Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ 17 ಮಂದಿಗೆ ದೋಷಿ ತೀರ್ಪು

---Advertisement---

ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 16ರಂದು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಒಟ್ಟು 21 ಆರೋಪಿಗಳ ಪೈಕಿ ಇಬ್ಬರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳೆಂದು ಪರಿಗಣಿಸಲಾಗಿದೆ. ಉಳಿದ 17 ಮಂದಿಯನ್ನು ತಕ್ಷಣ ವಶಕ್ಕೆ ಪಡೆಯುವಂತೆ CBI ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಈ ತೀರ್ಪು ಪ್ರಕಟವಾಗಿದ್ದು, ಮೊದಲಿಗೆ ಏಪ್ರಿಲ್ 9ರಂದು ತೀರ್ಪು ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು.

ಪ್ರಕರಣದ ಹಿನ್ನೆಲೆ:
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಆರಂಭದಲ್ಲಿ ಆಸ್ತಿ ವಿವಾದವೇ ಕಾರಣ ಎಂದು ಶಂಕಿಸಲಾಗಿತ್ತು. ನಂತರ ಪ್ರಕರಣದ ಗಂಭೀರತೆ ಮತ್ತು ರಾಜಕೀಯ ಅಂಶಗಳ ಹಿನ್ನೆಲೆಯಲ್ಲಿ 2019ರಲ್ಲಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.

ಸಿಬಿಐ ತನಿಖೆಯ ಪ್ರಮುಖ ಅಂಶಗಳು:
ತನಿಖೆಯಲ್ಲಿ ಈ ಹತ್ಯೆ ಕೇವಲ ಆಸ್ತಿ ವಿವಾದಕ್ಕಷ್ಟೇ ಸೀಮಿತವಾಗಿರದೆ, ರಾಜಕೀಯ ಪ್ರೇರಿತವಾಗಿಯೂ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರ ಪಾತ್ರದ ಮೇಲೆ ಅನುಮಾನ ವ್ಯಕ್ತವಾಗಿ, 2020ರಲ್ಲಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಅವರು ಬಿಡುಗಡೆಯಾಗಿದ್ದರು.

ಹತ್ಯೆಗೆ ಕಾರಣ:
ಧಾರವಾಡ ಸಮೀಪದ ಬೆಳ್ಳಿಗಟ್ಟಿ ಗ್ರಾಮದ ಭೂ ವಿವಾದವೇ ಈ ಪ್ರಕರಣದ ಮೂಲ ಕಾರಣವೆಂದು ತಿಳಿದುಬಂದಿದೆ. ಜಮೀನು ಖರೀದಿ ಮತ್ತು ಒತ್ತುವರಿ ಆರೋಪಗಳ ಹಿನ್ನೆಲೆ ವೈಮನಸ್ಸು ತೀವ್ರಗೊಂಡು ಕೊನೆಗೆ ಹತ್ಯೆಗೆ ಕಾರಣವಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ದಶಕದ ಬಳಿಕ ಹೊರಬಿದ್ದ ಈ ತೀರ್ಪು ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ದೊರೆತಂತಾಗಿದ್ದು, ರಾಜ್ಯ ರಾಜಕೀಯದಲ್ಲೂ ಮಹತ್ವದ ಚರ್ಚೆಗೆ ಕಾರಣವಾಗಿದೆ. ಶಿಕ್ಷೆಯ ಘೋಷಣೆಗಾಗಿ ಎಲ್ಲರ ಗಮನ ಏಪ್ರಿಲ್ 16ರತ್ತ ನೆಟ್ಟಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now