Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೈಕಲ್ ಮೂಲಕ ಪಕ್ಷ ಕಟ್ಟಿದ ಅಪರೂಪದ ನಾಯಕ ಯಡಿಯೂರಪ್ಪ: ಚಿತ್ರದುರ್ಗದಲ್ಲಿ ಅಮಿತ್ ಶಾ ಗುಣಗಾನ

---Advertisement---

ಸುದ್ದಿಒನ್,ಚಿತ್ರದುರ್ಗ,ಮೇ.09: ಗ್ರಾಮಗಳಿಗೆ ಸರಿಯಾಗಿ ಬಸ್ ಸೌಕರ್ಯ ಕೂಡ ಇಲ್ಲದ ಕಾಲದಲ್ಲಿ ಸೈಕಲ್ ತುಳಿಯುತ್ತಾ ಇಡೀ ಕರ್ನಾಟಕವನ್ನು ಸುತ್ತಿ, ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಬಿ.ಎಸ್. ಯಡಿಯೂರಪ್ಪ. ಅವರ ಇಚ್ಛಾಶಕ್ತಿ ಮತ್ತು ರಾಷ್ಟ್ರಭಕ್ತಿ ಇಂದಿನ ಯುವ ನಾಯಕರಿಗೆ ದಾರಿದೀಪ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ಲಾಘಿಸಿದರು.

ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಜೀವನದ ಹಾದಿ ಮತ್ತು ಜನಸೇವೆಯ ಕುರಿತು ಅವರು ಹಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡರು.

ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಾಗಿಲು ತೆರೆದವರು

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಮಾತಿದ್ದ ಕಾಲವೊಂದಿತ್ತು. ಆದರೆ, ಯಡಿಯೂರಪ್ಪ ಅವರು ತಮ್ಮ ಅವಿರತ ಪರಿಶ್ರಮದಿಂದ 2008ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಮೂಲಕ ದಕ್ಷಿಣ ಭಾರತದಲ್ಲಿ ಕಮಲ ಅರಳುವಂತೆ ಮಾಡಿದರು. ಸಾಮಾನ್ಯ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅವರು, ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ರಾಜ್ಯವನ್ನು ಮುನ್ನಡೆಸಿದ ಶಕ್ತಿವಂತ ನಾಯಕ ಎಂದು ಬಣ್ಣಿಸಿದರು.

ಅಧಿಕಾರಕ್ಕಿಂತ ಸಂಘಟನೆಗೆ ಆದ್ಯತೆ

ಯಡಿಯೂರಪ್ಪ ಅವರ ನಿಸ್ವಾರ್ಥ ಸೇವೆಗೆ ಉದಾಹರಣೆಯಾಗಿ 2014ರ ಘಟನೆಯನ್ನು ನೆನಪಿಸಿದ ಅಮಿತ್ ಶಾ, “ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟಕ್ಕೆ ಸೇರಲು ಯಡಿಯೂರಪ್ಪ ಅವರಿಗೆ ಅವಕಾಶವಿತ್ತು. ಆದರೆ ಅವರು, ‘ನನ್ನ ಆದ್ಯತೆ ಕರ್ನಾಟಕ, ನಾನು ರಾಜ್ಯದಲ್ಲೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿದ್ದರು. ಇಂತಹ ಸಮರ್ಪಣಾ ಭಾವ ಎಲ್ಲರಲ್ಲೂ ಇರುವುದಿಲ್ಲ ಎಂದರು.

ರೈತ ನಾಯಕ ಮತ್ತು ಅಭಿವೃದ್ಧಿಯ ಹರಿಕಾರ

ಜನಸೇವೆಯೇ ಜನಾರ್ದನ ಸೇವೆ ಮತ್ತು ರೈತರ ಕಲ್ಯಾಣವೇ ರಾಷ್ಟ್ರದ ಕಲ್ಯಾಣ ಎಂಬ ತತ್ವಗಳನ್ನು ಯಡಿಯೂರಪ್ಪ ಅವರು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಜನಪ್ರಿಯ ರೈತ ನಾಯಕರಾದರು. ಲಿಂಗಾಯತ, ಒಬಿಸಿ ಹಾಗೂ ದಲಿತ ಸಮುದಾಯ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ನಡುವೆ ಸಾಮರಸ್ಯ ಬೆಳೆಸಲು ಅವರು ಶ್ರಮಿಸಿದ್ದಾರೆ.

ಸಂಗೊಳ್ಳಿ ರಾಯಣ್ಣನಿಗೆ ಮರಣದಂಡನೆ ನೀಡಿದ ಸ್ಥಳವನ್ನು ಅಭಿವೃದ್ಧಿಪಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ನೆನಪನ್ನು ಶಾಶ್ವತವಾಗಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬೆಂಗಳೂರನ್ನು ವಿಶ್ವದ ಭೂಪಟದಲ್ಲಿ ಪ್ರಮುಖ ‘ಟೆಕ್ ಹಬ್’ ಆಗಿ ರೂಪಿಸುವಲ್ಲಿ ಯಡಿಯೂರಪ್ಪ ಅವರ ದೂರದೃಷ್ಟಿಯ ಪಾತ್ರ ದೊಡ್ಡದಿದೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮ ಮತ್ತು ವಿವಿಧ ಮಠಾಧೀಶರ ಉಪಸ್ಥಿತಿಯನ್ನು ಕಂಡ ಅಮಿತ್ ಶಾ, ಇಲ್ಲಿ ನೆರೆದಿರುವ ಜನಸಾಗರವೇ ಯಡಿಯೂರಪ್ಪ ಅವರ ಜನಪ್ರಿಯತೆಗೆ ಸಾಕ್ಷಿ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ಹಾರೈಸಿದರು.

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...