Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಾಡುಗೊಲ್ಲರಹಟ್ಟಿಗಳು ಬದಲಾವಣೆಯಾಗಬೇಕು : ಡಾ. ನಾಗಲಕ್ಷ್ಮಿ ಚೌದರಿ

---Advertisement---

ಸುದ್ದಿಒನ್, ಹಿರಿಯೂರು, ಜೂನ್. 30 : ಹೆಣ್ಣು ಮುಟ್ಟಾದಾಗ ಹಟ್ಟಿಯಿಂದ ಹೊರಗಿರಬೇಕು ಎಂದು ಯಾವ ದೇವರೂ ಹೇಳಿಲ್ಲ. ಮುಟ್ಟು ಅನ್ನೋದು ಶುಭದ ಸಂಕೇತ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.

ನಗರದ ವಾಣಿ ಕಾಲೇಜು ಸಮೀಪದ ದೇವಗಿರಿ ನಗರದಲ್ಲಿ ಗಣೆ ಟ್ರಸ್ಟ್ ನ ನೂತನ ಕಚೇರಿ ಹಾಗೂ ಗ್ರಂಥಾಲಯ ಉದ್ಘಾಟನೆ ಮತ್ತು ಕಾಡುಗೊಲ್ಲ ಬುಡಕಟ್ಟು ಮಹಿಳಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಇದೇ ಜಿಲ್ಲೆಯ ಗೊಲ್ಲರಹಟ್ಟಿಯೊಂದರಲ್ಲಿ ಅಪ್ರಾಪ್ತೆ ಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಘಟನೆ ನಡೆದಿತ್ತು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯ. ಹಿಂದೆಲ್ಲಾ ಋತುಮತಿ ಆದಾಗ ಮದ್ವೆ ಮಾಡೋ ಪದ್ಧತಿ ಇತ್ತು. ನಮ್ಮ ಅಜ್ಜಿಗೂ ಸಹ 8 ವರ್ಷಕ್ಕೆ ಮದ್ವೆ ಮಾಡಿ ಹೆಣ್ಣು ಆದ ಮೇಲೆ ಗಂಡನ ಮನೆಗೆ ಕಳಿಸಿದ್ದರಂತೆ. ಹೆಣ್ಣು ಓದಿ ಕೆಲಸ ತೆಗೆದುಕೊಂಡು ಆಕೆಯೇ ಬಯಸಿದಾಗ ಮದುವೆ ಮಾಡಬೇಕು. ಪುರುಷರ ಜೊತೆಯಲ್ಲಿ ಹೆಣ್ಣು ಸರಿ ಸಮನಾಗಿ ನಿಲ್ಲಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕು. ಕಾಡುಗೊಲ್ಲ ಹಟ್ಟಿಗಳ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಕಾಡುಗೊಲ್ಲರಹಟ್ಟಿಗಳು ಬದಲಾವಣೆ ಆಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಹಟ್ಟಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಹೆಣ್ಣು ಸಾವಿಗೆ ಅವಳ ದೇಹ ಮತ್ತು ಮನಸ್ಸನ್ನು ಕೊಟ್ಟು ಮಗು ಹೆರುತ್ತಾಳೆ. ಅವಮಾನ, ಅಡಚಣೆಗಳ ಸಾಲುಗಳನ್ನು ಮಹಿಳೆ ಮೆಟ್ಟಿ ನಿಲ್ಲಬೇಕು ಎಂದು ತಿಳಿಸಿದರು.

