ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಮಾನವನ ದೇಹಕ್ಕೆ ಅಗತ್ಯ ಆಹಾರವು ಬಾಯಿಯ ಮೂಲಕವೇ ಸಾಗಬೇಕಾಗುತ್ತದೆ. ಇಡೀ ದೇಹಕ್ಕೆ ದ್ವಾರ ಬಾಗಿಲಂತೆ ಇರುವ ಬಾಯಿಯ ಆರೋಗ್ಯವು ಸದಾ ಕಾಲ ಉತ್ತಮ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಅದರ ಆರೋಗ್ಯವು ಅನಾರೋಗ್ಯಕರ ಸ್ಥಿತಿಗೆ ತಲುಪಿದಾಗ ಅದು ಕೆಲವು ಲಕ್ಷಣದ ಮೂಲಕ ತೋರ್ಪಡಿಸುತ್ತದೆ. ಅದನ್ನು ನಾವು ನಿರ್ಲಕ್ಷ ಮಾಡದೆ ಅದರ ಕಡೆಗೆ ಗಮನ ಹರಿಸಬೇಕಾಗುತ್ತದೆ.ಆಗ ಮಾತ್ರವೇ ನಾವು ಉತ್ತಮ ಆಹಾರವನ್ನು ಉತ್ತಮ ರೀತಿಯಲ್ಲಿ ಸೇವಿಸಲು ಆಗುತ್ತದೆ.

ಉರಿಬಾಯಿ (burning mouth )ಎಂದರೆ ಸಾಮಾನ್ಯವಾಗಿ ಸುಮ್ಮನಿದ್ದಾಗ ಅಥವಾ ಕೆಲವೊಮ್ಮೆ ಊಟ ಮಾಡುವಾಗ ಬಾಯಿಯ ಒಳಪದರವು ಸೇರಿದಂತೆ ಬಾಯಿಯ ಒಳಗಿರುವ ನಾಲಿಗೆ, ತುಟಿ, ವಸಡುಗಳಲ್ಲಿ ಉರಿಯುವ ಲಕ್ಷಣವಾಗಿ ತೀವ್ರವಾಗಿ ಕಂಡುಬರುವುದು ಹಾಗೂ ಊಟ ಮಾಡಲು ಆಗದೆ ಇರುವುದು. ಕೆಲವೊಮ್ಮೆ ತಣ್ಣಗಿನ ಹಾಗೂ ಮೊಸರು ಮಜ್ಜಿಗೆ…ಇಂತಹ ಆಹಾರಗಳಿಗೂ ಉರಿ ಬರುವುದು ಕೂಡ ಇದೇ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ. ನಾಲಿಗೆ ಮತ್ತು ಕೆನ್ನೆಯ ಒಳಭಾಗದಲ್ಲಿ ಹೆಚ್ಚಾಗಿ ಉರಿ ಕಂಡುಬಂದರೂ ಅಂಗಳ,ತುಟಿ,ವಸಡುಗಳಲ್ಲೂ ಕೂಡ ಆಗಾಗ ಉರಿ ಕಾಣಿಸಬಹುದು.
ಬಾಯಿಯ ಒಳಪದರದ ಮೇಲ್ಭಾಗವು ಸವೆದಾಗ,ಹಾನಿ ಉಂಟಾದಾಗ ಅಥವಾ ಅದರ ಕೆಳಗಿರುವ ನರಗಳಿಗೆ ಹಾನಿ ಉಂಟಾದಾಗ ಇದು ಹೆಚ್ಚಾಗಿ ಕಂಡು ಬರುತ್ತದೆ.
ಕಾರಣಗಳು:
* ಮುಖ್ಯವಾಗಿ ದೇಹದಲ್ಲಿ ರಕ್ತದ ಕೊರತೆ ಉಂಟಾಗಿರುವುದು,
* ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ, ವಿಟಮಿನ್ ಬಿ 12 ಹಾಗೂ ಕಬ್ಬಿಣಾಂಶದ ಕೊರತೆ, ಸಕ್ಕರೆ ಕಾಯಿಲೆ.
* ಹತ್ತಾರು ವಿವಿಧ ದೈಹಿಕ ಸಮಸ್ಯೆಗಳಿಗೆ,ಮಾನಸಿಕ ಸಮಸ್ಯೆಗಳಿಗೆ ಮಾತ್ರೆ ಸೇವಿಸುವಾಗ.
* ಹಲ್ಲು ಸೆಟ್ಟು ತೀರಾ ಹಳೆಯದಾಗಿದ್ದರೂ ಅದನ್ನು ಬಳಸುತ್ತಿರುವಾಗ.
* ಅಲರ್ಜಿ ಉಂಟಾದಾಗ.
* ಗುಟ್ಕಾ ಎಲೆ -ಅಡಿಕೆ ತಂಬಾಕು ಸೇವನೆ ಮಾಡುವವರಲ್ಲಿ.
* ದುಶ್ಚಟಗಳಿಂದ ಉಂಟಾಗುವ ಬಾಯಿಯ ವಿವಿಧ ಸಮಸ್ಯೆಗಳಾದ ಕ್ಯಾಂಡಿಡಿಯಸಿಸ್, ,ಏರಿತ್ರೋಪ್ಲೇ ಕಿಯಾ. ಲೀವ್ಕೋಪ್ಲೇಕೀಯ.. ಮುಂತಾದ ಸಮಸ್ಯೆಗಳು,ಬಾಯಿಯ ಹುಣ್ಣು.
ಲಕ್ಷಣಗಳು:
* ಬಾಯಿಯ ಒಳಭಾಗದಲ್ಲಿ ಉರಿ ಬರುವುದು, ಇದು ದಿನದ ಸಮಯದಲ್ಲಿ ಇದ್ದು ರಾತ್ರಿಯ ಸಮಯದಲ್ಲಿ, ಮಲಗಿರುವಾಗ ಇರುವುದಿಲ್ಲ.
* ಬಾಯಿಯಲ್ಲಿ ಕಡಿಮೆ ಜೊಲ್ಲಿನ ಸ್ರವಿಕೆ.
* ಬಾಯಿ ಒಣಗುವಿಕೆ.ಕೆಲವೊಮ್ಮೆ ಸತತವಾಗಿ ಉರಿ ಕಾಣಿಸುವುದು ಅಥವಾ ಬಿಟ್ಟು ಬಿಟ್ಟು ಬರುವುದು.
* ಮಾನಸಿಕ ಒತ್ತಡಕ್ಕೆ ಇದು ಮತ್ತಷ್ಟು ಹೆಚ್ಚಾಗುತ್ತದೆ.
* ಬಾಯಿಯ ಅಂಚುಗಳಲ್ಲಿ ಬಿರುಕು,ಬಾಯಿಯ ಚರ್ಮದಲ್ಲಿ ಒಡಕು, ಬಾಯಿ ಹುಣ್ಣಾಗಿ ಕೆಂಪಗಾಗಿ ಇರುವುದು,
ಪರಿಹಾರಗಳೇನು:
* ತಣ್ಣೀರು ಆಗಾಗ ಕುಡಿಯುವುದು, ಮೊಸರು, ಮಜ್ಜಿಗೆ ಸೇವನೆ. ಬಾಯಿಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು.
* ದುಶ್ಚಟಗಳನ್ನು ತ್ಯಜಿಸುವುದು,ಎಂದಿಗೂ ಗುಟ್ಕ ಎಲೆ ಅಡಿಕೆ ತಂಬಾಕು ಸೇವನೆ ಮಾಡದಿರುವುದು.
* ಮದ್ಯಪಾನ,ಧೂಮಪಾನ ಮಾಡದಿರುವುದು.
* ಕಾರಣಗಳನ್ನು ತಿಳಿದು ಅದನ್ನು ಪಾಲಿಸುವುದು.
* ಮಧುಮೇಹ ನಿಯಂತ್ರಣ ಮಾಡುವುದು ಮಾನಸಿಕ ರೋಗಗಳಿಂದ ಹೊರಬರಲು ಧ್ಯಾನ, ಮೌನ,ವ್ಯಾಯಾಮ, ಪ್ರಾಣಾಯಾಮ ಮಾಡುವುದು.
* ಮಸಾಲೆಯುಕ್ತ ಆಹಾರಗಳ ಸೇವನೆ ಕನಿಷ್ಠ ಗೊಳಿಸುವುದು.
* ವೈದ್ಯರ ಸಲಹೆ ಮೇರೆಗೆ ಅದನ್ನು ಸರಿಪಡಿಸಿಕೊಳ್ಳಲು ಚಿಕಿತ್ಸೆ ಸೂಚನೆ ಪಡೆದುಕೊಳ್ಳುವುದು.
* ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು.
* ಉರಿ ತೀವ್ರವಾಗಿದ್ದರೆ, ನುಂಗಲು ತೊಂದರೆಯಾದರೆ, 10-14 ದಿನಗಳಿಗಿಂತ ಹೆಚ್ಚು ಕಾಲ ಬಾಯಿಯ ಉರಿಯು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಬೇಕು.
* ಬಾಯಿಯ ಹುಣ್ಣು ಉರಿ ಕಮ್ಮಿಯಾಗಲು ವಿಟಮಿನ್ ಮಾತ್ರೆ ಸೇವನೆ.
* ವೈದ್ಯರ ಸಲಹೆ ಮೇರೆಗೆ ಸ್ಟಿರೈಡ್ ಮಾತ್ರೆ ಇಂಜೆಕ್ಷನ್ ಸೇವನೆ.





















