಾಡು ಈ ಮಹನೀಯರನ್ನು ಯಾವತ್ತಿಗೂ ಮರೆಯುವಂತಿಲ್ಲ. ಮಂಜಪ್ಪನವರು ಬಾಲ್ಯ, ಯೌವ್ವನ ಕೊನೆಗೆ ತಮ್ಮ ಅಂತಿಮ ದಿನಗಳವರೆಗೂ ನಿರಂತರವಾಗಿ ಈ ತತ್ವದ ಬಗ್ಗೆ ಪ್ರಸಾರ ಮತ್ತು ಅನುಷ್ಠಾನಕ್ಕಾಗಿ ಅತಿಹೆಚ್ಚು ಆಸ್ಥೆ ವಹಿಸಿ ದುಡಿದವರು. ಗಣೇಶ ಹಬ್ಬ ಇತರೆ ಜಯಂತಿ ತರಹ ನಾವು ಏಕೆ ಬಸವ ಜಯಂತಿ ಆಚರಿಸಬಾರದೆಂಬ ಒತ್ತಾಸೆಯಿಂದ ಅಂದಿನ ದಾವಣಗೆರೆ ಮೃತ್ಯುಂಜಯಪ್ಪಗಳೊಂದಿಗೆ ಚರ್ಚಿಸಿ 800 ವರ್ಷದ ನಂತರ ಬಸವ ಜಯಂತಿ ಆಚರಣೆಗೆ ಪ್ರೇರಣೆ ನೀಡಿದರು ಎಂದು ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ಗಣೇಶ ಆರಾಧನೆ ನಡೆದಿದೆ. ಈಗೀಗ ಗಣೇಶ ಚತುರ್ಥಿಯಂದು ಗಣೇಶ ಕೂರಿಸುವ ವಿಸರ್ಜಿಸುವ ವಿಧಾನ ಹೇಗಿದೆ ಎಂಬುದು ನಿಮಗೆ ಗೊತ್ತು. ಆದರೆ ಬಸವ ಜಯಂತಿ? ಯಾವ ಬಸವಣ್ಣ ದುಡಿಯುವ ವರ್ಗ ದೇವರು ಅಂದರೋ ಅಂತಹ ಪುಣ್ಯಾತ್ಮನ ಸ್ಮರಣೆ ಯಾವ ರೀತಿ ನಡೆದಿದೆಯೆಂದು ಯೋಚಿಸಬೇಕಿದೆ. ಅಂದಿನ ಕಾಲದಲ್ಲಿ ಮಠಗಳು ಕಂತೇಭಿಕ್ಷೆಯಲ್ಲೇ ನಡೆದಿದ್ದವು. ಇಂದಿನ ಹಾಗೆ ಆರ್ಥಿಕ ಸಬಲೀಕರಣಗೊಂಡಿರಲಿಲ್ಲ. ವಿದ್ಯಾರ್ಥಿಗಳು ಕಂತೇಭಿಕ್ಷೆ ಎತ್ತಿ ತಂದು ಅದೇ ಪ್ರಸಾದದಲ್ಲಿ ಬೆಳೆದು ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವಂತಾಗುತ್ತಿದ್ದರು.
ಸ್ವಾಮಿಗಳು ಸಹ ಕಂತೇಭಿಕ್ಷೆಯ ಪ್ರಸಾದವನ್ನು ತೆಗೆದುಕೊಂಡ ಉದಾಹರಣೆ ಸಾಕಷ್ಟಿವೆ. ಅರ್ಧ ದಶಕದ ಹಿಂದೆ ಇದೆಲ್ಲ ನಡೆದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹರ್ಡೇಕರ್ ಮಂಜಪ್ಪನವರು ಹಾಗೂ ಫ.ಗು. ಹಳಕಟ್ಟಿ ಅವರುಗಳು ಮುದ್ರಣಾಲಯ ಆರಂಭ ಮಾಡೋದು ಅಂದರೆ ಹುಡುಗಾಟದ ಮಾತಲ್ಲ. ಇಂದು ತಮ್ಮ ಅಂಗೈಯ ಮೊಬೈಲ್‍ನಲ್ಲಿ ಏನೆಲ್ಲ ರೆಡಿ ಮಾಡಬಹುದಾಗಿದೆ. ಆದರೆ ಯಾವ ಸಂಪರ್ಕ, ಮೂಲಭೂತ ಸೌಕರ್ಯಗಳಿಲ್ಲದ ಸಂದರ್ಭದಲ್ಲಿ ಕರ್ನಾಟಕ ಅಷ್ಟೇ ಏಕೆ ದೇಶಕ್ಕೆ ತತ್ವಪ್ರಸಾರ ಯಾವ ರೀತಿ ಮಾಡಿದರೆಂಬುದು ಆಶ್ಚರ್ಯವಾಗುತ್ತದೆ. ಇಂತಹ ಮಹನೀಯರುಗಳನ್ನು ಸ್ಮರಿಸುವುದು ನಮ್ಮ ಆದ್ಯಕರ್ತವ್ಯ. ಕೇವಲ ಔಪಚಾರಿಕ ಯಾಂತ್ರಿಕತೆಗೆ ಈ ಜಯಂತಿಗಳು ಸೀಮಿತ ಆಗಬಾರದು. ಅರಿವನ್ನು ಜಾಗೃತಗೊಳಿಸಿಕೊಳ್ಳಲು ಈ ಮಹನೀಯರ ತ್ಯಾಗ ಬಲಿದಾನದ ಜೀವನವು ಮಾದರಿಯಾಗಿದೆ. ಈ ಪುಣ್ಯ ಪುರುಷರ ವಿಚಾರದಲ್ಲಿ ಕಾಟಾಚಾರದ ನಡವಳಿಕೆ ಅಥವಾ ಆಚರಣೆ ಸಲ್ಲದು. ಹುರಳಿ ಬಸವರಾಜ್ ಅವರು ಮಂಜಪ್ಪನವರ ಇಡೀ ಸಮಗ್ರ ಬದುಕನ್ನು ಅನಾವರಣಗೊಳಿಸಿ ಸಂಚಲನ ಮೂಡಿಸಿದ್ದಾರೆ. ಹೀಗೆ ವಿದ್ಯಾರ್ಥಿಗಳು ತಯಾರಾಗಬೇಕೆಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ನಾಗರಾಜ ಸಂಗಮ್, ಬಸವರಾಜ ಕಟ್ಟಿ, ಎಸ್.ಎಂ. ಕೊಟ್ರೇಶಪ್ಪ, ಗಂಗಾಧರಪ್ಪ, ಟಿ.ಪಿ. ಜ್ಞಾನಮೂರ್ತಿ, ಮಹಂತಮ್ಮ, ಜಯಶೀಲ ವೀರಣ್ಣ, ಗೀತಾ ರುದ್ರೇಶ್, ಇಟಗಿ ವಿಜಯಕುಮಾರ್ ಸೇರಿದಂತೆ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ರಘುನಾಥರೆಡ್ಡಿ, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭದಲ್ಲಿ ಜಮುರಾ ಕಲಾವಿದ ಉಮೇಶ್ ಪತ್ತಾರ ವಚನ ಪ್ರಾರ್ಥನೆ ಮಾಡಿದರು. ಗೀತಾ ಸ್ವಾಗತಿಸಿದರು. ಅನುಪಮ ಲಿಂಗರಾಜು ಕಾರ್ಯಕ್ರಮ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು.