ಪಾವಗಡ ತಾಲೂಕಿನ ಗೊಲ್ಲರಹಟ್ಟಿಯೊಂದರಲ್ಲಿ ಸೀರೆಗಳನ್ನು ಕಟ್ಟಿಕೊಂಡು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರು. ನಾನು ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಶೌಚಾಲಯಗಳನ್ನು ಮಂಜೂರು ಮಾಡಿದೆ.
ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣ ಪಡೆಯದಿದ್ದರೆ ಬದಲಾವಣೆ ತರಲು ಸಾಧ್ಯವಿಲ್ಲ. ಹೆಣ್ಣು ಗರಿಕೆ ಹುಲ್ಲಾಗಬೇಕು. ತುಳಿದಂತೆಲ್ಲಾ ಎದ್ದು ನಿಲ್ಲಬೇಕು. ಪ್ರತಿ ಗ್ರಾಮಗಳಲ್ಲೂ ಮಹಿಳಾ ಸಭೆಗಳಾಗಬೇಕು. ಅಲ್ಲಿ ಮಹಿಳೆಯರ ಸಮಸ್ಯೆ ಬಗೆಹರಿಸಬೇಕು. ಎಲ್ಲಿಯವರೆಗೆ ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರ ಬೆಳವಣಿಗೆ ಸಾಧ್ಯವಿಲ್ಲ. ಸರ್ಕಾರದ ಸೌಲಭ್ಯಗಳ ಅರಿವು ಪಡೆಯಿರಿ. ಮಹಿಳೆಯರ ಒಳ ಉಡುಪುಗಳು ಕಳಪೆ ಆಗಿದ್ದು ಗರ್ಭ ಕೋಶದ ಕ್ಯಾನ್ಸರ್ ಗೆ ಕಾರಣ ಆಗುತ್ತಿವೆ. ಎಲ್ಲವನ್ನು ಕೇಳ್ತೀವಿ ಎಲ್ಲವನ್ನು ಪ್ರಶ್ನೆ ಮಾಡ್ತೀವಿ, ಪಡ್ಕೋತೀವಿ ಎಂಬ ವಾಗ್ದಾನ ಮಾಡಿ ಅದರಂತೆ ನಡೆಯಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಪಿ. ಕೋದಂಡರಾಮಯ್ಯ ಮಾತನಾಡಿ ಯಾರದೋ ಬಲವಂತಕ್ಕಾಗಿ ಮಹಿಳೆಯರು ಒಪ್ಪಿಗೆ ಆಗದ ಆಚಾರಗಳನ್ನು ಅನುಸರಿಸಬಾರದು. ಚಿತ್ರದುರ್ಗ ಮತ್ತು ತುಮಕೂರು ಭಾಗಗಳಲ್ಲಿ ಕಾಡುಗೊಲ್ಲರ ಹಲವು ಸಂಪ್ರದಾಯಗಳಿವೆ. ಹಟ್ಟಿಯ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಬದಲಾವಣೆ ತರಬೇಕು. ಗೊಲ್ಲರಹಟ್ಟಿಯ ಪೂಜಾರಿಗಳು, ಯಜಮಾನರು ಅಧಿಕ ಪ್ರಸಂಗ ತೋರಬಾರದು. ಮುಟ್ಟು ಹುಟ್ಟುಗಳನ್ನು ತೊರೆದು ಹಾಕಬೇಕು. ಇಂತಹವುಗಳನ್ನು ಮಹಿಳೆಯರು ವಿರೋಧಿಸಬೇಕು. ಕಾಡುಗೊಲ್ಲರು ಇನ್ನಿತರ ಸಮಾಜಗಳ ಜೊತೆ ಬೆರೆತು ಮುಂದೆ ಬರಬೇಕಿದೆ. ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ತಾಯಿಯೇ ತನ್ನ ಅಪ್ರಾಪ್ತೆ ಮಗಳಿಗೆ ಮದುವೆ ಮಾಡಲು ಯತ್ನಿಸಿದಾಗ ಪ್ರತಿರೋಧ ವ್ಯಕ್ತಪಡಿಸಿ ಮದುವೆ ತಡೆದ ಬಾಲಕಿ ಪ್ರಶಂಸೆಗೆ ಅರ್ಹಳು ಎಂದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ ಬುಡಕಟ್ಟು ಸಂಸ್ಕೃತಿಯ ಜೊತೆಗೆ ಆಧುನಿಕ ರೀತಿಯ ಜೀವನ ಶೈಲಿಯೂ ಇದೆ. ಬುಡಕಟ್ಟು ಸಂಸ್ಕೃತಿ ಎಂದು ಬರೀ ಬೋರ್ಡ್ ಹಾಕಿಕೊಂಡಿದ್ದೇವೆ. ಆದರೆ ಮಹಿಳೆಯರ ಬೆಳವಣಿಗೆಯ ಪಾಲಿನಲ್ಲಿ ಸ್ವಲ್ಪ ವ್ಯತ್ಯಾಸ ಆಗುತ್ತಿದೆ.ಅದನ್ನು ಸರಿಪಡಿಸಬೇಕು. ಮಹಿಳೆಯರು ಸಬಲರಾಗುತ್ತಿದ್ದು ಇನ್ನಷ್ಟು ಅವರ ಬೆಳವಣಿಗೆಗೆ ಸಹಕಾರ ನೀಡಬೇಕಿದೆ ಎಂದರು.

ವಾಣಿ ಕಾಲೇಜು ಪ್ರಾಂಶುಪಾಲ ಪ್ರೊ. ಮಹೇಶ್, ಸಖಿ ಟ್ರಸ್ಟ್ ನಿರ್ದೇಶಕಿ ಭಾಗ್ಯಲಕ್ಷ್ಮಿ, ತಳ ಸಮುದಾಯಗಳ ಅಧ್ಯಯನ ಕೇಂದ್ರ ಶಿಕ್ಷಣ ಸಂಸ್ಥೆ ಚಂದ್ರಶೇಖರ್, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಮುತ್ತಯ್ಯ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ಕೆಎಂಎಫ್ ಮಾಜಿ ನಿರ್ದೇಶಕ ಸಿ. ವೀರಭದ್ರ ಬಾಬು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮಿಕಾಂತ್, ಲಕ್ಷ್ಮೀಪತಿ, ಡಾ. ರಘುಪತಿ, ತಹಸೀಲ್ದಾರ್ ರಾಜೇಶ್ ಕುಮಾರ್, ಮನವಿ ಟ್ರಸ್ಟ್ ಅಧ್ಯಕ್ಷೆ ಮಾನಸ, ಮಹಿಳಾ ಇಲಾಖೆ ಅಧಿಕಾರಿ ವಿಜಯಕುಮಾರ್, ಟ್ರಸ್ಟ್ ಸದಸ್ಯರಾದ
ಅನ್ನಪೂರ್ಣ, ಅನುಸೂಯ, ಕೂನಿಕೆರೆ ರಾಮಣ್ಣ, ಸಂಪತ್ ಕುಮಾರ್, ಸುನಂದಮ್ಮ, ಚಿತ್ತರಾಜ್, ರಾಜಣ್ಣ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment