ಸುದ್ದಿಒನ್, ಚಳ್ಳಕೆರೆ, ಮೇ. 13 : ಚಳ್ಳಕೆರೆ ಹಾಗೂ ಹಿರಿಯೂರು ಕ್ಷೇತ್ರಗಳಿಂದ ಎರಡು ಬಾರಿ ಶಾಸಕರಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಸುಧಾಕರ್ ಅವರ ಅಕಾಲಿಕ ನಿಧನದ ಬಳಿಕ ಇದೀಗ ವಾಮಾಚಾರದ ಚರ್ಚೆ ಜೋರಾಗಿದೆ. ಅನಾರೋಗ್ಯದಿಂದ ಮೃತಪಟ್ಟ ಸುಧಾಕರ್ ಅವರಿಗೆ ಸರ್ಕಾರದ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯರು ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು.
ಚಳ್ಳಕೆರೆಯ ಇಕ್ಕಟ್ಟಾದ ಪ್ರದೇಶದಲ್ಲಿರುವ ಜೈನ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ನಡುವೆಯೇ ಸಚಿವರ ನಿವಾಸದ ಸಮೀಪ ಪತ್ತೆಯಾದ ಕೆಲವು ವಿಚಿತ್ರ ವಸ್ತುಗಳು ಹೊಸ ಚರ್ಚೆಗೆ ಕಾರಣವಾಗಿವೆ.ಸಚಿವ ಸುಧಾಕರ್ ಅವರ ಮನೆಯ ಸಮೀಪದ ಬೋರ್‌ವೆಲ್ ಬಳಿ ತಾಮ್ರದ ಪತ್ರ, ನಿಂಬೆಹಣ್ಣು, ಮಾಂಸದ ತುಂಡು ಸೇರಿದಂತೆ ವಾಮಾಚಾರಕ್ಕೆ ಬಳಸಲಾಗುತ್ತದೆ ಎನ್ನಲಾಗುವ ವಸ್ತುಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಸ್ತುಗಳನ್ನು ಮನೆ ಕೆಲಸಗಾರ ಚಂದ್ರು ಮೊದಲಿಗೆ ಗಮನಿಸಿದ್ದು, ಬಳಿಕ ಹೊರತೆಗೆದು ಜನರಿಗೆ ತೋರಿಸಿದ್ದಾನೆ ಎನ್ನಲಾಗುತ್ತಿದೆ. ಈ ವಿಡಿಯೋ ಇದೀಗ ಹಿರಿಯೂರು ಮತ್ತು ಚಳ್ಳಕೆರೆ ಭಾಗದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.‘ಇದು ಸಾಮಾನ್ಯ ಪೂಜೆ ಅಲ್ಲ, ಉದ್ದೇಶಪೂರ್ವಕವಾಗಿ ವಾಮಾಚಾರ ಮಾಡಲಾಗಿದೆ’ ಎಂದು ಕೆಲವರು ಹೇಳುತ್ತಿದ್ದರೆ, ‘ಮೂಢನಂಬಿಕೆಗೆ ಸಾವನ್ನು ಜೋಡಿಸುವುದು ಸರಿಯಲ್ಲ’ ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಶತ್ರುಗಳ ವಿರುದ್ಧ ಸೇಡು ತೀರಿಸಲು ನಿಂಬೆಹಣ್ಣು, ತಾಮ್ರದ ಪತ್ರ, ರಕ್ತ ಅಥವಾ ಮಾಂಸದ ತುಂಡುಗಳನ್ನು ಬಳಸಿಕೊಂಡು ನಿಗೂಢ ಶಕ್ತಿಗಳ ಆರಾಧನೆ ನಡೆಸುವ ನಂಬಿಕೆಗಳಿವೆ.
ಇದೀಗ ಪತ್ತೆಯಾದ ವಸ್ತುಗಳ ಹಿನ್ನೆಲೆ ಸುಧಾಕರ್ ವಿರುದ್ಧವೂ ವಾಮಾಚಾರ ನಡೆದಿತ್ತಾ ಎಂಬ ಪ್ರಶ್ನೆ ಮೂಡಿಸಿದೆ.
ಆದರೆ ವೈದ್ಯಕೀಯ ಮಾಹಿತಿ ಪ್ರಕಾರ, ಸಚಿವ ಸುಧಾಕರ್ ಅವರು ಅನಾರೋಗ್ಯದಿಂದಲೇ ಮೃತಪಟ್ಟಿದ್ದಾರೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಇದಾದರೂ ಮನೆ ಸಮೀಪ ಪತ್ತೆಯಾದ ವಸ್ತುಗಳು ಸಾರ್ವಜನಿಕರಲ್ಲಿ ಕುತೂಹಲ, ಆತಂಕ ಮತ್ತು ಸಂಶಯಕ್ಕೆ ಕಾರಣವಾಗಿವೆ.ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಚಿತ್ರದುರ್ಗ ಜಿಲ್ಲೆಯ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.















